ನಾನು ಕೂಡ ಕಾನೂನು ಪದವಿ ಪಡೆದು ವಕೀಲನಾಗಿ ಕೆಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದೇನೆ. ವಕೀಲ ವೃತ್ತಿಯಲ್ಲಿ ಎದುರಾಗುವ ಸವಾಲುಗಳ ಅನುಭವ ಮತ್ತು ಅರಿವು ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಫೇಸ್ಬುಕ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಅನ್ಯಾಯಕ್ಕೊಳಗಾದ ಜನರಿಗೆ ನ್ಯಾಯ ಕೊಡಿಸುವ ಸಂದರ್ಭದಲ್ಲಿ ವಕೀಲರು ಎದುರಿಸಬಹುದಾದ ಬೆದರಿಕೆ, ಹಲ್ಲೆ, ವೈಯಕ್ತಿಕ ನಿಂದನೆ ಇಂಥವುಗಳಿಂದ ರಕ್ಷಣೆ ನೀಡುವುದು ನಮ್ಮ ಸರ್ಕಾರದ ಆದ್ಯ ಕರ್ತವ್ಯ ಎಂದು ಭಾವಿಸಿ, ನ್ಯಾಯವಾದಿಗಳ ಮೇಲಿನ ಹಿಂಸಾಚಾರ ನಿಷೇಧ ವಿಧೇಯಕ – 2023 ಅನ್ನು ಇಂದಿನ ಅಧಿವೇಶನದಲ್ಲಿ ಮಂಡಿಸಲಾಗಿದೆ ಎಂದು ತಿಳಿಸಿದ್ದಾರೆ.
ವಕೀಲ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ಪ್ರತಿಯೊಬ್ಬರೂ ಭಯಮುಕ್ತರಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ನೊಂದವರಿಗೆ ನ್ಯಾಯ ಸಿಗಲು ಸಾಧ್ಯ. ಇಂತಹ ನಿರ್ಭೀತ ವಾತಾವರಣ ನಿರ್ಮಾಣ ಮಾಡಲು ನಾವು ಬದ್ಧ ಎಂಬುದನ್ನು ಮತ್ತೊಮ್ಮೆ ನಾಡಿನ ವಕೀಲ ಬಂಧುಗಳಿಗೆ ಖಾತ್ರಿಪಡಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
ಹಲವು ವರ್ಷಗಳ ಹೋರಾಟ ಈಗ ಫಲ ಕೊಟ್ಟಿದೆ
ವಕೀಲರ ಮೇಲಿನ ಹಿಂಸಾಚಾರ ನಿಷೇಧ ಕಾಯಿದೆಯು ಇಂದು ರಾಜ್ಯ ವಿಧಾನಸಭೆಯಲ್ಲಿ ಮಂಡನೆಯಾಗಿ ಅಂಗೀಕಾರವಾಗಿದೆ. ಈ ವಿಧೇಯಕಕ್ಕಾಗಿ ಕರ್ನಾಟಕ ರಾಜ್ಯದ್ಯಂತ ನಿರಂತರ ಹೋರಾಡಿದ ಎಲ್ಲಾ ವಕೀಲರಿಗೂ, ಹೋರಾಟಗಾರರಿಗೂ ಬೆಂಬಲ ನೀಡದ ಎಲ್ಲ ಸಂಘ ಸಂಸ್ಥೆಗಳಿಗೂ ಧನ್ಯವಾದಗಳು ಎಂದು ಅಖಿಲ ಭಾರತ ವಕೀಲರ ಒಕ್ಕೂಟದ ಪರವಾಗಿ ಬಸವರಾಜ್ ಕೋರಿಮಠ್ ತಿಳಿಸಿದ್ದಾರೆ.
ವಕೀಲರ ಸಂರಕ್ಷಣಾ ಕಾಯಿದೆಯನ್ನು ಅಂಗೀಕರಿಸಿದ ರಾಜ್ಯ ಸರ್ಕಾರಕ್ಕೆ, ಮಾನ್ಯ ಮುಖ್ಯಮಂತ್ರಿಗಳಿಗೆ, ಕಾನೂನು ಸಚಿವರಿಗೆ, ಅಡ್ವೊಕೇಟ್ ಜನರಲ್ ಅವರಿಗೆ, ಕರ್ನಾಟಕ ರಾಜ್ಯ ವಕೀಲರ ಪರಿಷತ್ ನ ಯಾವತ್ತು ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರಿಗೆ, ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ವಕೀಲರ ಸಂಘಗಳ ಪದಾಧಿಕಾರಿಗಳಿಗೆ ಹಾಗೂ ಬೆಂಬಲಿಸಿದ ರಾಜ್ಯದ ಎಲ್ಲಾ ಸಮಸ್ತ ವಕೀಲ ಮಿತ್ರರಿಗೆ ಅಖಿಲ ಭಾರತ ವಕೀಲರ ಒಕ್ಕೂಟ AILU ಕರ್ನಾಟಕ ರಾಜ್ಯ ಸಮಿತಿ ಹಾರ್ದಿಕ ಧನ್ಯವಾದಗಳನ್ನು ಅವರು ಹೇಳಿದ್ದಾರೆ.


