ನಾವು ಚುನಾವಣೆಗೆ ಮುಂಚಿತವಾಗಿ ಮೀನುಗಾರಿಕಾ ಸಮುದಾಯಕ್ಕೆ ಸಾಕಷ್ಟು ಭರವಸೆ ನೀಡಿದ್ದೇವೆ. ಅದನ್ನು ಈಡೇರಿಸಲು ನಾವು ಬದ್ದರಾಗಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭರವಸೆ ನೀಡಿದ್ದಾರೆ.
ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಹಮ್ಮಿಕೊಂಡಿದ್ದ ವಿಶ್ವ ಮೀನುಗಾರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮೀನನ್ನು ನಾವು ದೇವರ ಸ್ವರೂಪ ಎಂದು ಕರೆಯುತ್ತೇವೆ. ಶ್ರೀಮನ್ ನಾರಾಯಣನಿಗೆ ಮೀನನ್ನು ಹೋಲಿಸುತ್ತೇವೆ ಎಂದರು.
ಮೀನುಗಾರಿಕಾ ಸಚಿವ ಮಂಕಾಳ ವೈದ್ಯ ಅವರು ಸರ್ಕಾರದ ಸಹಕಾರ ಪಡೆದು ಸಮುದಾಯದವರಿಗೆ ಸಾಕಷ್ಟು ಸೌಲಭ್ಯಗಳನ್ನು ತಲುಪಿಸುತ್ತಿದ್ದಾರೆ. ಬರೀ ಸಮುದ್ರದಲ್ಲೇ ಮೀನುಗಾರಿಕೆ ಮಾಡುವುದಕ್ಕಿಂತ ಸಿಹಿ ನೀರಿನ ಮೀನುಗಾರಿಕೆ ಮಾಡಲು ಸಮುದಾಯದವರು ಮುಂದಾಗಬೇಕು. ಸರ್ಕಾರ ಈಗಾಗಲೇ ಏತ ನೀರಾವರಿ ಮೂಲಕ ಸಾಕಷ್ಟು ಕೆರೆಗಳನ್ನು ತುಂಬಿಸಿದ್ದು ಹರಾಜಿನ ಮೂಲಕ ಹಂಚಿಕೆ ಮಾಡಲಾಗುವುದು ಎಂದು ಹೇಳಿದ್ದಾರೆ.
ಎಳೆಯ ಪ್ರಾಯದಲ್ಲಿ ನಾನು ಕೂಡ ನಮ್ಮೂರಿನ ಬಳಿಯ ಸಂಗಮದಲ್ಲಿ ಮೀನು ಹಿಡಿಯಲು ಹೋಗುತ್ತಿದ್ದೆ. ಗಾಳ ಹಾಕಿ ತಾಸುಗಟ್ಟಲೆ ಕುಳಿತುಕೊಳ್ಳಲು ತಾಳ್ಮೆ ಬೇಕು. ಮಹಶೀರ್ ಮೀನು ಹಿಡಿದು ಕೆರೆಯಲ್ಲಿ ವಾಪಸ್ ಬಿಡಲು ಆಗ ಹೊರದೇಶದಿಂದಲೂ ಬರುತ್ತಿದ್ದರು. ಮೀನುಗಾರಿಕಾ ಸಮುದಾಯದವರೂ ಕೂಡ ಉತ್ತಮ ತಳಿಗಳನ್ನು ತಂದು ಸಾಕಿ ಲಾಭ ಮಾಡಬೇಕು ಎಂದು ತಿಳಿಸಿದರು.