Monday, September 16, 2024
Google search engine
Homeಮುಖಪುಟಸೋಮಣ್ಣಗೆ ಟಿಕೆಟ್ ಕೊಡಬಾರದು - ಸಿದ್ದಗಂಗಾ ಆಸ್ಪತ್ರೆಯ ಡಾ.ಪರಮೇಶ್ - ಹೈಕಮಾಂಡ್ ತೀರ್ಮಾನ ಎಂದ ಸೋಮಣ್ಣ

ಸೋಮಣ್ಣಗೆ ಟಿಕೆಟ್ ಕೊಡಬಾರದು – ಸಿದ್ದಗಂಗಾ ಆಸ್ಪತ್ರೆಯ ಡಾ.ಪರಮೇಶ್ – ಹೈಕಮಾಂಡ್ ತೀರ್ಮಾನ ಎಂದ ಸೋಮಣ್ಣ

ತುಮಕೂರಿನಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿದ ಸಿದ್ದಗಂಗಾ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ, ಬಿಜೆಪಿ ಜಿಲ್ಲಾ ಘಟಕದ ಖಜಾಂಚಿ ಹಾಗೂ ಆರ್.ಎಸ್.ಎಸ್ ಮುಖಂಡ ಡಾ.ಪರಮೇಶ್, ಮಾಜಿ ಸಚಿವ ವಿ.ಸೋಮಣ್ಣ ಅವರಿಗೆ ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಟಿಕೆಟ್ ಕೊಡಬಾರದು ಎಂದು ಹೇಳಿದ್ದಾರೆ.

ವಿ.ಸೋಮಣ್ಣ ತುಮಕೂರಿನ ಸಿದ್ದಗಂಗಾ ಮಠಕ್ಕೆ ಬರುವ ಮೊದಲೇ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಡಾ.ಪರಮೇಶ್, ಟಿಕೆಟ್ ನೀಡುವ ಸಂಬಂಧ ಹೈಕಮಾಂಡ್ ಗೆ ತಲುಪಿದ ನಾಲ್ವರ ಹೆಸರಲ್ಲಿ ನನ್ನ ಹೆಸರು ಮೊದಲಿದೆ ಎಂದು ತಿಳಿಸಿದರು.

ನಾನು ಆರ್.ಎಸ್.ಎಸ್.ಪಾಠ ಶಾಲೆಯಲ್ಲಿ ಕಲಿತವನು. ಹಾಗಾಗಿ ನನಗೆ ಟಿಕೆಟ್ ಫೈನಲ್ ಆಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಡಾ.ಪರಮೇಶ್, ಸಿದ್ದಗಂಗಾ ಶ್ರೀಗಳ ಆಶೀರ್ವಾದ ನನಗಿದೆ. ಸ್ವಾಮಿಗಳ ನಿರ್ದೇಶನದಂತೆ ನಾನು ಆಕಾಂಕ್ಷಿಯಾಗಿದ್ದೇನೆ. ವಿ.ಸೋಮಣ್ಣ ವಲಸಿಗರು. ಹಾಗಾಗಿ ಅವರಿಗೆ ಟಿಕೆಟ್ ಕೊಡಬಾರದು ಎಂದು ತಾಕೀತು ಮಾಡಿದರು.

ಸ್ಥಳೀಯರಿಗೆ ಟಿಕೆಟ್ ಕೊಡಬೇಕು ಎಂದು ಜಿಲ್ಲೆಯ ಮುಖಂಡರು ಹೈಕಮಾಂಡ್ ಗೆ ತಿಳಿಸಿದ್ದೇವೆ ಎಂದು ಹೇಳಿದ ಪರಮೇಶ್, ಮಾಧುಸ್ವಾಮಿ ಬಳಿಕ ಮಾಜಿ ಸಚಿವ ವಿ.ಸೋಮಣ್ಣ ಅವರ ವಿರುದ್ಧ ವಲಸಿಗ ಅಸ್ತ್ರವನ್ನು ಪ್ರಯೋಗಿಸಿದವರಲ್ಲಿ ಎರಡನೆಯವರಾಗಿದ್ದಾರೆ.

