ಸೌಹಾರ್ದತೆ ಸ್ಥಾಪಿತವಾಗಬೇಕಾದರೆ ಸಮಾನತೆ ಆಗಬೇಕಿದೆ. ಅವೆರಡಕ್ಕೂ ನಿಕಟ ಸಂಬಂಧ ಇದೆ. ಅವೆರಡೂ ಒಟ್ಟೊಟ್ಟಿಗೆ ಸಾಗಬೇಕಿದೆ ಎಂದು ನಾಡೋಜ ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದ್ದಾರೆ.
ಬೆಂಗಳೂರಿನ ಕಬ್ಬನ್ ಪಾರ್ಕ್ ನಲ್ಲಿರುವ ಎನ್.ಜಿ.ಒ ಹಾಲ್ ನಲ್ಲಿ ನಡೆದ ಸೌಹಾರ್ದತೆ ಮತ್ತು ಸಮಕಾಲೀನ ರಾಜ್ಯ ಸಮಾವೇಶದಲ್ಲಿ ಆಶಯ ನುಡಿಗಳನ್ನಾಡಿದ ಬರಗೂರು ರಾಮಚಂದ್ರಪ್ಪ ಸಮಾನತೆಯ ಸಮಾಜದ ನಿರ್ಮಾಣದಲ್ಲಿ ಸೌಹಾರ್ದತೆ ಪಾತ್ರ ದೊಡ್ಡದಿದೆ. ಪರಂಪರೆ ಎಂದರೆ ಆಚರಣೆ ಅಲ್ಲ, ಪರಂಪರ ನಿರಂತರ ಚಲನೆ ಹೊಂದಿದೆ. ಕೆಡುಕುಗಳನ್ನು ಕಳೆದುಕೊಂಡು ಒಳಿತು ಮತ್ತು ವಿಕಾಸವನ್ನು ಅದು ಹೊಂದಿದೆ ಎಂದರು.
ಕೋಮುವಾದ ಇದೆ. ಅದು ರಾಜಕೀಯ ಪಕ್ಷಗಳ ಮೇಲಾಟವಾಗಿದೆ. ಯಾರು ಯಾವಾಗ ಜಾತಿವಾದಿ ಆಗುತ್ತಾರೆ, ಯಾವಾಗ ಕೋಮುವಾದಿ ಆಗುತ್ತಾರೆ ಎಂದು ಹೇಳುವುದು ಕಷ್ಟವಾಗಿದೆ. ಕೋಮುವಾದ ವಿರೋಧಿಸುವವರು ಜಾತಿವಾದವನ್ನು ವಿರೋಧಿಸುತ್ತಾರಾ? ಎಂಬೆಲ್ಲ ಪ್ರಶ್ನೆಗಳಿವೆ. ಹಾಗಾಗಿ ಧ್ವೇಷ ಎಂಬುದಕ್ಕೆ ಕೊನೆ ಇಲ್ಲ ಎಂದರು.
ಪರಂಪರ ಪ್ರಜ್ಞೆ ಹಾಗೂ ಪ್ರಗತಿಪರ ಪ್ರಜ್ಞೆ ಒಟ್ಟಿಗೆ ಸಾಗಬೇಕಿದೆ. ಪಾಪ ಪ್ರಜ್ಞೆ ಮತ್ತು ಜಾಗೃತ ಪ್ರಜ್ಞೆಗಳು ಬಹಳ ಮಹತ್ವದ್ದಾಗಿದೆ. ಮೇಲ್ವರ್ಗದಲ್ಲಿ ಹುಟ್ಟಿ, ನನ್ನ ವರ್ಗ ಈ ಸಮಾಜಕ್ಕೆ ಅನ್ಯಾಯ ಮಾಡಿದೆ. ನಾನ ಅನ್ಯಾಯದ ವಿರುದ್ಧ ಹೋರಾಡಬೇಕು ಎಂಬ ಚೇತನಗಳು ಸಾಕಷ್ಟು ಇವೆ. ಇದು ಪಾಪ ಪ್ರಜ್ಞೆ, ನಾನು ತಳ ಸಮುದಾಯದಲ್ಲಿ ಹುಟ್ಟಿದ್ದೇನೆ, ನೋವನ್ನು ಅನುಭವಿಸಿದ್ದೇನೆ, ಇದರ ವಿರುದ್ಧ ನಿಲ್ಲಬೇಕು ಎಂಬುದು ಜಾಗೃತ ಪ್ರಜ್ಞೆಯಾಗಿದೆ ಎಂದು ಅಭಿಪ್ರಾಯಪಟ್ಟರು.
ಭಾರತ ಸೌಹಾರ್ದ ರಾಷ್ಟ್ರ, ಆದರೆ ಈಗ ಆ ಸೌಹಾರ್ದತೆಗೆ ಧಕ್ಕೆ ಬಂದಿದೆ. ರಾಮ ಪ್ರಸಾದ್ ಬಿಸ್ಮಿಲ್ , ಅಷ್ಪಕ್ ಉಲ್ಲಾ ಖಾನ್ ಸಾವಿತ್ರಿಬಾಯಿ ಪುಲೆ, ಫಾತೀಮಾ ಶೇಕ್ ಇವರು ಸೌಹಾರ್ದ ಭಾರತದ ಸಂಕೇತ. ಧರ್ಮದ ಕಾರಣಕ್ಕಾಗಿ ಉಂಟಾಗಿರುವ ಧ್ವೇಷವನ್ನು ವಿರೋಧಿಸೋಣ. ಪರಂಪರೆಯನ್ನು ಉಳಿಸಲು ಜನರ ನಡುವೆ ಸಾಗಬೇಕಿದೆ ಎಂದು ಸಲಹೆ ನೀಡಿದರು.
ನಿವೃತ್ತ ನ್ಯಾಯಮೂರ್ತಿ ಎಚ್ ಎನ್ ನಾಗಮೋಹನ ದಾಸ್ ಮಾತನಾಡಿ, ಎಲ್ಲಾ ಜಾತಿಯ ಜನ, ಎಲ್ಲಾ ಧರ್ಮದ ಜನ ಹೆಗಲಿಗೆ ಹೆಗಲು ಕೊಟ್ಟು ಬ್ರಿಟಿಷರ ವಿರುದ್ಧ ಹೋರಾಡಿದ್ದಾರೆ. ಹಿಂದೂ – ಮುಸ್ಲಿಂ – ಕ್ರಿಶ್ಚಿಯನ್ ಧರ್ಮದ ಜನ ರಕ್ತ ಸುರಿಸಿ, ಹುತಾತ್ಮರಾಗಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದಾರೆ. ಎಲ್ಲರೂ ಸ್ವತಂತ್ರವಾಗಿ ಭಾತೃತ್ವದಿಂದ ಬಾಳಬೇಕು ಎಂದು ಸಂವಿಧಾನ ಆಶಯ ಹೊಂದಿದೆ. ಆದರೆ ಈಗ ಧಕ್ಕೆ ಬಂದಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಈ ಧಕ್ಕೆ ಯಾರಿಂದ ಬಂದಿದೆ ಎಂದರೆ, ಭಯೋತ್ಪಾದನೆ, ಕೋಮುವಾದ, ಭ್ರಷ್ಟಾಚಾರ, ಮೂಲಭೂತವಾದ, ಅಪರಾಧೀಕರಣ ಇತ್ಯಾದಿಗಳಿಂದ ಬಂದಿದೆ. ಸ್ವಾತಂತ್ರ್ಯ, ಸಮಾನತೆ, ಭಾತೃತ್ವಕ್ಕೆ ಧಕ್ಕೆ ಬಂದಿದೆ. ಇದರ ಅರ್ಥವನ್ನು ಸರಿಯಾಗಿ ಅರ್ಥೈಸಿಕೊಳ್ಳಬೇಕಿದೆ. ಕೋಮುವಾದ ರಾರಾಜಿಸುತ್ತಿರುವ ಕಾರಣ ಹಿಂಸೆ ಹೆಚ್ಚಾಗಿದೆ. ನಂಬಿಕೆ ಸತ್ತು ಹೋಗಿದೆ. ಕಚ್ಚಾಟ ಹೆಚ್ಚಾಗಿದೆ ಇದರಿಂದಾಗಿ ಅಸಮಾನತೆ ಸೃಷ್ಟಿಯಾಗಿದೆ. ಇಂತಹ ಪ್ರದೇಶದಲ್ಲಿ ಸರ್ಕಾರ ಇಲ್ಲ ಎಂದೇ ನಾವು ನಿರ್ಧರಿಸಬೇಕಿದೆ ಎಂದರು.
