ಅಕ್ರಮವಾಗಿ ಜಲ್ಲಿ ಕ್ರಷರ್ ಮಾಡಿರುವುದನ್ನು ನಿಲ್ಲಿಸಲು ಕಾರಣರಾದ ಆರ್.ಟಿ.ಐ ಕಾರ್ಯಕರ್ತ ಮತ್ತು ಅವರ ಬೆಂಬಲಕ್ಕೆ ಹೋದ ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಆರ್.ಟಿ.ಐ. ಕಾರ್ಯಕರ್ತ ವಿ.ಎಸ್ ಧನಂಜಯ ಮೇಲೆ ಹಲ್ಲೆ ನಡೆದಿದ್ದು, ಇವರನ್ನು ರಕ್ಷಿಸಲು ಹೋದ ಇತರೆ ಇಬ್ಬರ ಮೇಲೆ ಕ್ರಷರ್ ಮಾಲಿಕರ ಬೆಂಬಲಿಗರು ದಾಳಿ ಮಾಡಿ ಗಾಯಗೊಳಿಸಿದ್ದಾರೆ.
ಘಟನೆಯಲ್ಲಿ ಧನಂಜಯ ರಕ್ಷಣೆಗೆ ಹೋದ ಮಾರೇಗೌಡ ಎಂಬುವರ ತಲೆಗೆ ಹೊಡೆದು ತೀವ್ರ ಗಾಯಗೊಳಿಸಿದ್ದಾರೆ. ಕ್ರಷರ್ ಮಾಲಿಕರ ಬೆಂಬಲಿಗರು ಮಾರೇಗೌಡರ ಕೈಯನ್ನು ಮುರಿದು ಹಾಕಿದ್ದು, ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಸಂಬಂಧ ತುಮಕೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಹಲ್ಲೆಗೊಳಗಾದ ಆರ್.ಟಿ.ಐ ಕಾರ್ಯಕರ್ತ ಧನಂಜಯ, ಕುಣಿಗಲ್ ತಾಲ್ಲೂಕು ತರೀಕೆರೆ ಗ್ರಾಮದ ಸರ್ವೇ ನಂಬರ್ 80 ಮತ್ತು 81ರಲ್ಲಿ ಏಳು ಕ್ರಷರ್ ಗಳು ಅಕ್ರಮವಾಗಿ ಸ್ಥಾಪನೆಗೊಂಡು ಕಾರ್ಯ ನಿರ್ವಹಿಸುತ್ತಿವೆ. ಸರ್ಕಾರದ ಮಾರ್ಗಸೂಚಿಗಳನ್ನು ಉಲ್ಲಂಘನೆ ಮಾಡಿರುವ ಕ್ರಷರ್ ಮಾಲಿಕರ ವಿರುದ್ದ ಕಾನೂನು ಕ್ರಮ ಕೈಗೊಂಡು ಅಕ್ರಮ ಕ್ರಷರ್ ಗಳ ಪರವಾನಗಿಯನ್ನು ರದ್ದುಪಡಿಸಬೇಕೆಂದು ಒತ್ತಾಯಿಸಿದರು.
ಕ್ರಷರ್ ಸ್ಥಳಕ್ಕೆ ವಾಹನ ಓಡಾಡಲು ರೈತರ ಜಮೀನಿನಲ್ಲಿ ಭೂಪರಿವರ್ತನೆ ಮಾಡದೆ ಅಕ್ರಮವಾಗಿ ರಸ್ತೆ ಮಾಡಲಾಗಿದೆ. ಕಂದಾಯಾಧಿಕಾರಿಗಳ ತಪಾಸಣೆಯಲ್ಲೂ ಇದು ಸಾಬೀತಾಗಿದೆ. ಇದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ನೋಟಿಸ್ ಜಾರಿಯಾಗಿದೆ ಎಂದು ಹೇಳಿದರು.
ಕ್ರಷರ್ ಗಳ ಬಗ್ಗೆ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿ ಸ್ಥಾಪನೆ ಮಾಡಿರುವುದು ಖಚಿತವಾಗಿದೆ. ಹೀಗಾಗಿ ತುಮಕೂರು ಜಿಲ್ಲಾಧಿಕಾರಿಗಳು ಕ್ರಷರ್ ರದ್ದುಪಡಿಸುವ ಬಗ್ಗೆ ಕ್ರಷರ್ ಮಾಲಿಕರಿಗೆ ನೋಟಿಸ್ ನೀಡಿದ್ದಾರೆ. ಅಕ್ರಮ ಕ್ರಷರ್ ಸ್ಥಾಪನೆ ಮಾಡಿರುವ ವಿರುದ್ದ ಹೋರಾಟ ಮಾಡುತ್ತಿರುವ ನನ್ನ ಮೇಲೆ ಡಿಸೆಂಬರ್ 13ರಂದು ಸಂಜೆ 5.30ರ ಸಮಯದಲ್ಲಿ ದೊಣ್ಣೆ ಮತ್ತು ಕಬ್ಬಿಣದ ರಾಡಿನಿಂದ ಕ್ರಷರ್ ಮಾಲಿಕರ ಬೆಂಬಲಿಗರು ಮಾರಣಾಂತಿಕ ಹಲ್ಲೆ ನಡೆಸಿದರು. ನನ್ನ ರಕ್ಷಣೆಗೆ ಬಂದ ಮಾರೇಗೌಡ ಮತ್ತು ದಿವಾಕರ್ ಮೇಲೆ ಹಲ್ಲೆ ನಡೆದಿದೆ. ತೀವ್ರವಾಗಿ ಗಾಯಗೊಂಡ ಮಾರೇಗೌಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.
ಸಾಮಾಜಿಕ ಹೋರಾಟಗಾರ ಜಿ.ಕೆ. ನಾಗಣ್ಣ ಮಾತನಾಡಿ, ಆರ್.ಟಿ.ಐ ಕಾರ್ಯಕರ್ತ ಧನಂಜಯ, ಅವರ ರಕ್ಷಣೆಗೆ ಹೋದ ಮಾರೇಗೌಡರ ಮೇಲೆ ದೊಣ್ಣೆ ಮತ್ತು ಕಬ್ಬಿಣದ ರಾಡಿನಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಕ್ರಷರ್ ಮಾಲಿಕರ ಬೆಂಬಲಿಗರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಗಣಿ ಮಾಫಿಯದೊಂದಿಗೆ ಶಾಮೀಲಾಗಿರುವ ಪೊಲೀಸರು ಮೂಕ ಪ್ರೇಕ್ಷಕರಾಗಿದ್ದು, ಕೂಡಲೇ ಇಂತಹ ದೌರ್ಜನ್ಯವನ್ನು ತಡೆಯಬೇಕು ಎಂದು ಆಗ್ರಹಿಸಿದರು