ಕಾಂಗ್ರೆಸ್ ಪಕ್ಷ ರಾಜ್ಯಸಭಾ ಸಂಸದ ಧೀರಜ್ ಸಾಹು ಅವರ ಮನೆಯಲ್ಲಿ 354 ಕೋಟಿಗೂ ಹೆಚ್ಚು ಹಣ ಸಿಕ್ಕಿದ್ದು, ಭ್ರಷ್ಟಾಚಾರ ಯಾರೆ ಮಾಡಿದರೂ ಕಾನೂನಿನ ಅಡಿಯಲ್ಲಿ ಕ್ರಮ ಕೈಗೊಳ್ಳಬೇಕು. ತಪ್ಪು ಯಾರೇ ಮಾಡಿದರೂ ತಪ್ಪೇ ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಹೇಳಿದ್ದಾರೆ.
ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 2021ರ ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ. 566 ಕೋಟಿ ವೆಚ್ಚದಲ್ಲಿ ಬಿಡಿಎ ಮನೆಗಳ ನಿರ್ಮಾಣಕ್ಕೆ ಕ್ಲಿಯರೆನ್ಸ್ ಕೊಡುವುದಕ್ಕೆ ಎಚ್‌ಡಿಎಫ್‌ಸಿ ಬ್ಯಾಂಕಿನಿಂದ ಆರ್‌ಟಿಜಿಎಸ್ ಮೂಲಕ ಯಡಿಯೂರಪ್ಪ ಕುಟುಂಬದವರ ಖಾತೆಗಳಿಗೆ ರಾಮಲಿಂಗಂ ಎಂಬ ಕಂಪನಿ ಹೆಸರಿನಲ್ಲಿ ಹಣ ವರ್ಗಾವಣೆ ಆಗಿತ್ತು ಎಂದು ತಿಳಿಸಿದರು.
ಆ ಹಣವನ್ನ ಕೋಲ್ಕತ್ತಾ ಮೂಲದ 7 ಶೆಲ್ ಕಂಪನಿಗಳಿಗೆ ಹಣ ವರ್ಗಾವಣೆ ಮಾಡಲಾಗಿತ್ತು. ಆ ಶೆಲ್ ಕಂಪನಿಗಳು ಕಾರ್ಪೊರೇಷನ್ ಬ್ಯಾಂಕ್ ಮೂಲಕ ಯಡಿಯೂರಪ್ಪ ಕುಟುಂಬಕ್ಕೆ ಸೇರಿದ 2 ಕಂಪನಿಗಳಿಗೆ ಹಣ ವರ್ಗಾವಣೆ ಮಾಡಿದ್ದವು ಎಂದು ಹೇಳಿದರು.
ಈ ಪ್ರಕರಣದಲ್ಲಿ ಯಡಿಯೂರಪ್ಪ ಅವರು ಎ1 , ಅವರ ಪುತ್ರ ಎ2, ಅಳಿಯ ಶಶಿದರ್ ಮರಡಿ ಎ3, ಮೊಮ್ಮಗ ಸಂಜಯ್ ಶ್ರೀ ಎ4, ದುಡ್ಡು ಕೊಟ್ಟ ಚಂದ್ರಕಾಂತ ರಾಮಲಿಂಗಂ ಎ5 ಹೀಗೆ ಮುಂತಾದವರ ಮೇಲೆ ಪ್ರಕರಣ ದಾಖಲಾಗಿತ್ತು ಎಂದರು.
ನರೇಂದ್ರ ಮೋದಿ ಅವರೆ ನೀವು ಭ್ರಷ್ಟರಲ್ಲ ಎಂದರೆ ಯಾಕೆ ಯಡಿಯೂರಪ್ಪ ಅವರ ಕುಟುಂಬದ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರೆ ನಿಮಗೆ ದಮ್ಮು, ತಾಕತ್ತು ಇದ್ದರೆ ಯಡಿಯೂರಪ್ಪ ಅವರ ಕುಟುಂಬದ ವಿರುದ್ಧ ಕ್ರಮ ಜರುಗಿಸಿ ಎಂದು ಸವಾಲು ಹಾಕಿದ್ದಾರೆ.
ವಿದೇಶದಲ್ಲಿ ಇರುವ ಕಪ್ಪು ಹಣ ವಾಪಸ್ ತರುತ್ತೇವೆ. ಕೋಟಾ ನೋಟುಗಳನ್ನು ನಿಲ್ಲಿಸುತ್ತೇವೆ. ಪ್ರತಿ ಖಾತೆಗೆ 15 ಲಕ್ಷ ಹಾಕುತ್ತೇವೆ ಎಂದು ಹೇಳಿದ್ದರು. ನೀವು ಕೊಟ್ಟ ಆಶ್ವಾಸನೆ ಎಲ್ಲಿ ? ಎಂದು ಪ್ರಶ್ನಿಸಿದ್ದಾರೆ.
ದೇಶದ ಎಲ್ಲಾ ಭ್ರಷ್ಟರ ವಿರುದ್ಧ ತನಿಖೆ ಆಗಬೇಕು. ಕರ್ನಾಟಕ, ತೆಲಂಗಾಣ, ಒಡಿಸ್ಸಾ , ಪಶ್ಚಿಮ ಬಂಗಾಳದ ಕಾಂಗ್ರೆಸ್ ಮುಖಂಡರನ್ನ ಮಾತ್ರ ಗುರಿ ಮಾಡಲಾಗುತ್ತಿದೆ. ಆದರೆ ಕಾಂಗ್ರೆಸ್ ನಾಯಕರ ಮೇಲೆ ಮಾತ್ರ ಐಟಿ ದಾಳಿಗಳು ನಡೆಯುತ್ತಿವೆ. ಬಿಜೆಪಿ ಪಕ್ಷದಲ್ಲಿ ಯಾರು ಭ್ರಷ್ಟರೇ ಇಲ್ಲವೇ? ಎಂದು ಬಿಜೆಪಿ ಮುಖಂಡರನ್ನು ಕೇಳಿದ್ದಾರೆ.
ಬಿಜೆಪಿಗೆ ಯಾರೂ ಹೋಗುವುದಿಲ್ಲ
ಬಿಜೆಪಿ ಬಿ ಟೀಮ್ ಎಚ್.ಡಿ.ಕುಮಾರಸ್ವಾಮಿ ಅವರು ಬಿಜೆಪಿ ಎ ಟೀಮ್ ಗಿಂತ ಬಿ ಟೀಮ್ ಸ್ಟ್ರಾಂಗ್ ಎಂದು ತೋರಿಸಲು ಕಾಂಗ್ರೆಸ್ ಪಕ್ಷದ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ.
ಕುಮಾರಸ್ವಾಮಿ ಅವರು ಹತಾಶರಾಗಿದ್ದಾರೆ. ಲೋಕಸಭೆ ಚುನಾವಣೆ ನಂತರ 50 ಜನ ಶಾಸಕರು ಪಕ್ಷಾಂತರ ಮಾಡುತ್ತಾರೆ ಎಂದು ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ಸಿನ ಎಲ್ಲಾ ಶಾಸಕರು ಪಕ್ಷಕ್ಕೆ ಬದ್ಧರಾಗಿದ್ದಾರೆ. ಮುಳುಗುತ್ತಿರುವ ಹಡಗು ಬಿಜೆಪಿಗೆ ಯಾರು ಹೋಗುವುದಿಲ್ಲ ಎಂದರು.
50 ಜನ ಶಾಸಕರು ಯಾರ ನಾಯಕತ್ವದಲ್ಲಿ ಬಿಜೆಪಿಗೆ ಹೋಗುತ್ತಾರೆ ? ಅದನ್ನ ಬಹಿರಂಗಪಡಿಸಿ. ಸುಳ್ಳು ಹೇಳಿಕೆ ನೀಡುವ ಮೂಲಕ ರಾಜ್ಯದ ಮತದಾರರಿಗೆ ನೀವು ಅಪಮಾನ ಮಾಡಿದ್ದೀರಿ ಎಂದು ಟೀಕಿಸಿದರು.
ರಾಜ್ಯದ ಜನರು ನಮಗೆ ಸ್ಪಷ್ಟ ಬಹುಮತ ನೀಡುವ ಮೂಲಕ ಉತ್ತರ ಕೊಟ್ಟಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಈ ರಾಜ್ಯದ ಜನರು ಕಾಂಗ್ರೆಸ್ ಪಕ್ಷದ 20 ಅಭ್ಯರ್ಥಿಗಳನ್ನು ಗೆಲ್ಲಿಸುತ್ತಾರೆ.


