ಡಿಸೆಂಬರ್ 13ರಂದು ದೇಶದ ಮತ್ತು ಸಂಸತ್ತಿನ ಇತಿಹಾಸದಲ್ಲೇ ಕರಾಳ ದಿನ. ಹಿಂದೆಂದೂ ಸಹ ಸಂಸತ್ತಿನ ಒಳಗಡೆ ಯಾವುದೇ ದಾಳಿಗಳು ನಡೆದಿರಲಿಲ್ಲ. ಈ ಹಿಂದೆ ದೇವಸ್ಥಾನಗಳ ಮೇಲೆ ದಾಳಿ ನಡೆದಿರುವುದಕ್ಕಿಂತ, ಪ್ರಜಾಪ್ರಭುತ್ವದ ಪವಿತ್ರ ದೇವಸ್ಥಾನ ಸಂಸತ್ತಿನ ಮೇಲೆ ದಾಳಿ ಮಾಡಿರುವುದು ತೀವ್ರ ಖಂಡನೀಯ, ಹೇಯ ಕೃತ್ಯ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಹೇಳಿದ್ದಾರೆ.
ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾನ್ ರಾಷ್ಟ್ರ ಭಕ್ತರು ಎಂದು ಕರೆದುಕೊಳ್ಳುವ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಷಾ, ಸಭಾಪತಿ ಓಂಪ್ರಕಾಶ್ ಬಿರ್ಲಾ ಅವರು ಈ ಘಟನೆಯ ನೇರ ಹೊಣೆಯನ್ನು ಹೊತ್ತು ರಾಜಿನಾಮೆ ನೀಡಬೇಕು. ಪೂರ್ವಾಪರ ತಿಳಿದುಕೊಳ್ಳದೆ ಪಾಸ್ ನೀಡಿದ ಮೈಸೂರಿನ ಸಂಸದ ಪ್ರತಾಪ್ ಸಿಂಹ ಅವರ ಮೇಲೂ ಕ್ರಮ ತೆಗದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಸಂಸತ್ತಿನ ಹೊರಗೆ ನಡೆದ ದಾಳಿಯ ದಿನವೇ ಇಂತಹ ಅವಘಡ ನಡೆದಿರುವುದನ್ನು ನಾವು ಖಂಡಿಸುತ್ತೇವೆ. ಸಂಸತ್ತಿನ ನಡಾವಳಿಗಳು, ಭದ್ರತಾ ಪರಿಸ್ಥಿತಿಗಳನ್ನು ನಾನು ಕಣ್ಣಾರೆ ನೋಡಿದ್ದೇನೆ. ಆದರೂ ಅವಘಡ ನಡೆಯಲು ಹೇಗೆ ಸಾಧ್ಯ ಎಂಬುದು ಆಶ್ಚರ್ಯ ಮೂಡಿಸುತ್ತದೆ ಎಂದು ತಿಳಿಸಿದ್ದಾರೆ.
ಈ ದೇಶದ ಹೃದಯ ಮತ್ತು ದೇಶದ ಆಗು-ಹೋಗುಗಳ ಬಗ್ಗೆ ನಿರ್ಣಯ ತೆಗೆದುಕೊಳ್ಳುವಂತಹ ಸಂಸತ್ ಭವನವನ್ನೇ ರಕ್ಷಣೆ ಮಾಡಲು ಆಗದಂತಹ ಸ್ಥಿತಿ ದೇಶದಲ್ಲಿ ನಿರ್ಮಾಣವಾಗಿದೆ. ಸಂಸತ್ತನ್ನೇ ರಕ್ಷಣೆ ಮಾಡಲು ಸಾಧ್ಯವಿಲ್ಲದವರು ದೇಶವನ್ನು ರಕ್ಷಣೆ ಮಾಡಲು ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ.
ನಾನು ಸಹ ಈ ಹಿಂದೆ ಅನೇಕ ಜನರಿಗೆ ಪಾಸ್ಗಳನ್ನು ವಿತರಿಸಿದ್ಧೆನೆ, ಪರಿಚಿತರು, ಕ್ಷೇತ್ರದ ಮತದಾರರಿಗೆ ಪಾಸ್ಗಳನ್ನು ಕೊಡುವುದು ವಾಡಿಕೆ. ಆದರೆ ಸಂಸದ ಪ್ರತಾಪ್ ಸಿಂಹ ಅವರು ಮೈಸೂರಿನವರಿಗೆ ಹೊರತಾಗಿ ಲಕ್ನೋ ಸೇರಿದಂತೆ ಇತರೇ ಪ್ರದೇಶಗಳ ನಿವಾಸಿಗಳಿಗೆ ಪಾಸ್ ನೀಡಸಲಾಗಿದೆ. ಸಂಸತ್ತಿನ ಒಳಗೆ ಧಾಂದಲೆ ನಡೆಸಿದವರು ಸಂಸದ ಪ್ರತಾಪ್ ಸಿಂಹ ಅವರಿಗೆ ಗೊತ್ತಿರುವವರೇ ಇರಬೇಕು. ಈ ವಿಚಾರವಾಗಿ ಸಂಸದರು ಮತ್ತು ಬಿಜೆಪಿಯವರು ಕೂಡಲೇ ವಿವರಣೆ ನೀಡಬೇಕು ಎಂದು ಆಗ್ರಹಿಸಿದರು.
ಪಾಸ್ ಇದ್ದವರನ್ನು ಸಂಸತ್ತಿನ ಹೊರಗೆ ನಂತರ ಎರಡನೇ ಹಂತದಲ್ಲಿ, ಆನಂತರ ಸಂಸತ್ತಿನ ಒಳಗೆ ಮತ್ತು ಗ್ಯಾಲರಿಯ ಬಾಗಿಲಿನಲ್ಲೂ ಕೂಡ ತಪಾಸಣೆ ನಡೆಸಲಾಗುತ್ತದೆ. ಆನಂತರ ಯಾವ ಕಡೆ ಕುಳಿತುಕೊಳ್ಳಬೇಕು ಎಂಬುದನ್ನು ಸಹ ಸೂಚಿಸಲಾಗುತ್ತದೆ. ಇಷ್ಟೊಂದು ಹಂತದ ತಪಾಸಣೆಗಳಿದ್ದರು, ಶೂನಲ್ಲಿ ಬಣ್ಣದ ಬಾಂಬ್ ತೆಗದುಕೊಂಡು ಹೋಗಿರುವುದೇ ನನಗೆ ಆಶ್ಚರ್ಯ ಮೂಡಿಸಿದೆ ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರೇ ಕೇಂದ್ರ ಬೇಹುಗಾರಿಕೆ ಸಂಸ್ಥೆ, ಇಂಟಲಿಜೆನ್ಸ್ ಸಂಸ್ಥೆ ಸತ್ತು ಹೋಗಿದೆಯೇ? ಈ ದೇಶದ ಸಂಸತ್ತನ್ನು ರಕ್ಷಣೇ ಮಾಡುವಲ್ಲಿ ಮೋದಿ ಸರ್ಕಾರ ವಿಫಲವಾಗಿದೆ. ಈ ವೈಫಲ್ಯಕ್ಕೆ ಲೋಕಸಭಾ ಸಭಾಪತಿಗಳ ಅಡಿಯಲ್ಲಿ ಬರುತ್ತದೆ. ಸಭಾಪತಿ ಬಿರ್ಲಾ ಅವರು ವಿಶೇಷ ತನಿಖೆಗೆ ಆದೇಶ ನೀಡಿದ್ದಾರಂತೆ. ಕಳೆದ ಲೋಕಸಭಾ ಚುನಾವಣೆ ಹತ್ತಿರವಿದ್ದ ವೇಳೆ ಪುಲ್ವಮಾ ಘಟನೆಯನ್ನು ವೈಭವೀಕರಿಸಿ 2019 ರ ಚುನಾವಣೆಯಲ್ಲಿ ಬಿಜೆಪಿ ಲಾಭ ಪಡೆಯಿತು ಎಂದರು.
ಯಾವುದೇ ವಿಚಾರವಾಗಿ ಚೌಕಿದಾರ್ ಎಂದು ಕರೆದುಕೊಂಡಿರುವ ಪ್ರಧಾನಿ ಮೋದಿ, ಅಮಿತ್ ಶಾ ಅವರುಗಳು ಬಾಯಿಗೆ ಬೀಗ ಹಾಕಿಕೊಂಡು ಕುಳಿತಿದ್ದಾರೆ. ಭಾರತದ ಪ್ರಜಾಪ್ರಭುತ್ವದ ಮೇಲೆ ನಡೆದ ದಾಳಿ ಇದಾಗಿದೆ ಎಂದು ಹೇಳಿದ್ದಾರೆ.