Thursday, November 21, 2024
Google search engine
Homeಮುಖಪುಟಮಕ್ಮಲ್ ಟೋಪಿ ಹಾಕುವ ಚಾಳಿ ಮುಂದುವರಿಸಿದ ಕಾಂಗ್ರೆಸ್ ಸರ್ಕಾರ - ಎಚ್.ಡಿ.ಕುಮಾರಸ್ವಾಮಿ

ಮಕ್ಮಲ್ ಟೋಪಿ ಹಾಕುವ ಚಾಳಿ ಮುಂದುವರಿಸಿದ ಕಾಂಗ್ರೆಸ್ ಸರ್ಕಾರ – ಎಚ್.ಡಿ.ಕುಮಾರಸ್ವಾಮಿ

ರಾಜ್ಯದ ಕಾಂಗ್ರೆಸ್ ಸರಕಾರ ಮಕ್ಮಲ್ ಟೋಪಿ ಹಾಕುವ ತನ್ನ ಚಾಳಿ ಮುಂದುವರಿಸಿದೆ. ಗೌರವಾನ್ವಿತ ಸುಪ್ರಿಂ ಕೋರ್ಟ್ ಆದೇಶವನ್ನು ಕೇಂದ್ರ ಸರಕಾರ ಈಗಾಗಲೇ ಪಾಲಿಸಿದೆ. ಈ ಒತ್ತಡಕ್ಕೆ ಸಿಲುಕಿದ ರಾಜ್ಯ ಸರಕಾರ ಹಳೆ ಪಿಂಚಣಿ ಯೋಜನೆ ಬಗ್ಗೆ ಅರೆಬರೆ, ತರಾತುರಿ ಆದೇಶ ಹೊರಡಿಸಿದೆಯೇ ಹೊರತು, ಸರಕಾರಿ ನೌಕರರ ಮೇಲೆ ಪ್ರೀತಿ ಉಕ್ಕಿ ಅಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಕೇಂದ್ರ ಸರಕಾರವು 1-4-2006ಕ್ಕೂ ಮೊದಲು ಅಧಿಸೂಚನೆಯಾಗಿ ನೇಮಕಗೊಂಡವರಿಗೆ OPS ಕೊಟ್ಟಿದೆ. ನಂತರ ಎಲ್ಲಾ ರಾಜ್ಯಗಳು ಈ ಆದೇಶ ಜಾರಿ ಮಾಡುತ್ತಿವೆ. ಕರ್ನಾಟಕದಲ್ಲೂ ಆಗಿದೆ ಅಷ್ಟೇ. ಇದರಲ್ಲಿ ಸರಕಾರದ ಘನಂದಾರಿ ಸಾಧನೆ ಏನೂ ಇಲ್ಲ ಎಂದು ಟೀಕಿಸಿದ್ದಾರೆ.

ಮೇ ತಿಂಗಳಲ್ಲಿಯೇ OPS ಜಾರಿ ಮಾಡುವ ಭರವಸೆ ನೀಡಿದ್ದರು ಸಿದ್ದರಾಮಯ್ಯ. 2023 ಮೇ 20ರಂದು ಪ್ರಮಾಣ ಸ್ವೀಕರಿಸಿದ ಅವರು, ಸರಕಾರ ಬಂದ ಎರಡೇ ದಿನಕ್ಕೆ ಈ ಬಗ್ಗೆ ನಿರ್ಧಾರ ಕೈಗೊಳ್ಳಬಹುದಿತ್ತು. ಅವರು ಚುನಾವಣಾ ಫಸಲು ತೆಗೆಯಲು ಹತ್ತು ತಿಂಗಳು ಹೊಂಚು ಹಾಕಿ ಕೂತರು. ಇದು ಚುನಾವಣೆ ಗಿಮಿಕ್ ಅಷ್ಟೇ, ಅನುಮಾನವೇ ಇಲ್ಲ ಎಂದು ಲೇವಡಿ ಮಾಡಿದ್ದಾರೆ.

2006 ಏಪ್ರಿಲ್‌ ಪೂರ್ವ ನೇಮಕಾತಿ ಅಧಿಸೂಚನೆಯಾಗಿ 2006ರ ನಂತರ ನೇಮಕಗೊಂಡ 13,000 ನೌಕರರು ಹಳೆ ಪಿಂಚಣಿ ವ್ಯಾಪ್ತಿಗೆ ಬರುತ್ತಾರೆ ಎಂದು ಈ ಆದೇಶ ಹೇಳುತ್ತದೆ. ಈ ಗ್ಯಾರಂಟಿ ಸರಕಾರಕ್ಕೆ ಈ ನಿರ್ಧಾರ ತೆಗೆದುಕೊಳ್ಳುವುದಕ್ಕೆ 10 ತಿಂಗಳೇ ಬೇಕಾಯಿತು! ಮಾತೆತ್ತಿದರೆ ಮೋದಿ ಅವರನ್ನು ನಿಂದಿಸುವ ಸಿದ್ದರಾಮಯ್ಯ ಅವರದ್ದು ಕೆಲಸದಲ್ಲಿ ಆಮೆವೇಗ ಎನ್ನುವುದಕ್ಕೆ ಇದೇ ಸಾಕ್ಷಿ ಎಂದು ಆರೋಪಿಸಿದ್ದಾರೆ.

ಎರಡು ನಾಲಿಗೆಯ ಕಾಂಗ್ರೆಸ್ ನವರು ನುಡಿದಂತೆ ನಡೆದಿದ್ದೇವೆ ಎಂದು ಕೊಚ್ಚಿಕೊಳ್ಳುತ್ತಾರೆ. ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಎಷ್ಟು ನೌಕರರಿಗೆ OPS ನೀಡುವುದಾಗಿ ಭರವಸೆ ನೀಡಿತ್ತು? ಆದರೆ, ಸರಕಾರದ ಆದೇಶದಿಂದ 13,000 ನೌಕರರಿಗೆ ಮಾತ್ರ OPS ಭಾಗ್ಯ ಕೊಡುತ್ತಿದೆ. ಉಳಿದವರು ಅಭಾಗ್ಯವಂತರೇ? ಹೋಗಲಿ, OPSಗೆ ಅರ್ಹ ನೌಕರರು ಎಷ್ಟಿದ್ದಾರೆ? ಸರಕಾರಕ್ಕೆ ಮಾಹಿತಿ ಇದೆಯಾ? ಎಂದು ಪ್ರಶ್ನಿಸಿದ್ದಾರೆ.

ಹೇಳುವುದು ಒಂದು, ಮಾಡುವುದು ಇನ್ನೊಂದು ಎನ್ನುವ ತನ್ನ ಪರಂಪರಾಗತ ವರ್ತನೆಯನ್ನು ಕಾಂಗ್ರೆಸ್ ಇನ್ನಾದರೂ ಬದಲಿಸಿಕೊಳ್ಳಬೇಕು. ಪ್ರಣಾಳಿಕೆ ಮತ್ತು ಬಜೆಟ್ ನಲ್ಲಿ ಭರವಸೆ ನೀಡಿದಂತೆ ಸರಕಾರಿ ನೌಕರರಿಗೆ OPS ಕೊಡಲೇಬೇಕು. ಅದನ್ನು ಬಿಟ್ಟು ನೌಕರರ ಕಣ್ಣಿಗೆ ಮಣ್ಣೆರಚುವುದು ಸರಿಯಲ್ಲ. ನೌಕರರ ಬದುಕನ್ನು ಚುನಾವಣೆ ಸರಕನ್ನಾಗಿ ಮಾಡಿಕೊಳ್ಳುವುದು ಹೇಯ ಎಂದು ಟೀಕಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular