ಸೇವೆ ಕಾಯಂಗೊಳಿಸುವಂತೆ ಒತ್ತಾಯಿಸಿ ಅತಿಥಿ ಉಪನ್ಯಾಸಕರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿಗೆ ವಿದ್ಯಾರ್ಥಿಗಳು ಬೆಂಬಲ ವ್ಯಕ್ತಪಡಿಸಿದ್ದಾರೆ. ತುಮಕೂರಿನ ಜಿಲ್ಲಾಧಿಕಾರಿ ಕಚೇರಿ ಎದುರು ನಡೆಸುತ್ತಿರುವ ಅತಿಥಿ ಉಪನ್ಯಾಸಕರ ಧರಣಿಗೆ ತುಮಕೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಬೆಂಬಲ ಸೂಚಿಸಿ, ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿದ್ಯಾರ್ಥಿನಿ ಸಹನ, ಕಳೆದ 20 ದಿನಗಳಿಂದ ನಮಗೆ ತರಗತಿಗಳೇ ನಡೆಯುತ್ತಿಲ್ಲ. ಅತಿಥಿ ಉಪನ್ಯಾಸಕರೇ ಜೀವಾಳವಾಗಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಸಿ ಶೀಘ್ರವಾಗಿ ತರಗತಿಗಳನ್ನು ತೆಗೆದುಕೊಳ್ಳಲು ವ್ಯವಸ್ಥೆ ಮಾಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ನಾವು ಪ್ರತಿಭಟನೆಯನ್ನು ತೀವ್ರಗೊಳಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಅತಿಥಿ ಉಪನ್ಯಾಸಕ ಡಾ. ಎಂ.ಪಿ. ಮಲ್ಲಿಕಾರ್ಜುನ್ ಮಾತನಾಡಿ, ವಿದ್ಯಾರ್ಥಿಗಳಿಗೆ ಅತಿಥಿ ಉಪನ್ಯಾಸಕರ ಧರಣಿಯಿಂದ ತರಗತಿಗಳ ಸಮಸ್ಯೆಯಾಗುತ್ತಿದೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ನಮ್ಮ ಪ್ರತಿಭಟನೆಯಿಂದ ತರಗತಿಗಳನ್ನು ನಡೆಸಲು ತೊಂದರೆಯಾಗಿರುವ ಬಗ್ಗೆ ನಮಗೆ ಅರಿವಿದೆ ಎಂದರು.
ಅತಿಥಿ ಉಪನ್ಯಾಸಕ ಡಾ. ಕುಮಾರ್ ಮಾತನಾಡಿ ಸರ್ಕಾರ ದಶಕಗಳಿಂದಲೂ ಈ ಹೋರಾಟವನ್ನು ಜೀವಂತವಾಗಿ ಉಳಿಸಿಕೊಂಡು ಬಂದಿದೆ. ಈ ಬಾರಿ ಇದಕ್ಕೊಂದು ಇತಿಶ್ರೀ ಹಾಡಲೇಬೇಕು ಎಂದು ಮಾಡು ಇಲ್ಲವೇ ಮಡಿ ಹೋರಾಟ ಮಾಡುತ್ತಿದ್ದೇವೆ. ನಮ್ಮ ಸೇವೆ ಕಾಯಂಗೊಳಿಸುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಹೇಳಿದರು.
ವಿದ್ಯಾರ್ಥಿಗಳ ಭವಿಷ್ಯ ಎಷ್ಟು ಮುಖ್ಯವೋ ನಮ್ಮ ಭವಿಷ್ಯವೂ ಅಷ್ಟೇ ಮುಖ್ಯವಾಗಿದೆ. ಕಳೆದ ಒಂದು ತಿಂಗಳಿಂದ ತರಗತಿಗಳನ್ನು ತೆಗೆದುಕೊಳ್ಳದೆ ಪ್ರತಿಭಟನೆ ಮಾಡುತ್ತಿದ್ದರೂ ಸರ್ಕಾರ ನಮ್ಮನ್ನು ಗಂಭೀರವಾಗಿ ಪರಿಗಣಿಸದೆ ಇರುವುದು ಆಶ್ಚರ್ಯ ತಂದಿದೆ. ಇನ್ನಾದರೂ ವಿದ್ಯಾರ್ಥಿಗಳು ಬೀದಿಗಿಳಿಯುವ ಮುನ್ನ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದರು.
ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಡಾ. ಧರ್ಮವೀರ, ಶಂಕರ ಹಾರೋಗೆರೆ, ಗಿರಿಜಮ್ಮ ಇ.ಆರ್, ಕಾಂತರಾಜು, ಸುರೇಶ್. ಟಿ, ಶಂಕರ್ ಮೊದಲಾದವರು ಇದ್ದರು.