Sunday, September 8, 2024
Google search engine
Homeಚಳುವಳಿಕೊಬ್ಬರಿ ಬೆಳೆಗಾರರ ಹಿತ ಮರೆತ ಕರ್ನಾಟಕದ ಸಂಸದರು - ಕೋಡಿಹಳ್ಳಿ ಚಂದ್ರಶೇಖರ್

ಕೊಬ್ಬರಿ ಬೆಳೆಗಾರರ ಹಿತ ಮರೆತ ಕರ್ನಾಟಕದ ಸಂಸದರು – ಕೋಡಿಹಳ್ಳಿ ಚಂದ್ರಶೇಖರ್

ಕೊಬ್ಬರಿಗೆ ಬೆಂಬಲ ಬೆಲೆ ಘೋಷಿಸಿ ನಾಫೆಡ್ ಮೂಲಕ ಖರೀದಿಸಬೇಕು ಎಂದು ಒತ್ತಾಯಿಸಿ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ನೂರಾರು ರೈತರು ತುಮಕೂರಿನ ಸ್ವಾತಂತ್ರ ಚೌಕದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಮೆರವಣಿಗೆ ನಡೆಸಿದರು.

ರೈತರ ಮೆರವಣಿಗೆ ಮಂಡಿಪೇಟೆ ರಸ್ತೆ, ಜೆಸಿ ರಸ್ತೆ ಮೂಲಕ ಟೌನ್‌ಹಾಲ್ ತಲುಪಿ, ಕೆಲ ಕಾಲ ಧರಣಿ ನಡೆಸಿದರು. ಬಳಿಕ ಶಿವಕುಮಾರ ಸ್ವಾಮೀಜಿ ಸರ್ಕಲ್, ಬಟವಾಡಿ ತಲುಪಿ, ತದನಂತರ ಕೋತಿ ತೋಪು ರಸ್ತೆಯ ಮೂಲಕ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಸಮಾವೇಶಗೊಂಡು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು, ಆಹೋರಾತ್ರಿ ಧರಣಿ ಮುಂದುವರೆದಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ರಾಜ್ಯದಿಂದ ಆಯ್ಕೆಯಾಗಿ ಹೋಗಿರುವ ಸಂಸದರ ನಿರ್ಲಕ್ಷದಿಂದಾಗಿ ಕರ್ನಾಟಕದಲ್ಲಿ ಕೇಂದ್ರ ಸರ್ಕಾರವೇ ತಮಿಳುನಾಡು ರೀತಿ ಕೊಬ್ಬರಿ ಖರೀದಿ ಕೇಂದ್ರ ತೆರೆಯಲು ನಿರ್ಲಕ್ಷ ತೋರಿದ್ದು, ರಾಜ್ಯದಿಂದ ಆಯ್ಕೆಯಾಗಿ ಹೋಗಿರುವ 28 ಜನ ಸಂಸದರು ಕೊಬ್ಬರಿ ಬೆಳೆಗಾರರ ಹಿತ ಮರೆತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಮಿಳುನಾಡಿನ ಸಂಸದರ ಒತ್ತಾಸೆಯ ಮೇರೆಗೆ ಕೇಂದ್ರ ಸರ್ಕಾರವೇ ನೇರವಾಗಿ ಬೆಂಬಲ ಬೆಲೆ ಖರೀದಿ ಕೇಂದ್ರಗಳನ್ನು ತೆರೆದು 88 ಸಾವಿರ ಮೆಟ್ರಿಕ್ ಟನ್ ಕೊಬ್ಬರಿ ಖರೀದಿಸಲು ಮುಂದಾಗಿದೆ. ಆದರೆ ಕರ್ನಾಟಕಕ್ಕೆ ಮಾತ್ರ ಈ ಅವಕಾಶ ದೊರೆತ್ತಿಲ್ಲ. ಕೊಬ್ಬರಿ ಬೆಂಬಲ ಬೆಲೆ ಕುರಿತು ನಮ್ಮ ರಾಜ್ಯದ ಒಬ್ಬನೇ ಒಬ್ಬ ಸಂಸದ ಸಹ ಮಾತನಾಡಿಲ್ಲ. ಇದು ರಾಜ್ಯದ ದುರಂತ ಎಂದರು.

