Friday, October 18, 2024
Google search engine
Homeಜಿಲ್ಲೆತುಮಕೂರು - ಮಗ ಸೊಸೆ ಗೃಹಬಂಧನದಲ್ಲಿಟ್ಟಿದ್ದ ವೃದ್ಧೆಯ ರಕ್ಷಣೆ

ತುಮಕೂರು – ಮಗ ಸೊಸೆ ಗೃಹಬಂಧನದಲ್ಲಿಟ್ಟಿದ್ದ ವೃದ್ಧೆಯ ರಕ್ಷಣೆ

ಕಳೆದ ಒಂದು ವರ್ಷದಿಂದ ಗೃಹ ಬಂಧನದಲ್ಲಿಟ್ಟು ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ತುಮಕೂರಿನ ಶಿರಾಗೇಟ್ ಬಳಿಯ ಬಡಾವಣೆಯೊಂದರಲ್ಲಿ 80 ವರ್ಷದ ವೃದ್ದೆಯನ್ನು ಆಸ್ತಿ ಹೊಡೆಯಲು ಆಕೆಯ ಪುತ್ರ ಮತ್ತು ಸೊಸೆ ಗೃಹ ಬಂಧನದಲ್ಲಿಟ್ಟಿದ್ದು ಕಾನೂನು ಸೇವಾ ಪ್ರಾಧಿಕಾರದ ನ್ಯಾಯಾಧೀಶರು ವೃದ್ಧೆಯನ್ನು ಬಂಧಮುಕ್ತಗೊಳಿಸಿದ್ದಾರೆ.

ಮನೆಯಿಂದ ಹೊರಗೆ ಬಾರದಂತೆ ಮನೆಯ ಒಳಗೆ ಕೂಡಿಹಾಕಿ ಹಿಂಸೆ ನೀಡಲಾಗುತ್ತಿತ್ತು ಎಂಬ ಆರೋಪಗಳು ಕೇಳಿ ಬಂದಿದ್ದವು. ಸೊಸೆಯಿಂದ ಕಿರುಕುಳ ಉಂಟಾಗುತ್ತಿರುವ ಬಗ್ಗೆ, ಸೊಸೆಯ ಮಾತು ಕೇಳಿಕೊಂಡು ಮಗನೇ ಕುಡಿದು ಬಂದು ಗಲಾಟೆ ಮಾಡುತ್ತಿರುವ ಬಗ್ಗೆ ವೃದ್ಧೆ ಕೆಲವರ ಬಳಿ ಅಳಲು ತೋಡಿಕೊಂಡಿದ್ದರು. ಪೊಲೀಸ್ ಇಲಾಖೆಗೆ ಬಡಾವಣೆಯ ಕೆಲವರು ದೂರು ಸಲ್ಲಿಸಿದ್ದರು ಎನ್ನಲಾಗಿದೆ.

ಈ ಮಾಹಿತಿ ಮಹಿಳಾ ಇಲಾಖೆ, ತುಮಕೂರು ನಗರ ಸಾಂತ್ವನ ಕೇಂದ್ರ, ಸಖಿ ಒನ್ ಸ್ಟಾಪ್ ಸೆಂಟರ್, ಹಿರಿಯ ನಾಗರಿಕರ ಸಹಾಯವಾಣಿಗೆ ಕಳೆದ ಐದು ದಿನಗಳ ಹಿಂದೆ ತಲುಪಿದ ನಂತರ ಕಾರ್ಯಪ್ರವೃತ್ತರಾದ ಸಿಬ್ಬಂದಿ ವಿಳಾಸ ಪತ್ತೆ ಮಾಡಿ ವೃದ್ಧೆಗೆ ಮಾನಸಿಕ ಕಿರುಕುಳ ಉಂಟಾಗುತ್ತಿರುವ ಬಗ್ಗೆ ಖಚಿತಪಡಿಸಿಕೊಂಡಿದ್ದಾರೆ.

ಇದಾದ ನಂತರ ಸದರಿ ನಿವಾಸಕ್ಕೆ ಭೇಟಿ ನೀಡಿದ ತಂಡ ವೃದ್ಧೆಯನ್ನು ರಕ್ಷಿಸಿ ಕರೆತರಲು ಪ್ರಯತ್ನಿಸಿತು. ಇದಕ್ಕೆ ವೃದ್ಧೆಯ ಸೊಸೆಯಿಂದ ತೀವ್ರ ಪ್ರತಿರೋಧ ವ್ಯಕ್ತವಾಗಿತ್ತು. ಈ ಸಂದರ್ಭದಲ್ಲಿ ನನ್ನನ್ನು ರಕ್ಷಿಸಿ ಕಾಪಾಡಿ ಎಂದು ವೃದ್ದೆ ಅಂಗಲಾಚಿದ್ದರಿಂದ ಮನೆಯಿಂದ ಹೊರಗೆ ಕರೆತಂದು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಎರಡು ದಿನಗಳ ಕಾಲ ಸಖಿ ಸೆಂಟರ್-ಜಿಲ್ಲಾಸ್ಪತ್ರೆಯಲ್ಲಿ ಆರೈಕೆ ಮಾಡಲಾಗಿತ್ತು.

ಕುಟುಂಬದಲ್ಲಿ ಕಿರುಕುಳ ಇರುವ ಕಾರಣ ವೃದ್ಧೆಯನ್ನು ಅಧಿಕೃತ ಆಶ್ರಯ ತಾಣಕ್ಕೆ ಸೇರಿಸುವ ಪ್ರಯತ್ನಗಳು ನಡೆದಿದ್ದವು. ಆದರೆ ಸದರಿ ವೃದ್ಧೆಯು ತನ್ನ ಮನೆಗೆ ಹೋಗಿ ಅಲ್ಲಿಯೇ ಇರುವುದಾಗಿಯೂ, ತನಗೆ ರಕ್ಷಣೆ ಕೊಡಿಸಬೇಕೆಂದು ಕೋರಿಕೊಂಡ ಹಿನ್ನೆಲೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವನ್ನು ಸಂಪರ್ಕಿಸಿ ಮಾಹಿತಿ ನೀಡಲಾಯಿತು.

ಕೂಡಲೇ ಕಾರ್ಯಾಚರಣೆಗಿಳಿದ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು, ನ್ಯಾಯಾಧೀಶರೂ ಆದ ನೂರುನ್ನಿಸಾ ಅವರು ಪೊಲೀಸರೊಂದಿಗೆ ವೃದ್ಧೆ ವಾಸವಿದ್ದ ಮನೆಗೆ ತೆರಳಿ ಅಲ್ಲಿದ್ದ ಕುಟುಂಬಸ್ಥರಿಗೆ ಎಚ್ಚರಿಕೆ ನೀಡಿ ಸದರಿ ವೃದ್ಧೆಯನ್ನು ಮನೆಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ವೃದ್ಧೆಗೆ ಯಾವುದೇ ರೀತಿಯ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿದಲ್ಲಿ ಕಾನೂನು ಪ್ರಕಾರ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ವೃದ್ಧೆಯನ್ನು ಮನೆಯಿಂದ ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸುವಲ್ಲಿ ಹಾಗೂ ಸಮಾಲೋಚನೆ ನಡೆಸಿ ಮತ್ತೆ ಕುಟುಂಬಕ್ಕೆ ಸೇರಿಸುವಲ್ಲಿ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನಿಸಾ, ತುಮಕೂರು ನಗರ ಸಾಂತ್ವನ ಕೇಂದ್ರದ ಸಮಾಜ ಕಾರ್ಯಕರ್ತೆ ಪಾರ್ವತಮ್ಮ ರಾಜಕುಮಾರ, ಯುವರಾಣಿ, ಸಖಿ ಕೇಂದ್ರದ ಸಮಾಲೋಚಕಿ ರಾಧಾಮಣಿ, ಶ್ವೇತ, ಹಿರಿಯ ನಾಗರಿಕ ಸಹಾವಾಣಿ ಕೇಂದ್ರದ ಲಕ್ಷ್ಮೀನಾರಾಯಣಶೆಟ್ಟಿ, ಮಹಿಳಾ ಇಲಾಖೆಯ ಸಂರಕ್ಷಣಾಧಿಕಾರಿ ಕಲ್ಪನಾ, ಕಾನೂನು ಸೇವಾ ಪ್ರಾಧಿಕಾರದ ಆಡಳಿತಾಧಿಕಾರಿ ನರಸಿಂಹಪ್ಪ, ಸಿದ್ದಾರ್ಥ ಸಮಾಜಕಾರ್ಯ ವಿಭಾಗದ ಅಭಿಲಾಶ್ ಮೊದಲಾದವರ ತಂಡ ಜಂಟಿಯಾಗಿ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular