Saturday, October 19, 2024
Google search engine
Homeಜಿಲ್ಲೆವಿದ್ಯುತ್ ಗುತ್ತಿಗೆದಾರರ ಕುಂದುಕೊರತೆ ಬಗೆಹರಿಸಲು ಆಗ್ರಹಿಸಿ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಪ್ರತಿಭಟನೆ

ವಿದ್ಯುತ್ ಗುತ್ತಿಗೆದಾರರ ಕುಂದುಕೊರತೆ ಬಗೆಹರಿಸಲು ಆಗ್ರಹಿಸಿ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಪ್ರತಿಭಟನೆ

ತುಮಕೂರು ಜಿಲ್ಲೆಯ ರೈತರು ಹಾಗೂ ವಿದ್ಯುತ್ ಗುತ್ತಿಗೆದಾರರ ಕುಂದುಕೊರತೆಗಳನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರು ತುಮಕೂರಿನ ಬೆಸ್ಕಾಂ ಅಧೀಕ್ಷಕ ಇಂಜಿನಿಯರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಸಿ.ರಮೇಶ್, ಅನುಮತಿ ಪಡೆದ ಗುತ್ತಿಗೆದಾರರು ಸಂಕಷ್ಟ ಸ್ಥಿತಿಯಲ್ಲಿದ್ದಾರೆ. ಹೀಗಾಗಿ ಸರ್ಕಾರ ಹಾಗೂ ಇಂಧನ ಇಲಾಖೆಯು ವಿದ್ಯುತ್ ಗುತ್ತಿಗೆದಾರರ ನೆರವಿಗೆ ಬರಬೇಕು. ಇಂಧನ ಇಲಾಖೆ ಅಧಿಕಾರಿಗಳು ವಿದ್ಯುತ್ ಗುತ್ತಿಗೆದಾರರಿಗೆ ತೊಂದರೆ ಕೊಡುತ್ತಿದ್ದಾರೆ. ಲಂಚದ ಬೇಡಿಕೆ ಇಡುತ್ತಿದ್ದಾರೆ. ಗುತ್ತಿಗೆ ನಂಬಿಕೊಂಡು ಬದುಕುತ್ತಿರುವ ಗುತ್ತಿಗೆದಾರರು ಕಷ್ಟ ಅನುಭವಿಸುತ್ತಿದ್ದಾರೆ. ನಮಗೆ ಯಾವುದೇ ರೀತಿಯ ಸೌಲಭ್ಯಗಳಿಲ್ಲ ಎಂದು ತಿಳಿಸಿದರು.

ರೈತರ ನಿರಾವರಿ ಪಂಪ್ ಸೆಟ್‌ಗಳಿಗೆ ತತ್ಕಾಲ್ ಸ್ಕೀಂನಲ್ಲಿ ಅನುದಾನ ಬಿಡುಗಡೆ ಮಾಡಬೇಕು, ರೈತರ ನೀರಾವರಿ ಪಂಪ್ ಸೆಟ್‌ಗಳಿಗೆ ಅಕ್ರಮ ಸಕ್ರಮ ಯೋಜನೆಗೆ ಮರುಚಾಲನೆ ನೀಡಬೇಕು, ಒಂದು ಲಕ್ಷದಿಂದ ಐದು ಲಕ್ಷದವರೆಗಿನ ಕಾಮಗಾರಿಗಳನ್ನು ಪೂರ್ಣ ಗುತ್ತಿಗೆ ಆಧಾರದ ಮೇಲೆ ತುಂಡು ಗುತ್ತಿಗೆಯಾಗಿ ಸ್ಥಳೀಯ ಗುತ್ತಿಗೆದಾರರಿಗೆ ನೀಡಬೇಕು ಎಂದು ಆಗ್ರಹಿಸಿದರು.

