ತುಮಕೂರು ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಕ್ವಿಂಟಾಲ್ ಕೊಬ್ಬರಿಗೆ 15 ಸಾವಿರ ನೀಡುವಂತೆ ಒತ್ತಾಯಿಸಿ ಕಳೆದ 40 ದಿನಗಳಿಂದ ತೆಂಗು ಬೆಳೆ ರೈತರು ನಡೆಸುತ್ತಿದ್ದ ಧರಣಿ ಸತ್ಯಾಗ್ರಹವನ್ನು ಹಿಂಪಡೆಯಲಾಗಿದೆ ಎಂದು ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಧ್ಯಕ್ಷ ಧನಂಜಯ ಆರಾಧ್ಯ ತಿಳಿಸಿದ್ದಾರೆ.
ಕೊಬ್ಬರಿಗೆ ಬೆಂಬಲ ಬೆಲೆ ಹೆಚ್ಚಿಸುವಂತೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ, ಪಂಜಿನ ಮೇರವಣಿಗೆ, ಟ್ರಾಕ್ಟರ್ ರ್ಯಾಲಿ ಮತ್ತು ತುಮಕೂರು ನಗರ ಬಂದ್ ನೆಡೆಸಿ ಜಿಲ್ಲಾಡಳಿತ ಮತ್ತು ಸರ್ಕಾರದ ಗಮನವನ್ನು ಸೆಳೆಯಲು ಪ್ರಯತ್ನಿಸಿದರೂ ಸಹ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ಎಂ.ಎಸ್.ಪಿ ಬೆಲೆ 12 ಸಾವಿರ, ರಾಜ್ಯ ಸರ್ಕಾರ 3 ಸಾವಿರ ರೂ ಪ್ರೋತ್ಸಾಹಧನ ನೀಡಲು ಆಗ್ರಹಿಸಿ ಅಹೋರಾತ್ರಿ ಧರನಿ ನಡೆಸಿದೆವು. ಆದರೆ ರಾಜ್ಯ ಸರ್ಕಾರ ಕೇವಲ 1500 ರೂಗಳ ಪ್ರೋತ್ಸಾಹ ಧನ ಹೆಚ್ಚಿಸಿದ್ದು ಬಿಟ್ಟರೆ ಏನನ್ನೂ ಮಾಡಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅತಿ ಹೆಚ್ಚು ತೆಂಗು ಬೆಳೆಯುವ ತುಮಕೂರು ಜಿಲ್ಲೆಯಲ್ಲಿ ನಾಫೆಡ್ ಮೂಲಕ ಖರೀದಿಗೆ ಸರಿಯಾಗಿ ನೋಂದಣಿ ಮಾಡಿಕೊಳ್ಳಲಿಲ್ಲ. ಇದರಿಂದ ರೈತರಿಗೆ ಅನ್ಯಾಯವಾಗಿದೆ. ಆಕ್ರಮ ನೊಂದಣಿಯನ್ನು ಗುರುತಿಸಿ ಸೂಕ್ತ ಕ್ರಮ ವಹಿಸಿ ತುರ್ತಾಗಿ ಕೊಬ್ಬರಿ ಖರೀದಿ ಪ್ರಕ್ರಿಯೆಯಲ್ಲಿ ತೊಡಗಬೇಕೆಂದು ಒತ್ತಾಯಿಸಿದ್ದಾರೆ.
ಈ ಮೇಲಿನ ಬೇಡಿಕೆಗಳನ್ನು ಇಟ್ಟುಕೊಂಡು ಧರಣಿ ನಡೆಸಿದರೂ ಸರ್ಕಾರಗಳು ಸರಿಯಾಗಿ ಸ್ಪಂದಿಸಲಿಲ್ಲ. ಇದರಿಂದ ಬೇಸತ್ತು 40 ದಿನಗಳ ಅಹೋರಾತ್ರಿ ಸತ್ಯಾಗ್ರಹವನ್ನು ಅಂತ್ಯಗೊಳಿಸಿ ರೈತರ ಉಳಿವಿಗಾಗಿ ಉಗ್ರ ಚಳುವಳಿ ಪ್ರಾರಂಭಿಸಲು ತೆಂಗು ಬೆಳೆ ರೈತರಿಗೆ ಕರೆ ನೀಡಿ ಅತೀ ಶೀಘ್ರದಲ್ಲಿಯೇ ಚಳುವಳಿಯನ್ನು ಪ್ರಾರಂಭಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮಾಧ್ಯಮಗೋಷ್ಠಿಯಲ್ಲಿ ರೈತ ಮುಖಂಡರಾದ ಹನುಮಂತರಾಯಪ್ಪ, ಸಣ್ಣಧರ್ಮೇಗೌಡ, ನಾಗಣ್ಣ, ಬಾಳೇಗೌಡ, ಚಂದ್ರೇಗೌಡ, ಮಧುಸೂದನ್, ಮೊಹಮ್ಮದ್‌ಗೌಸ್, ಉದಯ್ ಇದ್ದರು.