ಸಾಹಿತಿ ಅರವಿಂದ ಮಾಲಗತ್ತಿ ಮಾತನಾಡಿ, ಅರಸೊತ್ತಿಗೆಯ ಕಾಲಘಟ್ಟದಲ್ಲಿ ಸರ್ವಧರ್ಮ ಸಹಿಷ್ಣುವಾಗಲು ದೊರೆ ಸಾಕಷ್ಟು ಶ್ರಮ ಹಾಕುತ್ತಿದ್ದ. ಆದರೆ ಈಗ ಆಡಳಿತ ನಡುಸುವ ರಾಜಕಾರಣಿಗಳಿಗೆ ಸರ್ವಧರ್ಮ ಸಹಿಷ್ಣುಗಳಾಗಲು ಸಿದ್ದರಿಲ್ಲ, ಅವರಿಗೆ ಆ ಪರಿಕಲ್ಪನೆಯು ಇಲ್ಲ ಎಂದರು.
ಬಹುತ್ವಕ್ಕೂ ಮಿತಿಗಳಿವೆ, ಅದು ಅಂತಿಮ ಅಲ್ಲ, ಅದಕ್ಕೂ ಜಡತ್ವ ಅಂಟಿಕೊಳ್ಳುವ ಅಪಾಯಗಳಿವೆ. ಇಂತಹ ಸನ್ನಿವೇಶದಲ್ಲಿ ಸೌಹಾರ್ದತೆಯನ್ನು ಉಳಿಸಲು ವಾಸ್ತವತಾವಾದ ಮೂಲಕ ಮನವರಿಕೆ ಮಾಡಬೇಕಿದೆ. ಪರಂಪರೆಯ ವಿಚಾರಗಳು, ವರ್ತಮಾನದ ವಿಚಾರಗಳು ಒಟ್ಟೊಟ್ಟಿಗೆ ಸಾಗಬೇಕಿದೆ. ಚಲನಶೀಲತೆಯ ಮೂಲಕ ಸೌಹಾರ್ದತೆಯಡಗೆ ಸಾಗೋಣ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಲಿಂ ಅಹ್ಮದ್, ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಎಚ್.ಎಲ್. ಪುಷ್ಪಾ, ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಯು.ಬಸವರಾಜ, ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಮರಳುಸಿದ್ದಪ್ಪ ವಹಿಸಿದ್ದರು. ವೇದಿಕೆಯಲ್ಲಿ ಮಾವಳ್ಳಿ ಶಂಕರ್, ಮೋಹನ್ ರಾಜ್, ಸಿದ್ದನಗೌಡ ಪಾಟೀಲ್, ಅಲ್ಲಮಪ್ರಭು ಬೆಟ್ಟದೂರು, ಸುಕನ್ಯಾ ಮಾರುತಿ, ಎಸ್ ವೈ ಗುರುಶಾಂತ, ಬಿ. ರಾಜಶೇಖರ್ ಮೂರ್ತಿ ಮೊದಲಾದವರು ಇದ್ದರು.