ಸಂಸತ್ ಭವನಕ್ಕೆ ನುಗ್ಗಿದ್ದ ಆರೋಪಿ ಮನೋರಂಜನ್ ಪ್ರತಾಪ್ ಸಿಂಹ ಅವರ ಐಟಿ ಸೆಲ್ ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ. ಈ ಕೂಡಲೇ ಪ್ರತಾಪ್ ಸಿಂಹ ಅವರ ಜಲದರ್ಶಿನಿ ಕಚೇರಿಯನ್ನು ಸೀಲ್ ಮಾಡಬೇಕು ಎಂದು ಮೈಸೂರು ಜಿಲ್ಲಾ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿದ್ದೇವೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಹೇಳಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಆರೋಪಿಗಳಾದ ಸಾಗರ್ ಶರ್ಮ, ಮನೋರಂಜನ್ ಮತ್ತು ಲಲಿತ್ ಝಾ, ಸಂಸದ ಪ್ರತಾಪ್ ಸಿಂಹ ಅವರ ಕಚೇರಿಯಲ್ಲಿ ಅವರ ಜೊತೆಯೇ ಮೂರು ಬಾರಿ ಸಭೆ ನಡೆಸಿದ್ದಾರೆ. ಈ ಕೂಡಲೇ ಸಿಸಿ ಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪೊಲೀಸರು ವಶಪಡಿಸಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಸಂಸದ ಪ್ರತಾಪ್ ಸಿಂಹ ಅವರು ಕಿಡಿ ಹೊತ್ತಿಸುವುದರಲ್ಲಿ ಮೊದಲನೇ ಸ್ಥಾನದಲ್ಲಿ ನಿಲ್ಲುತ್ತಾರೆ. ಎರಡು ಕೋಮುಗಳು, ಜನ ಸಾಮಾನ್ಯರ ನಡುವೆ ಕಿಡಿ ಹೊತ್ತಿಸುವುದಕ್ಕೆ ಅವರು ಆಯ್ಕೆಯಾಗಿದ್ದಾರೆ. ಮನೋರಂಜನ್ ಎನ್ನುವ ವ್ಯಕ್ತಿ ಗೊತ್ತಿಲ್ಲದೇ ಇದ್ದರೂ ಏಕೆ 3-4 ಬಾರಿ ಪಾಸ್ ನೀಡಿದ್ದಾದರೂ ಏಕೆ?. ಕ್ಷೇತ್ರದ ಹೊರಗಿನ ವ್ಯಕ್ತಿಗಳಾದ ಸಾಗರ್ ಶರ್ಮ, ಲಲಿತ್ ಝಾ ನಿಗೆ ಪಾಸ್ ನೀಡಿದ್ದಾದರೂ ಏಕೆ? ಎಂದು ಪ್ರಶ್ನಿಸಿದ್ದಾರೆ.
ರಾಜಕೀಯವಾಗಿ ಇಂತಹ ಘಟನೆಗಳಿಂದ ಲಾಭ ಪಡೆಯಲು ಬಿಜೆಪಿ ಹೊರಟಿದೆ. 2014, 2019 ರ ಚುನಾವಣೆಗಳನ್ನು ಹೇಗೆ ನಡೆಸಿದರು ಎನ್ನುವ ನಿದರ್ಶನ ನಮ್ಮ ಮುಂದಿದೆ. 2024 ರ ಚುನಾವಣೆ ಹೇಗೆ ನಡೆಸಬೇಕು ಎಂಬುದರ ತಾಲೀಮು ಇದಾಗಿದೆ ಎಂದು ತಿಳಿಸಿದ್ದಾರೆ.
6 ಮಂದಿ ಆರೋಪಿಗಳ ಮೇಲೆ ಘಟನೆ ನಡೆದ 35 ಗಂಟೆಗಳಾದ ನಂತರ ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಿಸಬಹುದೇ? ಒಳಗೆ ಬಿಡಲು ಕಾರಣಕರ್ತರು ಯಾರು? ಎಂದು ಕೇಳಿದ್ದಾರೆ.
ಮೈಸೂರಿನ ವಿಜಯನಗರ 2 ನೇ ಹಂತದ ದೇವರಾಜೇಗೌಡ ಎಂಬುವರ ಮಗನಾದ ಮನೋರಂಜನ್. ಕಂಪ್ಯೂಟರ್ ಎಂಜಿನಿಯರಿಂಗ್ ಪೂರ್ಣಗೊಳಿಸಿಲ್ಲ. ಮನೋರಂಜನ್ ಅವರ ತಂದೆ ಮಾಧ್ಯಮಗಳ ಎದುರು ʼನಾನು ಪ್ರತಾಪ್ ಸಿಂಹ ಅವರ ಅನುಯಾಯಿʼ , ಪ್ರತಾಪ್ ಸಿಂಹ ಅವರ ಗೆಲುವಿಗೆ ಶ್ರಮ ಹಾಕಿದ್ದು, ಮೋದಿ ಅಭಿಮಾನಿ ಎಂದು ಹೇಳಿಕೆ ನೀಡಿದ್ದರು ಎಂದು ಹೇಳಿದ್ದಾರೆ.