ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರ ಸೇವೆಯನ್ನು ಕಾಯಂಗೊಳಿಸಬೇಕು. ಅವರಿಗೆ ಶಾಶ್ವತ ಭದ್ರತೆ ಕಲ್ಪಿಸಬೇಕೆಂದು ಆಗ್ರಹಿಸಿ ರಾಜ್ಯಾದ್ಯಂತ ಅತಿಥಿ ಉಪನ್ಯಾಸಕರು ಪ್ರತಿಭಟನಾ ಧರಣಿ ನಡೆಸುತ್ತಿದ್ದಾರೆ.
ತುಮಕೂರಿನಲ್ಲೂ ಅತಿಥಿ ಉಪನ್ಯಾಸಕರು ನಗರದ ಟೌನ್ ಹಾಲ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿ ತಮ್ಮ ಸೇವೆಯನ್ನು ಕಾಯಂಗೊಳಿಸಬೇಕು ಎಂದು ಆಗ್ರಹಿಸಿದರು.
ಅತಿಥಿ ಉಪನ್ಯಾಸಕಿ ಡಾ. ಕವಿತಾ ಮಾತನಾಡಿ ಅತಿಥಿ ಉಪನ್ಯಾಸಕರಿಗೆ ಯಾವುದೇ ರಜೆ ಇಲ್ಲ, ಕನಿಷ್ಠ ವೇತನವೂ ಇಲ್ಲ, ಯಾವುದೇ ಸೌಲಭ್ಯಗಳಿಲ್ಲದೆ ದುಡಿಯುತ್ತಿರುವ ಏಕೈಕ ವರ್ಗ ನಮ್ಮದು. ಬೇರೆ -ಬೇರೆ ಇಲಾಖೆಗಳಂತೆ ಅತಿಥಿ ಉನ್ಯಾಸಕರನ್ನು ಪರಿಗಣಿಸಿ ಶಾಶ್ವತ ಭದ್ರತೆ ಒದಗಿಸಿ, ಕಾಯಾಮಾತಿ ಮಾಡಬೇಕು. ಸುಮಾರು 10-15 ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿ ದುಡಿಯುತ್ತಿರುವ ನಮಗೆ ಬೇರೆ ಯಾವುದೇ ವೃತ್ತಿ ಮಾಡಲು ಸಾಧ್ಯವಾಗುತ್ತಿಲ್ಲ. ಅತಿಥಿ ಉಪನ್ಯಾಸಕರನ್ನು ವಿಶೇಷವಾಗಿ ಪ್ರಕರಣ ಎಂದು ಪರಿಗಣಿಸಿ ಭದ್ರತೆ ಕಲ್ಪಿಸಬೇಕು ಎಂದರು.
ಹಿರಿಯ ಅತಿಥಿ ಉಪನ್ಯಾಸಕ ಕೆಂಚರಾಯಪ್ಪ ಮಾತನಾಡಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶೇಕಡ 80ರಷ್ಟು ಅತಿಥಿ ಉಪನ್ಯಾಸಕರು ಸೇವೆ ಸಲ್ಲಿಸುತ್ತಿದ್ದಾರೆ. ರಾಜ್ಯಾದ್ಯಂತ ಸುಮಾರು 14 ಸಾವಿರ ಅತಿಥಿ ಉಪನ್ಯಾಸಕರಿದ್ದು ನಾವು ಸುಮಾರು 20 ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬರುತ್ತಿದ್ದೇವೆ ಎಂದರು.
ಮಾಡು ಇಲ್ಲವೇ ಮಡಿ ಎಂಬ ಧ್ಯೇಯ ವಾಕ್ಯದೊಂದಿಗೆ ನಾವು ಹೋರಾಟ ಪ್ರಾರಂಭಿಸಿದ್ದು ಸರ್ಕಾರ ನಮಗೆ ಲಿಖಿತ ರೂಪದ ಆದೇಶ ನೀಡುವವರೆಗೂ ಹೋರಾಟ ಮುಂದುವರೆಯುತ್ತದೆ ಎಂದು ಎಚ್ಚರಿಕೆ ನೀಡಿದರು.
ಧರಣಿಯಲ್ಲಿ ಅತಿಥಿ ಉಪನ್ಯಾಸಕರಾದ ಹೇಮಾವತಿ, ಅನಿತಾ, ಅಂಬಿಕಾ, ಭವ್ಯ, ಗಿರೀಶ್ ,ಎರ‍್ರಿಸ್ವಾಮಿ, ವೇದಮೂರ್ತಿ ,ಶಿವಣ್ಣ ತಿಮ್ಮಲಾಪುರ, ಶಂಕರಪ್ಪ ಹಾರೋಗೆರೆ, ಶಶಿ, ಚಿತ್ತಯ್ಯ, ಕಾಂತರಾಜು ಸೇರಿ ಇತರರು ಇದ್ದರು.