ತಮಿಳುನಾಡಿನಲ್ಲಿ ಶೇ30ರಷ್ಟು ಮಿಲ್ಲಿಂಗ್ ಕೊಬ್ಬರಿಯನ್ನು ಖರೀದಿಸಲು ಅವಕಾಶ ನೀಡಿದೆ. ಆದರೆ ಕರ್ನಾಟಕಕ್ಕೆ ಮಾತ್ರ ಈ ಅವಕಾಶ ಲಭ್ಯವಾಗಿಲ್ಲ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವೂ ನಿಷ್ಕ್ರಿಯವಾಗಿದೆ. ಹಾಗೆಯೇ ಸಂಸದರ ಬಾಯಿಗಳ ಬಂದ್ ಆಗಿವೆ. ಹೊಳು ಕೊಬ್ಬರಿ ಖರೀದಿಗೆ ಅವಕಾಶ ನೀಡಿದರೆ, ಕರ್ನಾಟಕದಲ್ಲಿ ಇರುವ ಸಣ್ಣದು ಮತ್ತು ಸುಕ್ಕು ಕೊಬ್ಬರಿ ಎಲ್ಲವೂ ಸಹ ಮಾರಾಟವಾಗುತ್ತದೆ.ಈ ಅವಕಾಶ ಕಲ್ಪಿಸುವುದು ಸಂಸದರ ಜವಾಬ್ದಾರಿ.ಆದರೆ ನಮ್ಮ ಸಂಸದರೇನು ಕತ್ತೆ ಕಾಯುತ್ತಿದ್ದಾರಾ ಎಂದು ಪ್ರಶ್ನಿಸಿದರು.

ಕರ್ನಾಟಕಕ್ಕೆ ಕೇವಲ 62.62 ಸಾವಿರ ಮೆಟ್ರಿಕ್ ಟನ್ ಕೊಬ್ಬರಿ ಕೊಳ್ಳಲು ಮಾತ್ರ ಕೇಂದ್ರ ಅವಕಾಶ ನೀಡಿದೆ. ಆದರೆ ರಾಜ್ಯದಲ್ಲಿ ಒಂದು ವರ್ಷಕ್ಕೆ ಸುಮಾರು 11 ಲಕ್ಷ ಮೆ.ಟನ್ ಕೊಬ್ಬರಿ ಉತ್ಪಾದನೆಯಾಗುತ್ತದೆ. ಇದರಲ್ಲಿ 62.50 ಸಾವಿರ ಮೆಟ್ರಿಕ್ ಟನ್ ಖರೀದಿಸಿದರೆ ರೈತರು ಉಳಿದ ಕೊಬ್ಬರಿಯನ್ನು ಏನು ಮಾಡಬೇಕು. ಹಾಗಾಗಿ ಕನಿಷ್ಠ ವಾರ್ಷಿಕ 1.50 ಲಕ್ಷ ಮೆಟ್ರಿಕ್ ಟನ್ ಖರೀದಿ ಮಾಡಿದರೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.

ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆಂಕೆರೆ ಸತೀಶ್ ಮಾತನಾಡಿ, ಇಡೀ ನಾಡಿಗೆ ನಾಡೇ ಸಂಕ್ರಾತಿ ಹಬ್ಬ ಮಾಡುವಾಗ ರೈತ ಸಂಘದ ಸದಸ್ಯರು ಬೀದಿಯಲ್ಲಿ ಹೋರಾಟದಲ್ಲಿ ನಿರತರಾಗಿದ್ದೆವು. ಸೌಜನ್ಯಕ್ಕೂ ಜಿಲ್ಲೆಯ ಶಾಸಕರಾಗಲಿ, ಸಚಿವರಾಗಲಿ ಮಾತನಾಡಿಸಲಿಲ್ಲ. ಅವರಲ್ಲಿ ಮನುಷ್ಯತ್ವ ಅನ್ನುವುದು ಸತ್ತು ಹೋಗಿದೆ ಎಂದು ಆಕ್ರೋಶ ಹೊರಹಾಕಿದರು.

ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘದ ತುಮಕೂರು ಜಿಲ್ಲಾಧ್ಯಕ್ಷ ಧನಂಜಯ್ ಆರಾಧ್ಯ, ತಿಪಟೂರಿನ ಕೆ.ಟಿ.ಶಾಂತಕುಮಾರ್, ಹಾಸನ ಜಿಲ್ಲಾಧ್ಯಕ್ಷ ಬಾಬು, ಆನೆಕೆರೆ ಬಾಬು, ಮಲ್ಲಿಕಾರ್ಜುನಯ್ಯ, ನಾಗೇಂದ್ರ, ಶಿವರತ್ನಮ್ಮ, ಪ್ರಕಾಶ್, ಶಶಿಕಲಾ, ರಾಜಣ್ಣ ಪಾಲ್ಗೊಂಡಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular