ಸೇವೆ ಕಾಯಮಾತಿಗೆ ಆಗ್ರಹಿಸಿ ತುಮಕೂರಿನಲ್ಲಿ ಅತಿಥಿ ಉಪನ್ಯಾಸಕರು ನಡೆಸುತ್ತಿರುವ ಧರಣಿ 29ನೇ ದಿನವೂ ಮುಂದುವರೆಯಿತು. ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ನಡೆಸುತ್ತಿರುವ ಅತಿಥಿ ಉಪನ್ಯಾಸಕರು ಸಂವಿಧಾನ ಪೀಠಿಕೆ ಓದುವುದರ ಮೂಲಕ ಸರ್ಕಾರದ ಗಮನ ಸೆಳೆದರು. ಡಿಸೆಂಬರ್ 25 ಇಲ್ಲವೇ 26ರಂದು ತುಮಕೂರಿನ ಸಿದ್ದಗಂಗಾ ಮಠದಿಂದ ಬೆಂಗಳೂರಿಗೆ ಪಾದಯಾತ್ರೆ ಆರಂಭಿಸಲು ಅತಿಥಿ ಉಪನ್ಯಸಕರು ತೀರ್ಮಾನಿಸಿದ್ದಾರೆ.
ಈ ಸಂಬಂಧ ನ್ಯೂಸ್ ಕಿಟ್.ಇನ್ ಜೊತೆ ಮಾತನಾಡಿದ ಅತಿಥಿ ಉಪನ್ಯಾಸಕರ ಸಂಘದ ತುಮಕೂರು ಜಿಲ್ಲಾ ಕಾರ್ಯಾಧ್ಯಕ್ಷ ಡಾ.ಶಿವಣ್ಣ ತಿಮ್ಲಾಪುರ, ಡಿಸೆಂಬರ್ 25 ಇಲ್ಲವೇ 26ರಂದು ಸಿದ್ದಗಂಗಾ ಮಠದಿಂದ ಬೆಂಗಳೂರಿಗೆ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ. ಸಿದ್ದಗಂಗಾ ಶ್ರೀಗಳು ಪಾದಯಾತ್ರೆಗೆ ಚಾಲನೆ ನೀಡಲಿದ್ದಾರೆ ಎಂದು ಹೇಳಿದರು.
ಅತಿಥಿ ಉಪನ್ಯಾಸಕರ ಸಂಘದ ತುಮಕೂರು ಜಿಲ್ಲಾಧ್ಯಕ್ಷ ಡಾ.ಕೆ.ಎಚ್. ಧರ್ಮವೀರ ಮಾತನಾಡಿ, ಸೇವೆ ಕಾಯಮಾತಿ ಅತಿಥಿ ಉಪನ್ಯಾಸಕರ ಹಕ್ಕಾಗಿದ್ದು ಸರ್ಕಾರ ಕೂಡಲೇ ಇದನ್ನು ಮಾಡಬೇಕು ಎಂದು ಒತ್ತಾಯಿಸಿದರು.