ಹೈಕಮಾಂಡ್ ತೀರ್ಮಾನವೇ ಅಂತಿಮ:

ಇದೇ ವೇಳೆ ಮಾಜಿ ಸಚಿವ ವಿ. ಸೋಮಣ್ಣ, ಸಿದ್ದರಬೆಟ್ಟದ ಸ್ವಾಮೀಜಿ, ಎಲೆರಾಂಪುರದ ಹನುಮಂತನಾಥ ಸ್ವಾಮೀಜಿ ಮತ್ತು ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಸಿದ್ದಲಿಂಗ ಸ್ವಾಮಿಗಳ ಆಶೀರ್ವಾದ ಪಡೆದಿದ್ದಾರೆ.

ಸಿದ್ದಗಂಗಾ ಮಠದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ವಿ.ಸೋಮಣ್ಣ, ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಟಿಕೆಟ್ ನೀಡುವುದು ಹೈಕಮಾಂಡ್ ತೀರ್ಮಾನವೇ ಅಂತಿಮವಾಗಿದೆ ಎಂದು ಡಾ.ಪರಮೇಶ್ ಅವರಿಗೆ ಟಾಂಗ್ ನೀಡಿದ್ದಾರೆ.

ಹಾಲಿ ಸಂಸದ ಜಿ. ಎಸ್ ಬಸವರಾಜು ನಮಗೆಲ್ಲಾ ಪೈಲಟ್ ಇದ್ದಂತೆ, ಅವರು ನಮಗೆ ಕ್ಯಾಪ್ಟನ್ ಇದ್ದಂಗೆ. ನನಗೆ 45 ವರ್ಷದ ಹಿಂದೆ ದೆಹಲಿ ತೋರಿಸಿದ್ದು ಅವರೇ. ಹಾಗಾಗಿ ಅವರೇ ನನಗೆ ಪೈಲಟ್ ಎಂದು ಹೇಳಿದ್ದಾರೆ.

ಹೈಕಮಾಂಡ್ ಟಿಕೆಟ್ ಕೊಟ್ಟರೆ ನಾನು ಸ್ಪರ್ಧಿಸುತ್ತೇನೆ. ಲೋಕಸಭೆಗೆ ಟಿಕೆಟ್ ನೀಡುವಂತೆ ನನ್ನ ಒತ್ತಾಯವೇನೂ ಇಲ್ಲ. ಟಿಕೆಟ್ ನೀಡುವಂತೆ ಮನವಿ ಮಾಡುತ್ತೇನೆ ಎಂದು ತಿಳಿಸಿದ್ದಾರೆ.

ಸ್ಥಳೀಯರಲ್ಲ ಎಂಬ ಮಾಧುಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ವಿ.ಸೋಮಣ್ಣ, ಮಾಧುಸ್ವಾಮಿ ಹಿರಿಯ ನಾಯಕರು, ಬುದ್ದಿವಂತರು, ವಕೀಲರು. ಸ್ಥಳೀಯರು ಎನ್ನುವುದಕ್ಕಿಂತ ಈ ದೇಶ ನರೇಂದ್ರ ಮೋದಿ ಅವರ ಆಡಳಿತ ಬಯಸುತ್ತಿದೆ. ಮೋದಿ ಅವರು ಗುಜರಾತಿನಿಂದ ವಾರಣಾಸಿಗೆ ಬಂದು ಸ್ಪರ್ಧಿಸಿದ್ದಾರೆ. ಹಾಗಾಗಿ ಮಾಧುಸ್ವಾಮಿ ಅವರ ಭಾವನೆಗೆ ನನ್ನ ಅಭ್ಯಂತರವಿಲ್ಲ ಎಂದು ತಿರುಗೇಟು ನೀಡಿದರು.

ತುಮಕೂರು ಕ್ಷೇತ್ರ ಯಾವ ಪಕ್ಷಕ್ಕೆ ಮೀಸಲು ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಸೋಮಣ್ಣ, ತುಮಕೂರು ಯಾವತ್ತೂ ಬಿಜೆಪಿಯ ಕ್ಷೇತ್ರವಾಗಿದೆ. ನಾವು ಬಿಜೆಪಿಯವರು ನಮ್ಮ ಹಕ್ಕನ್ನು ಪ್ರತಿಪಾದಿಸುತ್ತಿವಿ. ಈ‌ ಬಗ್ಗೆ ಎಲ್ಲಾ ಚರ್ಚೆ ಆಗಿದೆ ಎಂದು ಹೇಳಿದ್ದಾರೆ.

ನನಗೂ ತುಮಕೂರಿಗೂ 45 ವರ್ಷದ ಅವಿನಾಭಾವ ಸಂಬಂಧ ಇದೆ. ನನಗೆ ಹೈಕಮಾಂಡ್ ಟಿಕೆಟ್ ಕೊಟ್ಟು ತುಮಕೂರಿನಲ್ಲಿ ಸ್ಪರ್ಧಿಸಿ ಎಂದರೆ ಸ್ಪರ್ಧಿಸುತ್ತೇನೆ. ಬೇರೆ ಕಡೆ ಸ್ಪರ್ಧಿಸಿ ಎಂದರೂ ಸ್ಪರ್ಧಿಸುತ್ತೇನೆ ಎಂದು ತಿಳಿಸಿದರು.

ಕಳೆದ ಬಾರಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಸೋತಿರಬಹುದು. ಒಂದೊಂದು ಬಾರಿ ಒಂದೊಂದು ವಿಷಯ ಬರುತ್ತದೆ. ಈ ಬಾರಿ ಮೋದಿ ಅವರ ಅವಶ್ಯಕತೆ ಎಷ್ಟಿದೆ ಎನ್ನುವುದನ್ನು ಜನರು ಅರ್ಥ ಮಾಡಿಕೊಂಡಿದ್ದಾರೆ. ದೇವೇಗೌಡರು ನನಗೆ ರಾಜಕೀಯದ ಅಕ್ಷರ ಕಲಿಸಿದವರು. ನಾನು ಇಷ್ಟು ಆಕ್ಟೀವ್ ಇರಲು ದೇವೇಗೌಡರು ಕಾರಣ. ಜೆಡಿಎಸ್ ಬಿಜೆಪಿ ಮೈತ್ರಿ ಮಾಡಿಕೊಂಡಿವೆ. ಮೋದಿ ಪ್ರಧಾನಿ ಆಗಬೇಕು ಎನ್ನುವುದು ದೇವೇಗೌಡ ಆಶಯವೂ ಆಗಿದೆ ಎಂದು ಜೆಡಿಎಸ್ ಬೆಂಬಲವನ್ನು ನಿರೀಕ್ಷಿಸಿದ್ದಾರೆ.

ನನಗೆ ಗೋವಿಂದರಾಜ ನಗರ ಟಿಕೆಟ್ ಕೊಟ್ಟಿದ್ದರೆ ನಾನು ಇಲ್ಲಿಗೆ ಬರುತ್ತಿರಲಿಲ್ಲ. ಗೋವಿಂದರಾಜ ನಗರ ಅಭಿವೃದ್ಧಿ ಆಗಿದ ಹಾಗೆ ತುಮಕೂರು ಯಾಕೆ ಅಭಿವೃದ್ಧಿ ಆಗಬಾರದು. ನಾನೊಬ್ಬ ಕೆಲಸಗಾರ. ನನ್ನ ಅಡ್ಡ ಕಟ್ಟಿಹಾಕಿದರೂ ನಾನು ನಿಲ್ಲಲ್ಲ. ನನ್ನ ಅರ್ಹತೆ ನೋಡಿ ಟಿಕೆಟ್ ಕೊಟ್ಟರೆ ಮಾಧುಸ್ವಾಮಿ ಅವರನ್ನು ಜೊತೆ ಸೇರಿಸಿಕೊಂಡು ಹೋಗುತ್ತೇನೆ ಎಂದು ತುಮಕೂರಿನಲ್ಲಿ ಸ್ಪರ್ಧಿಸುವ ಆಶಯ ವ್ಯಕ್ತಪಡಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular