Sunday, September 8, 2024
Google search engine
Homeಜಿಲ್ಲೆನಾಮನಿರ್ದೇಶನದಲ್ಲಿ ನಿಷ್ಠಾವಂತರ ಕಡೆಗಣನೆ - ತುಮಕೂರು ಜಿಲ್ಲೆ ಕಾಂಗ್ರೆಸ್ ಮುಖಂಡರ ಅಸಮಾಧಾನ

ನಾಮನಿರ್ದೇಶನದಲ್ಲಿ ನಿಷ್ಠಾವಂತರ ಕಡೆಗಣನೆ – ತುಮಕೂರು ಜಿಲ್ಲೆ ಕಾಂಗ್ರೆಸ್ ಮುಖಂಡರ ಅಸಮಾಧಾನ

ಹಲವಾರು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಸಂಘಟನೆಗೆ ದುಡಿದ ಕಾರ್ಯಕರ್ತರನ್ನು ಕಡೆಗಣಿಸಿ ಪಕ್ಷಕ್ಕೆ ಯಾವುದೇ ಕೊಡುಗೆ ನೀಡದ ಕೆಲವರಿಗೆ ಸರ್ಕಾರದ ವಿವಿಧ ಹುದ್ದೆಗಳಿಗೆ ನಾಮನಿರ್ದೇಶನ ಮಾಡಲಾಗಿದೆ ಎಂದು ಜಿಲ್ಲೆಯ ಹಲವು ಕಾಂಗ್ರೆಸ್ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತುಮಕೂರು ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಸಭೆ ನಡೆಸಿದ ಮುಖಂಡರು, ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಗಮನಕ್ಕೂ ಬಾರದಂತೆ ಜಿಲ್ಲೆಯ ಕೆಲವರಿಗೆ ವಿವಿಧ ಹುದ್ದೆಗಳಿಗೆ ನಾಮನಿರ್ದೇನ ಮಾಡಲಾಗಿದೆ. ಇದು ಪಕ್ಷದ ಸಂಘಟನೆಗೆ ದುಡಿದ ನಿಷ್ಠಾವಂತ ಕಾರ್ಯಕರ್ತರಿಗೆ ಮಾಡಿದ ಅವಮಾನ. ಕೂಡಲೇ ಅಂತಹ ನೇಮಕಾತಿಗಳನ್ನು ರದ್ದುಪಡಿಸಿ ಅರ್ಹರಿಗೆ ನೀಡಬೇಕು ಎಂದು ಒತ್ತಾಯಿಸಿದರು.

ರಾಷ್ಟ್ರೀಯ ಮಜ್ದೂರು ಕಾಂಗ್ರೆಸ್ ಮಾಜಿ ಕಾರ್ಯದರ್ಶಿ ಎಸ್.ಟಿ.ಶ್ರೀನಿವಾಸ್ ಮತನಾಡಿ, ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಕೆಲಸ ಮಾಡದ, ಪಕ್ಷದ ಕಾರ್ಯಚಟುವಟಿಕೆಗಳಲ್ಲಿ ಭಾಗವಹಿಸದ, ಪಕ್ಷದ ಸಂಘಟನೆ, ಬಲವರ್ಧನೆಗೆ ಯಾವುದೇ ಪ್ರಯತ್ನ ಮಾಡದವರಿಗೆ ರಾಜ್ಯ ಹಾಗೂ ವಿವಿಧ ಮಟ್ಟದ ಹುದ್ದೆಗಳಿಗೆ ನಾಮನಿರ್ದೇಶನ ಮಾಡಲಾಗಿದೆ. ಇದು ಪಕ್ಷದ ನಿಷ್ಟಾವಂತರಿಗೆ ನೇವು ಉಂಟು ಮಾಡಿದೆ ಎಂದು ಅಸಮಾಧಾನ ಹೊರಹಾಕಿದರು.

ಇಂತಹ ನೇಮಕಾತಿಗಳು ಪಕ್ಷಕ್ಕಾಗಿ ದುಡಿಯುತ್ತಿರುವವರಿಗೆ ನಿರಾಶೆ ಮಾಡಿದೆ, ಪಕ್ಷದ ನಾಯಕರ ಬಗ್ಗೆ ವಿಶ್ವಾಸ ಕಳೆದುಕೊಳ್ಳುವಂತಾಗಿದೆ. ಪಕ್ಷ ಕಟ್ಟುವ ಕಾರ್ಯಗಳಲ್ಲಿ ಶ್ರಮಿಸುವವರಿಗೆ ಬೆಲೆ ಇಲ್ಲದಂತಾಗಿದೆ. ಲೋಕಸಭಾ ಚುನಾವಣೆ ಎದುರಿಗಿರುವ ಈ ಸಂದರ್ಭದಲ್ಲಿ ನಾಮನಿರ್ದೇಶನದಲ್ಲಿ ನಿಷ್ಠಾವಂತರನ್ನು ಕಡೆಗಣಿಸಿರುವುದು ಒಳ್ಳೆಯ ನಿರ್ಧಾರವಲ್ಲ. ಪಕ್ಷಕ್ಕೆ ಹೊಸದಾಗಿ ಬರುವವರು ಪಕ್ಷಕ್ಕೆ ಸೇವೆ ಸಲ್ಲಿಸುವುದರ ಆಧಾರದ ಮೇಲೆ ಮುಂದಿನ ದಿನಗಳಲ್ಲಿ ಅವರಿಗೆ ಸೂಕ್ತ ಸ್ಥಾನ ನೀಡಬಹುದು ಎಂದರು.

ಕಾಂಗ್ರೆಸ್ ಪಕ್ಷದ ಸದಸ್ಯರಲ್ಲದ ಚಿಕ್ಕಣ್ಣ ಸ್ವಾಮಿ ದೇವಸ್ಥಾನದ ಧರ್ಮದರ್ಶಿ ಪಾಪಣ್ಣನವರಿಗೆ ರಾಜ್ಯ ಕೃಷಿಕ ಸಮಾಜದ ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಕಳೆದ ಚುನಾವಣೆಯಲ್ಲಿ ತುಮಕೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಅವರದೇ ಸಮುದಾಯದ ಷಣ್ಮುಖಪ್ಪನವರ ಗೆಲುವಿಗೆ ಪಾಪಣ್ಣನವರು ಕೆಲಸ ಮಾಡಲಿಲ್ಲ, ಬದಲಿಗೆ ನಮ್ಮ ಅಭ್ಯರ್ಥಿ ವಿರುದ್ಧ ಕೆಲಸ ಮಾಡಿದರು. ಅಂತಹವರಿಗೆ ರಾಜ್ಯಮಟ್ಟದ ಸ್ಥಾನಕ್ಕೆ ನೇಮಕ ಮಾಡಿರುವ ಕ್ರಮ ಸರಿಯಲ್ಲ ಎಂದು ಶ್ರೀನಿವಾಸ್ ಹೇಳಿದರು.

ಇಂತಹ ನೇಮಕಾತಿಗಳನ್ನು ಕೂಡಲೇ ರದ್ದುಮಾಡಿ ಪಕ್ಷನಿಷ್ಠರಿಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಗೌಡರ ಮೂಲಕ ಕೆಪಿಸಿಸಿ ಅಧ್ಯಕ್ಷರು ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ತುಮಕೂರು ಗ್ರಾಮಾಂತರ ಕ್ಷೇತ್ರದ ಅಭ್ಯರ್ಥಿಯಾಗಿದ್ದ ಷಣ್ಮುಖಪ್ಪ, ಜಿ.ಪಂ. ಮಾಜಿ ಸದಸ್ಯ ಕೆಂಚಮಾರಯ್ಯ, ಜಿಲ್ಲಾ ಎಸ್ಸಿ ಘಟಕ ಅಧ್ಯಕ್ಷ ನಿಂಗರಾಜು, ಎಸ್ಟಿ ಘಟಕದ ಅಧ್ಯಕ್ಷ ನರಸಿಂಹಯ್ಯ, ಟೂಡಾ ಮಾಜಿ ಅಧ್ಯಕ್ಷ ಸಿದ್ಧಲಿಂಗೇಗೌಡ, ಮುಖಂಡರಾದ ಪಿ.ಶಿವಾಜಿ, ಕೆಂಪಣ್ಣ, ರೈತ ಘಟಕ ಜಿಲ್ಲಾಧ್ಯಕ್ಷ ಜಿ.ಎಲ್.ಗೌಡ, ಕೆಂಪರಾಜು ಮತ್ತಿತರರು ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular