ಕೃಷಿ ಕಾಯ್ದೆಯನ್ನು ಕೂಡಲೇ ಹಿಂಪಡೆಯುವಂತೆ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಒತ್ತಾಯಿಸಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ನಾವು ತಕ್ಷಣ ಹಿಂದಕ್ಕೆ ಪಡೆಯುತ್ತೇವೆ ಎಂದು ಡಿಸಿಎಂ ಡಿಕೆಶಿವಕುಮಾರ್ ಹಾಗೂ ಸಿಎಂ ಸಿದ್ದರಾಮಯ್ಯ ರವರು ಹೇಳಿದ್ದರು. ಈಗ ಅವರದೇ ಸರ್ಕಾರ ಆಡಳಿತದಲ್ಲಿದ್ದು, ಕೂಡಲೇ ಕೃಷಿ ಕಾಯ್ದೆ ಹಿಂಪಡೆಯಬೇಕೆಂದು ಆಗ್ರಹಿಸಿದರು.
ಕೃಷಿ ಮಾರುಕಟ್ಟೆ ಸಚಿವ ಶಿವಾನಂದ್ ಪಾಟೀಲ್ ರವರು ವಿಧಾನ ಸಭೆಯಲ್ಲಿ ಎಪಿಎಂಸಿ ಕಾಯ್ದೆ ವಾಪಸ್ ಪಡೆಯುವ ಬಗ್ಗೆ ಬಿಲ್ ಮಂಡನೆ ಮಾಡಿದ್ದು ಇದಕ್ಕೆ ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದ್ದು ನಾವು ರೈತರೊಂದಿಗೆ ಚರ್ಚೆ ಮಾಡಿ ತೀರ್ಮಾನಿಸುತ್ತೇವೆ ಎಂದು ತಿಳಿಸಿದ್ದರು. ಇದು ಸಿದ್ದು ಸರ್ಕಾರದ ಒಂದು ಜಾಣ ನಡೆ ಆಗಿದೆ ಎಂದು ಟೀಕಿಸಿದ್ದಾರೆ.
ಕೃಷಿ ಭೂಮಿ ಬೇರೆ ಉದ್ದೇಶಗಳಿಗೆ ಹೋಗಬಾರದು, ಈ ಭೂಮಿಯಿಂದಲೇ ನಾವು ಅನ್ನ ತಿನ್ನಲು ಸಾಧ್ಯವಾಗಿದೆ ಇದನ್ನು ಮುಂದಿನ ತಲೆಮಾರಿಗೆ ಉಳಿಸಬೇಕು, ಇದು ಸದಾ ರೈತರಲ್ಲಿ ಇರಬೇಕು, ಈ ಕಾಯ್ದೆ ಭೂಮಿಯನ್ನು ಯಾರು ಬೇಕಾದರೂ ಖರೀದಿ ಮಾಡಬಹುದು ಎಂದು ಇದ್ದು ಹಾಗೂ ಸಬ್ ರಿಜಿಸ್ಟರ್ ಕಚೇರಿ 7-10 ಗಂಟೆಯವರೆಗೆ ಕೆಲಸ ನಿರ್ವಹಿಸುವ ಮುಖೇನ ಹಲವು ರೈತರು ತಮ್ಮ ಜಮೀನುಗಳನ್ನು ಕಳೆದುಕೊಂಡಿರುತ್ತಾರೆ ಎಂದು ಆರೋಪಿಸಿದರು.
ಬಿಜೆಪಿ ಅಜೆಂಡಾವನ್ನು ಸಿದ್ದರಾಮಯ್ಯ ರವರು ಜಾರಿಗೆ ತರುತ್ತಿದ್ದಾರೆ, ರೈತರ ಮೇಲೆ ಮಾಡುತ್ತಿರುವ ದೊಡ್ಡ ಅನಾಚಾರ ಆಗಿದೆ. ರೈತರಿಗೆ ಅನುಕೂಲವಾಗುವ ಒಂದೆರಡು ಕಾರ್ಯ ಇದ್ದರೆ ಸಿದ್ದು ಸರ್ಕಾರ ಹೇಳಲಿ, ಸೆಪ್ಟೆಂಬರ್ 22 ರಂದು ನೀವು ಹೊರಡಿಸಿದ ಆದೇಶದಲ್ಲಿ ಟ್ರಾನ್ಸ್ ಫಾರ್ಮರ್, ವೈರ್ ಇತ್ಯಾದಿಗಳನ್ನು ಮಾರುಕಟ್ಟೆ ಯಲ್ಲಿ ಖರೀದಿ ಮಾಡಿ ಬದಲಿಸಿಕೊಳ್ಳಬೇಕು ನಮ್ಮ ಸರ್ಕಾರ ಉಚಿತವಾಗಿ ನೀಡುವುದಿಲ್ಲ ಎಂದು ಹೇಳಿದ್ದಾರೆ, ನಾವು ಪಾದಯಾತ್ರೆ ಮಾಡಿದರೂ ಸಹ ನಮ್ಮ ಮನವಿಯನ್ನು ಆಲಿಸಲಿಲ್ಲ ಎಂದು ದೂರಿದರು.