ಮಹಾತ್ಮಗಾಂಧೀ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡುವುದನ್ನು 150 ದಿನಗಳಿಗೆ ಹೆಚ್ಚಿಸಬೇಕು. ಮಹಾದಾಯಿ ಮತ್ತು ಭದ್ರ ಮೇಲ್ದಂಡೆ ಯೋಜನೆಗೆ ಅನುಮತಿ ನೀಡುವುದು, ಕರ್ನಾಟಕದಲ್ಲಿ 236 ತಾಲ್ಲೂಕುಗಳು ಬರಪೀಡಿತವಾಗಿದ್ದು ಬರಪರಿಹಾರವನ್ನು ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ನವದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಕರ್ನಾಟಕದ ಬರಪರಿಸ್ಥಿತಿ ಸಂಬಂಧ ಚರ್ಚಿಸಿದೆವು ಎಂದು ಹೇಳಿದ್ದಾರೆ.
ಬರದಿಂದ ರಾಜ್ಯದ ರೈತರು ಎದುರಿಸುತ್ತಿರುವ ಕಷ್ಟ – ನಷ್ಟ, ಜಾನುವಾರುಗಳಿಗೆ ಎದುರಾಗಬಹುದಾದ ಮೇವು, ನೀರಿನ ಸಮಸ್ಯೆ ಎಲ್ಲವನ್ನೂ ವಿವರಿಸಿ, ಆದಷ್ಟು ಶೀಘ್ರ ರೂ.18,177 ಕೋಟಿ ಬರಪರಿಹಾರದ ಹಣ ಬಿಡುಗಡೆ ಮಾಡಿ ಕನ್ನಡಿಗರ ನೆರವಿಗೆ ನಿಲ್ಲಬೇಕೆಂದು ಪ್ರಧಾನಿಯನ್ನು ಕೋರಿದ್ದೇನೆ ಎಂದು ಹೇಳಿದ್ದಾರೆ.
ಈ ವೇಳೆ ಪ್ರಧಾನಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಕೇಂದ್ರ ಸರ್ಕಾರದಿಂದ ಅಗತ್ಯ ನೆರವನ್ನು ನೀಡಲಿದ್ದಾರೆಂದು ಎಂದು ನಂಬಿದ್ದೇನೆ ಎಂದರು.