ರಾಜ್ಯ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆಯನ್ನು ವಾಪಸ್ ಪಡೆಯುವ ತೀರ್ಮಾನ ಕೈಗೊಂಡಿರುವುದನ್ನು ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಖಂಡಿಸಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರದ ಈ ತೀರ್ಮಾನ ನ್ಯಾಯಾಲಯಕ್ಕೆ ಸವಾಲು ಹಾಕಿದ ರೀತಿಯಲ್ಲಿದೆ. ಇದು ಸಿಬಿಐಗೆ ಸವಾಲು ಅಲ್ಲ, ನ್ಯಾಯಾಲಯಕ್ಕೆ ಸವಾಲು ಎಂದು ಅಭಿಪ್ರಾಯಪಟ್ಟರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಕ್ಟ್, ಸೆಕ್ಷನ್‌ಗಳ ಬಗ್ಗೆ ಮಾತನಾಡುತ್ತಾರೆ. ಆದರೆ ಈಗ ಯಾವ ತೀರ್ಮಾನ ಕೈಗೊಂಡಿದ್ದಾರೆ ಎಂದು ಟೀಕಿಸಿದರು.
ಅಂದು ಸಿಬಿಐನವರು ಡಿ.ಕೆ. ಶಿವಕುಮಾರ್ ಅಕ್ರಮ ಆಸ್ತಿ ಗಳಿಕೆ ವಿರುದ್ಧದ ತನಿಖೆಗೆ ಅನುಮತಿ ಕೇಳಿದ್ದರು. ಆಗ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಅನುಮತಿ ನೀಡಿತ್ತು. ಇದಾದ ಬಳಿಕ ಡಿ.ಕೆ. ಶಿವಕುಮಾರ್ ನ್ಯಾಯಾಲಯಗಳಿಗೆ ಓಡಾಡಿದ್ದಾರೆ. ಅವರು ಪ್ರಾಮಾಣಿಕರಾಗಿದ್ದರೆ ನ್ಯಾಯಾಲಯದಲ್ಲೇ ತೀರ್ಪು ಬರಲಿ. ನ್ಯಾಯಾಲಯದ ಮುಂದೆಯೇ ಕ್ಲೀನ್‌ಚೀಟ್ ಪಡೆದು ಜನರ ಮುಂದೆ ಹೋಗಬೇಕಿತ್ತು ಎಂದರು.
ಇಣತಹ ಪ್ರಕರಣಗಳ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚೆ ಮಾಡುವುದು ಸೂಕ್ತವಾಗಿರುವುದಿಲ್ಲ. ಈ ಸರ್ಕಾರದ ನಿಲುವನ್ನು ನಾನು ಖಂಡಿಸುತ್ತೇನೆ. ಒಂದು ಬಾರಿ ಎಫ್‌ಐಆರ್ ಆದ ಮೇಲೆ ಚಾರ್ಜ್ ಶೀಟ್ ಕೊಟ್ಟರೆ ಬದಲಾವಣೆ ಮಾಡಲು ನ್ಯಾಯಾಧೀಶರ ಅನುಮತಿ ಪಡೆಯಬೇಕು. ಒಂದು ಸಲ ಪ್ರಕರಣಗಳು ನ್ಯಾಯಾಲಯಕ್ಕೆ ಹೋದರೆ ಅದರ ಬಗ್ಗೆ ನ್ಯಾಯಾಧೀಶರೇ ತೀರ್ಮಾನ ಕೈಗೊಳ್ಳಬೇಕು. ಸಂಪುಟಕ್ಕೆ ಯಾವುದೇ ಅಧಿಕಾರ ಇಲ್ಲ ಎಂದರು.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ದ ಅನೇಕ ಪ್ರಕರಣಗಳಿವೆ. ಹಾಗಾಗಿ ಇದನ್ನು ನ್ಯಾಯಾಲಯದಲ್ಲೇ ವಜಾ ಮಾಡಬಹುದಿತ್ತು. ಆದರೆ ಸಂಪುಟದ ಈ ತೀರ್ಮಾನ ರಾಜ್ಯ ಸರ್ಕಾರಕ್ಕೆ ಕಪ್ಪುಚುಕ್ಕೆ ಇಟ್ಟಂತಾಗಿದೆ ಎಂದು ಆರೋಪಿಸಿದರು.