ಸೇವೆ ಕಾಯಂಗೊಳಿಸುವಂತೆ ಒತ್ತಾಯಿಸಿ ಡಿಸೆಂಬರ್ 13ರಂದು ಪಂಜಿನ ಮೆರವಣಿಗೆ ನಡೆಸಿದ್ದ ಅತಿಥಿ ಉಪನ್ಯಾಸಕರು ಇಂದು ಕಡಲೆಕಾಯಿ ಮತ್ತು ಹಣ್ಣುಗಳನ್ನು ಮಾರಾಟ ಮಾಡುವ ಮೂಲಕ ಸಾರ್ವಜನಿಕರು ಹಾಗೂ ಸರ್ಕಾರದ ಗಮನ ಸೆಳೆದರು. 22 ದಿನಗಳಿಂದಲೂ ತುಮಕೂರಿನ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸುತ್ತಿರುವ ಅತಿಥಿ ಉಪನ್ಯಾಸಕರು ಮಾಡು ಇಲ್ಲವೇ ಮಡಿ ಹೋರಾಟಕ್ಕೆ ಧುಮುಕಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಅತಿಥಿ ಉಪನ್ಯಾಸಕಿ ಚೈತ್ರ, ಸರ್ಕಾರಗಳು ಮತ್ತು ರಾಜಕೀಯ ನಾಯಕರು ಪ್ರತಿಪಕ್ಷದಲ್ಲಿದ್ದಾಗ ಮಾತನಾಡುವುದೇ ಬೇರೆ, ಸರ್ಕಾರ ನಡೆಸುತ್ತಿರುವಾಗ ಮಾತನಾಡುವುದೇ ಬೇರೆ ಆಗಬಾರದು. ಯಾವಾಗಲೂ ಒಂದೇ ರೀತಿ ವರ್ತಿಸಬೇಕು ಎಂದು ತರಾಟೆಗೆ ತೆಗೆದುಕೊಂಡರು.
ಕನಿಷ್ಠ ಸೌಲಭ್ಯಗಳಿಲ್ಲದೆ ದುಡಿಯುತ್ತಿರುವ ಏಕೈಕ ವರ್ಗವೆಂದರೆ ಅದು ಅತಿಥಿ ಉಪನ್ಯಾಸಕರು. ಧರಣಿ ಎರಡು ಡಜನ್ ದಿನ ಕಳೆದರು ಸರ್ಕಾರದ ಪರವಾಗಿ ಬಂದು ಯಾರೂ ಸಮಸ್ಯೆ ಕೇಳಿಲ್ಲ. ಸಮಸ್ಯೆ ಬಗೆಹರಿದಿಲ್ಲ. ಹಾಗಾಗಿ ಸೇವೆ ಕಾಯಂಗೊಳಿಸುವವರೆಗೂ ಧರಣಿ ಮುಂದುವರೆಯುತ್ತದೆ ಎಂದು ಹೇಳಿದರು.
ಅತಿಥಿ ಉಪನ್ಯಾಸಕರ ಸಂಘದ ತುಮಕೂರು ಜಿಲ್ಲಾಧ್ಯಕ್ಷ ಡಾ. ಧರ್ಮವೀರ ಮಾತನಾಡಿ, ನಾವು ಪ್ರತಿನಿತ್ಯ ವಿಭಿನ್ನ ಪ್ರತಿಭಟನೆಗಳನ್ನು ನಡೆಸುತ್ತಿದ್ದೇವೆ. ಹೀಗಾಗಿ 22.ದಿನಗಳಿಂದ ವಿದ್ಯಾರ್ಥಿಗಳಿಗೆ ಪಾಠ ಪ್ರವಚನವಿಲ್ಲದಂತಾಗಿದೆ. ಸರ್ಕಾರದ ಸ್ಪಂದನೆ ಇಲ್ಲದೆ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರ ಭವಿಷ್ಯದ ಬಗ್ಗೆ ಚಿಂತೆ ಇಲ್ಲದಂತಾಗಿದೆ ಎಂದು ಆರೋಪಿಸಿದರು.
ವಿದ್ಯಾರ್ಥಿಗಳಿಗೆ ಒಂದು ಕಡೆ ತರಗತಿಗಳು ಇಲ್ಲದೇ ಕಲಿಕೆಯಿಂದ ಹಿಂದುಳಿಯುವಂತೆ ಆಗಿದೆ. ಸರ್ಕಾರಗಳ ಧೋರಣೆಯಿಂದ ಅತಿಥಿ ಉಪನ್ಯಾಸಕರಿಗೆ ಜೀವನದ ಭದ್ರತೆ ಇಲ್ಲವಾಗಿದೆ. ಸರ್ಕಾರದ ಇನ್ನಾದರೂ ಎಚ್ಚೆತ್ತು ನಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.
ಧರಣಿಯಲ್ಲಿ ಅತಿಥಿ ಉಪನ್ಯಾಸಕರಾದ ಡಾ.ಶಿವಣ್ಣ ತಿಮ್ಲಾಪುರ್, ಡಾ.ಮಲ್ಲಿಕಾರ್ಜುನ್, ಕಾಂತರಾಜು, ಶಂಕರಪ್ಪ ಹಾರೋಗೆರೆ, ಗಿರಿಜಮ್ಮ, ಅನಿತಾ. ವಿನುತಾ. ಯಶಸ್ವಿನಿ. ಸುರೇಶ, ಟಿ. ತೊಂಟಾರಾಧ್ಯ. ದೀಪಕ್. ಗಿರೀಶ್. ಮಹೇಶ್. ಶಶಿಕುಮಾರ್.ಸೌಮ್ಯ, ಡಾ.ಸವಿತ ಮೊದಲಾದವರು ಇದ್ದರು.