ಬೇಡಿಕೆಗಳ ಈಡೇರಿಕೆಗಾಗಿ 28 ದಿನಗಳಿಂದ ಪ್ರತಿಭಟನಾ ಧರಣಿ ನಡೆಸುತ್ತಿರುವ ಅತಿಥಿ ಉಪನ್ಯಾಸಕರು ಶೂ ಮತ್ತು ಚಪ್ಪಲಿಯನ್ನು ಪಾಲಿಷ್ ಮಾಡುವ ಮೂಲಕ ಸರ್ಕಾರದ ವಿರುದ್ಧ ತಮ್ಮ ಅಸಹನೆ ಹೊರಹಾಕಿದರು.
ತುಮಕೂರಿನ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನಾ ಧರಣಿ ನಡೆಸಿರುವ ಅತಿಥಿ ಉಪನ್ಯಾಸಕರನ್ನು ಶೂ ಮತ್ತು ಚಪ್ಪಲಿ ಪಾಲಿಷ್ ಮಾಡುವಷ್ಟರ ಮಟ್ಟಕ್ಕೆ ನಡೆಸಿಕೊಳ್ಳುತ್ತಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿ, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಅತಿಥಿ ಉಪನ್ಯಾಸಕರ ಸಂಘದ ತುಮಕೂರು ಜಿಲ್ಲಾ ಕಾರ್ಯಾಧ್ಯಕ್ಷ ಶಿವಣ್ಣ ತಿಮ್ಲಾಪುರ, ರಾಜ್ಯ ಸರ್ಕಾರ ಉಪನ್ಯಾಸಕರನ್ನು ಈ ಮಟ್ಟಕ್ಕೆ ನಡೆಸಿಕೊಳ್ಳಬಾರದು. ಸರ್ಕಾರದ ನಡೆ ಖಂಡನೀಯ. ಅತಿಥಿ ಉಪನ್ಯಾಸಕರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಿ ಸೇವೆ ಖಾಯಮಾತಿ ಮಾಡದಿದ್ದರೆ ಈ ರೀತಿಯ ಹೋರಾಟಗಳು ನಿರಂತರವಾಗಿ ನಡೆಯುತ್ತವೆ ಎಂದು ಎಚ್ಚರಿಕೆ ನೀಡಿದರು.
ಅತಿಥಿ ಉಪನ್ಯಾಸಕ ಶಶಿಧರ್ ಮಾತನಾಡಿ, ರಾಜ್ಯ ಸರ್ಕಾರಕ್ಕೆ 12 ಸಾವಿರ ಅತಿಥಿ ಉಪನ್ಯಾಸಕರ ಸಮಸ್ಯೆ ಅರಿತುಕೊಳ್ಳಲು ಮನಸ್ಸಿಲ್ಲ. ನಮ್ಮ ಈ ಸಮಸ್ಯೆ ದೊಡ್ಡದಾದರೆ ಇನ್ನು ರಾಜ್ಯದ ಸಮಸ್ಯೆಗಳನ್ನು ಸರ್ಕಾರ ಯಾವ ರೀತಿ ಪರಿಹರಿಸುತ್ತದೆ ಎಂದು ಪ್ರಶ್ನಿಸಿದರು.
ಕೇವಲ 12 ಸಾವಿರ ಅತಿಥಿ ಉಪನ್ಯಾಸಕರ ಸೇವೆ ಖಾಯಮಾತಿ ಸಮಸ್ಯೆಯನ್ನು ಒಂದು ತಿಂಗಳಿನಿಂದ ಬಗೆಹರಿಸದೆ ನಮ್ಮನ್ನು ಬೀದಿಯಲ್ಲಿ ಬಿಟ್ಟು ವಿದ್ಯಾರ್ಥಿಗಳನ್ನು ತರಗತಿ ಇಲ್ಲದೆ ಅನಾಥರನ್ನಾಗಿ ಮಾಡುತ್ತಿರುವುದು ರಾಜ್ಯ ಸರ್ಕಾರಕ್ಕೆ ಶೋಭೆ ತರುವುದಿಲ್ಲ ಎಂದರು.
ಅತಿಥಿ ಉಪನ್ಯಾಸಕರ ಸಂಘದ ತುಮಕೂರು ಜಿಲ್ಲಾಧ್ಯಕ್ಷ ಡಾ. ಧರ್ಮವೀರ ಮಾತನಾಡಿ, ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ಪ್ರತಿಭಟನೆ ಮಾಡುತ್ತಾ ತಮ್ಮ ನ್ಯಾಯಯುತ ಬೇಡಿಕೆಯಾದ ಖಾಯಮಾತಿ ಮಾಡಬೇಕೆಂದು ಸರ್ಕಾರವನ್ನು ಒತ್ತಾಯಿಸುತಿದ್ದೇವೆ. ಆದರೆ ರಾಜ್ಯ ಸರ್ಕಾರ ಮಾತ್ರ ಯಾವುದೇ ಭರವಸೆಗಳನ್ನು ಕೊಡದೆ ಪ್ರಥಮ ದರ್ಜೆ ಕಾಲೇಜುಗಳಲ್ಲಿನ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಚಿಂತಿಸದೆ ಇರುವುದು ದುರ್ದೈವದ ಸಂಗತಿ. ತಕ್ಷಣ ಸರ್ಕಾರ ನಮ್ಮ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಡಾ. ಮಲ್ಲಿಕಾರ್ಜುನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.