ಕೋವಿಡ್-19ರ ರೂಪಾಂತರ ಪ್ರಕರಣವೊಂದು ಕೇರಳದಲ್ಲಿ ಪತ್ತೆಯಾದ ಹಿಂದೆಯೇ ಕರ್ನಾಟಕ ಸರ್ಕಾರ ಕೋವಿಡ್ ಮಾರ್ಗಸೂಚಿಯನ್ನು ಹೊರಡಿಸಿದ್ದು, ಸಾರ್ವಜನಿಕರು ನಿಯಮಗಳನ್ನು ಪಾಲಿಸುವಂತೆ ಸಲಹೆಯನ್ನು ನೀಡಿದೆ.
ಕರ್ನಾಟಕದಲ್ಲಿ ಮುಂಜಾಗ್ರತಾ ಕ್ರಮವಾಗಿ ಆಸ್ಪತ್ರೆ ಹಾಗೂ ಆರೋಗ್ಯ ಕೇಂದ್ರಗಳಲ್ಲಿ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳುವಂತೆ ಮಾರ್ಗಸೂಚಿಯಲ್ಲಿ ಸೂಚನೆ ನೀಡಲಾಗಿದೆ. ಕೇರಳಕ್ಕೆ ಹೊಂದಿಕೊಂಡಂತಿರುವ ಕೊಡಗು, ಮಂಗಳೂರು, ಚಾಮರಾಜನಗರ ಭಾಗದಲ್ಲಿ ಹೆಚ್ಚಿನ ನಿಗಾ ವಹಿಸುವಂತೆ ಸೂಚಿಸಲಾಗಿದೆ. ಕೇರಳದಿಂದ ಬರುವವರನ್ನು ಕಡ್ಡಾಯವಾಗಿ ಪರೀಕ್ಷೆಗೆ ಒಳಪಡಿಸುವಂತೆ ಆದೇಶ ನೀಡಲಾಗಿದೆ.
ಹಿರಿಯ ನಾಗರಿಕರು ಅಂದರೆ 60 ವರ್ಷ ಮತ್ತು ಅದಕ್ಕೂ ಮೇಲ್ಪಟ್ಟವರು, ಹೃದಯ, ಲಿವರ್, ಕಿಡ್ನಿ ಸಮಸ್ಯೆ ಸೇರಿದಂತೆ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು, ಗರ್ಭಿಣಿಯರು, ಎದೆಹಾಲು ಉಣಿಸುವ ತಾಯಂದಿರು, ಹೊರಾಂಗಣ ಪ್ರದೇಶಗಳಿಗೆ ತೆರಳುವಾಗ ಮಾಸ್ಕನ್ನು ಕಡ್ಡಾಯವಾಗಿ ಧರಿಸಿರಬೇಕು. ಗಾಳಿ, ಬೆಳಕಿನ ವ್ಯವಸ್ಥೆಯಿಲ್ಲದ ಮತ್ತು ಹೆಚ್ಚಜು ಜನಸಂದಣಿ ಇರುವ ಪ್ರದೇಶಗಳಿಗೆ ತೆರಳದೆ ದೂರ ಇರುವುದು ಸೂಕ್ತವಾಗಿದೆ ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.
ಕೆಮ್ಮು, ಜ್ವರ, ನೆಗಡಿ ಹಾಗೂ ಉಸಿರಾಟದ ಸೋಂಕಿನ ಲಕ್ಷಣಗಳು ಕಂಡುಬಂದರೆ ಕೂಡಲೇ ವೈದ್ಯಕೀಯ ಸಲಹೆಯನ್ನು ಪಡೆಯಬೇಕು. ಮೂಗು ಹಾಗೂ ಬಾಯಿ ಮುಚ್ಚುವಂತೆ ಮಾಸ್ಕ್ ಅನ್ನು ಧರಿಸಬೇಕು. ಆಗಾಗ್ಗೆ ಕೈಗಳನ್ನು ಸೋಪು ಹಾಗೂ ನೀರಿನಿಂದ ತೊಳೆದುಕೊಳ್ಳಬೇಕು ಎಂದು ತಿಳಿಸಲಾಗಿದೆ.
ಆರೋಗ್ಯ ಸಮಸ್ಯೆಗಳು ಕಂಡಬಂದಲ್ಲಿ ಮನೆಯಲ್ಲಿರಬೇಕು. ಈ ವೇಳೆ ಹಿರಿಯ ನಾಗರಿಕರು ಮತ್ತು ಅನಾರೋಗ್ಯಪೀಡಿತರನ್ನು ಭೇಟಿ ಮಾಡುವುದನ್ನು ತಪ್ಪಿಸಬೇಕು ಎಂದು ತಿಳಿಸಿದೆ.