ಸೇವೆ ಕಾಯಂಗೊಳಿಸುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅತಿಥಿ ಉಪನ್ಯಾಸಕರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಮುಂದುವರೆದಿದೆ. ತುಮಕೂರು ಜಿಲ್ಲಾಧಿಕಾರಿ ಕಛೇರಿ ಎದುರು ನಡೆಸುತ್ತಿರುವ ಧರಣಿಯಲ್ಲಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಕಾಲೇಜುಗಳ ಅತಿಥಿ ಉಪನ್ಯಾಸಕರು ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿದ್ದಾರೆ.
ಧರಣಿಯನ್ನುದ್ದೇಶಿಸಿ ಮಾತನಾಡಿದ ಅತಿಥಿ ಉಪನ್ಯಾಸಕ ಪ್ರಸನ್ ಕುಮಾರ್, ನಮ್ಮ ಧರಣಿ ದಿನೇ-ದಿನೇ ಗಟ್ಟಿಗೊಳ್ಳುತ್ತಿದ್ದು, ಕಾಯಾಮಾತಿ ಪಡೆಯುವವರೆಗೂ ನಮ್ಮ ಹೊರಾಟ ನಿಲ್ಲುವುದಿಲ್ಲ ಮತ್ತು ಬೆಂಗಳೂರಿನಲ್ಲಿ ಮಂಗಳವಾರದಿಂದ ಪ್ರೀಡಂ ಪಾರ್ಕ್ ನಲ್ಲಿ ನಮ್ಮ ಹೋರಟ ಪ್ರಾರಂಭವಾಗುತ್ತದೆ. ರಾಜ್ಯ ಸರ್ಕಾರ ಹಲವು ವರ್ಷಗಳಿಂದ ನಮ್ಮ ನ್ಯಾಯ ಸಮ್ಮತ ಬೇಡಿಕೆಯನ್ನು ಈಡೇರಿಸದೆ ಮೀನಾ ಮೇಷ ಎಣಿಸುತ್ತಿದ್ದು ಬೇಡಿಕೆ ಈಡೇರುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಡಾ.ಧರ್ಮವೀರ ಮಾತನಾಡಿ, ನಮ್ಮ ಪ್ರತಿಭಟನೆಯಿಂದ ಸರ್ಕಾರ ಈಗಾಗಲೇ ವಿಚಲಿತಗೊಂಡಿದೆ. ರಾಜ್ಯದ ಬೇರೆ-ಬೇರೆ ಕಾಲೇಜಿನ ವಿದ್ಯಾರ್ಥಿಗಳು ಉಪನ್ಯಾಸಕರ ಕೊರತೆಯಿಂದ ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನೆಗೆ ಮುಂದಾಗಿದ್ದಾರೆ, ದಶಕಗಳಿಂದ ಅತಿಥಿ ಉಪನ್ಯಾಸಕರನ್ನು ವಂಚಿಸಿದ ಸರ್ಕಾರ ಈಗ ವಿದ್ಯಾರ್ಥಿಗಳನ್ನು ವಂಚಿಸುವ ದಾರಿ ಹಿಡಿದಿದೆ, ಕಾಲೇಜು ವಿದ್ಯಾರ್ಥಿಗಳು ರಾಜ್ಯಾದ್ಯಂತ ಪ್ರತಿಭನೆ ಮಾಡುವ ಮುನ್ನ ರಾಜ್ಯ ಸರ್ಕಾರ ಅತಿಥಿ ಉಪನ್ಯಾಸಕರ ನ್ಯಾಯುತ ಬೇಡಿಕೆಯನ್ನು ಈಡೆರಿಸಬೇಕೆಂದು ಒತ್ತಾಯಿಸಿದರು.
ಬೆಂಗಳೂರು ನಗರದ ಅತಿಥಿ ಉಪನ್ಯಾಸಕಿ ಡಾ.ಸುಮಾಲತ ಮಾತನಾಡಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶೇ80ರಷ್ಟು ಅತಿಥಿ ಉಪನ್ಯಾಸಕರೇ ಸೇವೆ ಸಲ್ಲಿಸುತ್ತಿದ್ದಾರೆ. ರಾಜ್ಯಾದ್ಯಂತ 14 ಸಾವಿರ ಅತಿಥಿ ಉಪನ್ಯಾಸಕರಿದ್ದು ಸುಮಾರು 20 ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬರುತ್ತಿದ್ದೇವೆ. ಈ ಬಾರಿ ಮಾಡು ಇಲ್ಲವೇ ಮಡಿ ಎಂಬ ಧ್ಯೇಯ ವಾಕ್ಯದೊಂದಿಗೆ ಹೋರಾಟ ನಡೆಸುತ್ತಿದ್ದೇವೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಅತಿಥಿ ಉಪನ್ಯಾಸಕರಾದ ಡಾ.ಶಿವಣ್ಣ ತಿಮ್ಲಾಪುರ, ಡಾ.ಮಲ್ಲಿಕಾರ್ಜುನ್, ಶಂಕರಪ್ಪ ಹಾರೋಗೆರೆ, ರಘು, ಡಾ.ಶೇಖರ್, ಗಿರೀಶ್, ಡಾ.ಹನುಮಂತರಾಜು, ವಿದ್ಯಾಜೋತಿ, ರಾಮಲಕ್ಷ್ಮಿ, ರೇಣುಕ.ಡಿ.ಆರ್, ಮಹಾಲಕ್ಷ್ಮಿ, ಕಿರಣ ಕುಮಾರ್, ಜಯರಾಮು, ನಟರಾಜು, ಡಾ.ಜಾಲಜಾಕ್ಷಿ, ಶಂಕರ, ಶಶಿಧರ್, ಡಾ.ಶಿವಯ್ಯ, ಶಿವಲಿಂಗಯ್ಯ ಇದ್ದರು.