ಉನ್ನತ ಶಿಕ್ಷಣ ಸಚಿವ ಸುಧಾಕರ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಬಡವರಿದ್ದಾರೆ ಎಂದು ಹೇಳುತ್ತಾರೆ. ಅತಿಥಿ ಉಪನ್ಯಾಸಕರಾದ ನಾವು ಕೂಡ ಬಡವರಲ್ಲವೇ? ನಮ್ಮ ಜೀವನ ನಿರ್ವಹಣೆ, ನಮ್ಮ ಕುಟುಂಬದ ಜವಾಬ್ದಾರಿ, ನಮ್ಮ ಮಕ್ಕಳ ಜವಾಬ್ದಾರಿ ಹೀಗೆ ನಾವು ಬಡತನದಲ್ಲಿ ಇದ್ದೇವೆ ಎಂಬುವುದನ್ನು ಸಚಿವರು ಗಮನಿಸಬೇಕು ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ ನಮ್ಮಿಂದ ಅನ್ಯಾಯ ಆಗುತ್ತಿದ್ದರೆ ಅದನ್ನು ನಾವು ಸರಿಪಡಿಸುತ್ತೇವೆ. ನಮಗೆ ಆಗುತ್ತಿರುವ ಅನ್ಯಾಯವನ್ನು ಸರ್ಕಾರ ಸರಿಪಡಿಸಲಿ, ನಮಗೆ ನ್ಯಾಯ ದೊರಕಿಸಿಕೊಟ್ಟರೆ ನಾವು ವಿದ್ಯಾರ್ಥಿಗಳಿಗೆ ನ್ಯಾಯ ದೊರಕಿಸಿ ಕೊಡುತ್ತೇವೆ. ನಮ್ಮ ಜೀವನವನ್ನೇ ಅಧೋಗತಿಗೆ ತಳ್ಳಿದ್ದರೆ. ವಿದ್ಯಾರ್ಥಿಗಳ ಜೀವನವನ್ನು ರೂಪಿಸಿ ಎಂದು ಹೇಳುವ ಸರ್ಕಾರದ ನಡೆ ಎಷ್ಟು ಸರಿ ಎಂದು ಪ್ರಶ್ನಿಸಿದರು.
ಅತಿಥಿ ಉಪನ್ಯಾಸಕ ಡಾ. ಕುಮಾರ್ ಮಾತನಾಡಿ, ಸರ್ಕಾರಗಳು ಈ ಹಿಂದಿನಿಂದಲೂ ನಮ್ಮನ್ನು ಶೋಷಣೆ ಮಾಡುತ್ತಲೇ ಬರುತ್ತಿವೆ. ನಮ್ಮ ಸಂಘಟನೆ ಒಡೆಯಲು ವಿವಿಧ ರೀತಿಯಲ್ಲಿ ಪ್ರಯತ್ನಪಡುತ್ತಿದೆ. ಆದರೆ ನಾವು ಈ ಬಾರಿ ಎಲ್ಲರೂ ಒಟ್ಟಾಗಿ ಈ ಪ್ರತಿಭಟನೆಯನ್ನು ನಡೆಸುತ್ತಿದ್ದೇವೆ. ನಮ್ಮ ಬೇಡಿಕೆ ಅಂದರೆ ಅದು ಸೇವಾ ಕಾಯಮಾತಿ. ಇದನ್ನು ಹೊರತುಪಡಿಸಿ ನಾವು ಯಾವುದೇ ಬೇಡಿಕೆಯನ್ನು ಸರ್ಕಾರದ ಮುಂದೆ ಇಟ್ಟಿಲ್ಲ. ನಮ್ಮ ಸೇವೆಯನ್ನು ಕಾಯಂ ಮಾಡಿದರೆ ನಾವು ನಾಳೆಯಿಂದಲೇ ತರಗತಿಗಳನ್ನು ತೆಗೆದುಕೊಳ್ಳುತ್ತೇವೆ ಎಂದರು.
ಧರಣಿಯಲ್ಲಿ ಅತಿಥಿ ಉಪನ್ಯಾಸಕರುಗಳಾದ ಮಲ್ಲಿಕಾರ್ಜುನ್, ಹನುಮಂತರಾಯಪ್ಪ, ಮನು, ಅಂಬಿಕಾ, ಸವಿತ, ವಿನುತ, ಗಿರಿಜಮ್ಮ, ಶಂಕರ ಹಾರೋಗೆರೆ, ಗಿರೀಶ್, ನಟರಾಜು, ಶಶಿಧರ್, ಗುಂಡಣ್ಣ, ಕಾಂತರಾಜು, ಶಶಿಕುಮಾರ್, ಗಿರೀಶ್‌ಕುಮಾರ್, ಕಿರಣ್‌ಕುಮಾರ್, ಜಯರಾಮು, ನಟರಾಜು, ಶಿಲ್ಪ, ಶ್ವೇತ, ನಾಗೇಂದ್ರ ಮೊದಲಾದವರು ಇದ್ದರು.