ಗ್ರಾಮ ಠಾಣದ ಹೊರಗೆ ನಿರ್ಮಿಸಿರುವ ಮನೆಗಳಿಗೆ ನಿರಂತರ ಜ್ಯೋತಿ ವಿದ್ಯುತ್ ಸಂಪರ್ಕದ ಅವಕಾಶ ಕಲ್ಪಿಸಬೇಕು. ಅಕ್ರಮ ಸಕ್ರಮ, ಗಂಗಾ ಕಲ್ಯಾಣ, ಹೊಸ ಸಂಪರ್ಕ ಮತ್ತು ಮುರಿದ ಕಂಬಗಳ ಕಾಮಗಾರಿಗಳನ್ನು ತುಂಡು ಗುತ್ತಿಗೆ ಆಧಾರದಲ್ಲಿ ಸ್ಥಳೀಯ ಗುತ್ತಿಗೆದಾರರಿಗೆ ನೀಡಬೇಕು. ಕಳೆದ ಏಪ್ರಿಲ್‌ನಿಂದ ಇಲ್ಲಿಯವರೆಗೆ ಯಾವುದೇ ಕಾಮಗಾರಿಗಳಿಗೂ ಅನುದಾನ ನೀಡಿಲ್ಲ, ಶೀಘ್ರ ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಸಂಘದ ತುಮಕೂರು ಜಿಲ್ಲಾಧ್ಯಕ್ಷ ಅಧ್ಯಕ್ಷ ಬಿ.ಕೆ.ಅಶೋಕ್‌ಕುಮಾರ್ ಮಾತನಾಡಿ, ವಿದ್ಯುತ್ ಗುತ್ತಿಗೆದಾರರ ಕುಂದುಕೊರತೆ ನಿವಾರಿಸಲು ಹಾಗೂ ವಿವಿಧ ಬೇಡಿಕೆ ಈಡೇರಿಸಲು ಇಂಧನ ಸಚಿವರಿಗೆ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಮಾಡಿದರೂ ಪ್ರಯೋಜನ ವಾಗಿಲ್ಲ. ಹೀಗಾಗಿ ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದು ತಿಳಿಸಿದರು.

ಇಲಾಖೆಯ ಉಗ್ರಾಣದಲ್ಲಿ ಲೈನ್ ಸಾಮಗಗ್ರಿಗಳು ಲಭ್ಯವಿರುವುದಿಲ್ಲ, ಕೂಡಲೇ ದಾಸ್ತಾನು ಮಾಡಬೇಕು. ಹಲವಾರು ವರ್ಷಗಳಿಂದ ಒಂದೇ ಜಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಾಖಾಧಿಕಾರಿಗಳು, ಸಹಾಯಕ ಇಂಜಿನಿಯರ್, ಪವರ್ ಮೆನ್‌ಗಳು, ಮಾಪಕ ಓದುಗರ ವರ್ಗವಣೆಗೆ ಶಿಫಾರಸು ಮಾಡಬೇಕು. ಲೈಟಿಂಗ್ ಮತ್ತು ಪವರ್ ಸಂಪರ್ಕಗಳಿಗೆ ಅನುದಾನ ಇಲ್ಲವೆಂದು ವಿದ್ಯುತ್ ಮಂಜೂರಾತಿ ನೀಡುತ್ತಿಲ್ಲ, ಕೂಡಲೇ ಅನುದಾನ ನೀಡಬೇಕು. ರೈತರ ಐಪಿ ಪಂಪ್ ಸೆಟ್‌ಗಳಿಗೆ ಸ್ವಂತ ಖರ್ಚಿನಲ್ಲಿ ವಿದ್ಯುತ್ ಸೌಕರ್ಯ ಮಾಡಿಕೊಳ್ಳುವ ಕಾಮಗಾರಿಗಳಿಗೆ ಶೇಕಡ 5ರಷ್ಟು ಮೇಲ್ವಿಚಾರಣಾ ಶುಲ್ಕವನ್ನು ರದ್ದು ಮಾಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಂಘದ ಉಪಾಧ್ಯಕ್ಷ ಬಸವರಾಜಪ್ಪ, ಮೆಹಬೂಬ್ ಖಾನ್, ಕಾರ್ಯದರ್ಶಿ ಜಿ.ನಾಗರಜು, ಜಂಟಿ ಕಾರ್ಯದರ್ಶಿ ಬಿ.ಬಿ.ಶ್ರೀನಿವಾಸ್, ಸಂಘಟನಾ ಕಾರ್ಯದರ್ಶಿ ಬಿ.ಎಚ್.ಪ್ರಕಾಶ್, ಕೋಶಾಧ್ಯಕ್ಷ ಬಿ.ಕೆ.ಶಿವಕುಮಾರ್ ಮೊದಲಾದವರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular