ಬರದಿಂದ ಬೆಳೆ ಕಳೆದುಕೊಂಡ ರೈತರಿಗೆ ಕಾಟಾಚಾರಕ್ಕೆ ಪರಿಹಾರ ವಿತರಿಸದರೆ, ವೈಜ್ಞಾನಿಕವಾಗಿ ಪರಿಹಾರ ನೀಡುವಂತೆ ತುಮಕೂರು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಸಿ.ಆಂಜನಪ್ಪ ಆಗ್ರಹಿಸಿದ್ದಾರೆ.
ತುಮಕೂರು ಜಿಲ್ಲೆಯಲ್ಲಿ ಬರ ಅಧ್ಯಯನ ಪ್ರವಾಸ ಕೈಗೊಂಡಿರುವ ಎರಡನೇ ತಂಡದ ನೇತೃತ್ವ ವಹಿಸಿರುವ ಅವರು, ತುಮಕೂರು ನಗರ ಸಮೀಪದ ವಡ್ಡರಹಳ್ಳಿ ಗ್ರಾಮದ ಸರ್ವೆ ನಂ 12ರಲ್ಲಿರುವ ಜಗದೀಶ್ ಬಿನ್ ಚಿಕ್ಕಣ್ಣ, ವಿಜಯಲಕ್ಷ್ಮಮ್ಮ ಕೋಂ ಕುಂಬಿನರಸಯ್ಯ ಅವರ ಜಮೀನಿನಲ್ಲಿ ಹಾಕಿದ್ದ ರಾಗಿ ಬೆಳೆ ವೀಕ್ಷಿಸಿದರು.
ಸಕಾಲಕ್ಕೆ ಮಳೆಯಾಗದೆ ಹಾಗೂ ವಿದ್ಯುತ್ ಕೊರತೆಯಿಂದ ರೈತರ ಬೆಳೆ ಸಂಪೂರ್ಣ ಒಣಗಿದೆ. ಎನ್.ಡಿ.ಆರ್.ಎಫ್ ನೆಪದಲ್ಲಿ ಭೀಕ್ಷೆಯ ರೀತಿ ಪರಿಹಾರ ವಿತರಿಸದರೆ ವೈಜ್ಞಾನಿಕವಾಗಿ ರೈತರಿಗೆ ಆಗಿರುವ ಸಂಪೂರ್ಣ ನಷ್ಟವನ್ನು ಪರಿಹಾರದ ರೂಪದಲ್ಲಿ ವಿತರಿಸಬೇಕು ಎಂದರು.
ರಾಜ್ಯ ಸರ್ಕಾರಕ್ಕೆ ರೈತರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ಇದ್ದಿದ್ದರೆ ಈ ವೇಳೆ ರೈತರ ಹೊಲಗದ್ದೆಗಳಿಗೆ ಭೇಟಿ ನೀಡಿ ರೈತರ ಅಹವಾಲುಗಳನ್ನು ಆಲಿಸುತಿದ್ದರು, ಆದರೆ ಇದುವರೆಗೂ ಶಾಸಕರು, ಸಚಿವರು ಇದುವರೆಗೂ ಕ್ಷೇತ್ರಗಳಿಗೆ ಭೇಟಿ ನೀಡಿಲ್ಲ. ಒಂದೆಡೆ ಮಳೆಯಿಲ್ಲದೆ ರೈತರ ಬೆಳೆ ಹಾಳಾದರೆ, ಬೊರೆವೆಲ್ ನೀರಿನಲ್ಲಿ ಬೆಳೆದಿರುವ ಸಾವಿರಾರು ಎಕರೆ ಬೆಳೆ ವಿದ್ಯುತ್ ಕೊರತೆಯಿಂದ ನೀರುಣಿಸಲಾಗದೆ ನಾಶವಾಗಿದೆ.ಇದಕ್ಕೆ ಸರ್ಕಾರವೇ ನೇರ ಹೊಣೆ ಎಂದು ಆರೋಪಿಸಿದರು.
ಪ್ರತಿಯೊಂದಕ್ಕೂ ಕೇಂದ್ರದ ಕೈಮಾಡಿದರೆ, ರಾಜ್ಯ ಸರ್ಕಾರದ ಜವಾಬ್ದಾರಿ ಏನು ಎಂದು ಪ್ರಶ್ನಿಸಿದ ಅವರು, ಪಾವಗಡ ತಾಲೂಕು ಒಂದರಲ್ಲಿಯೇ ಸುಮಾರು 22 ಸಾವಿರ ಹೆಕ್ಟೇರ್‌ನಲ್ಲಿ ಬೆಳೆದ ಬೆಳೆ ನಾಶವಾಗಿದೆ. ಕೇವಲ 17 ಕೋಟಿ ಪರಿಹಾರಕ್ಕೆ ವರದಿ ಕಳುಹಿಸಲಾಗಿದೆ. ಇಂದಿನ ಮಾರುಕಟ್ಟೆಯ ಬೆಲೆಯಂತೆ 110 ಕೋಟಿ ಬೆಳೆ ನಷ್ಟವಾಗಿದ್ದು, ಅಷ್ಟನ್ನೂ ರಾಜ್ಯ ಸರ್ಕಾರ ತುಂಬಿಕೊಡಬೇಕು ಎಂದು ಒತ್ತಾಯಿಸಿದರು.
ಜೆಡಿಎಸ್ ರಾಜ್ಯ ಮುಖಂಡ ಎ.ಗೋವಿಂದರಾಜು ಮಾತನಾಡಿ, ನವೆಂಬರ್ ತಿಂಗಳಲಿಯೇ ಬರದಿಂದ ಜನ, ಜಾನುವಾರುಗಳಿಗೆ ಕುಡಿಯುವ ನೀರು, ಮೇವಿನ ಕೊರತೆ ಉಂಟಾಗಿದೆ. ತೆನೆಕಟ್ಟುವ ವೇಳೆಗೆ ಮಳೆಯಿಲ್ಲದೆ ರಾಗಿಯೂ ಇಲ್ಲ. ಮೇವು ಇಲ್ಲದಂತಹ ಸ್ಥಿತಿ ಗ್ರಾಮೀಣ ಭಾಗದಲ್ಲಿದೆ. ರೈತರ ಕಣ್ಣೀರು ಒರೆಸುವ ಕೆಲಸವನ್ನು ಸರಕಾರ ಮಾಡಬೇಕು. ಸೂಕ್ತ ಪರಿಹಾರ ನೀಡಿ, ರೈತರ ಪರ ನಾವಿದ್ದೇವೆ ಎಂಬುದನ್ನು ಸಾಬೀತುಪಡಿಸಬೇಕೆಂದು ಆಗ್ರಹಿಸಿದರು.
ಮಾಜಿ ಶಾಸಕ ಹಾಗೂ ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಕೆ.ಎಂ.ತಿಮ್ಮರಾಯಪ್ಪ ಮಾತನಾಡಿ, ರಾಜ್ಯದಲ್ಲಿ ಬರ ಇದೆ ಎಂದು ಗೊತ್ತಿದ್ದರೂ ಇದುವರೆಗೂ ರಾಜ್ಯ ಸರ್ಕಾರ ಯಾವುದೇ ಮುಂಜಾಗ್ರತಾ ಕ್ರಮ ವಹಿಸಿಲ್ಲ. ಜಾನುವಾರುಗಳಿಗೆ ಮೇವು, ನೀರಿನ ಕೊರತೆ ಉಂಟಾಗಿದ್ದರೂ ಇದುವರೆಗೂ ಮೇವು ಸಂಗ್ರಹಣೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಜಿಲ್ಲೆಯಲ್ಲಿ ಸುಮಾರು 50ಕ್ಕೂ ಹೆಚ್ಚು ಗೋಶಾಲೆಗಳ ಅಗತ್ಯವಿದೆ. ಪ್ರತಿಯೊಂದಕ್ಕೂ ಕೇಂದ್ರದತ್ತ ಬೆರಳು ಮಾಡಿ, ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಹವಣಿಸುತ್ತಿದೆ ಎಂದು ಆರೋಪಿಸಿದರು.
ತುಮಕೂರು ಪಾಲಿಕೆ ಉಪಮೇಯರ್ ಟಿ.ಕೆ.ನರಸಿಂಹಮೂರ್ತಿ, ರೈತ ಮಹಿಳೆ ವಿಜಯಲಕ್ಷ್ಮಿ ತುಮಕೂರು ನಗರಪಾಲಿಕೆಯ ಸ್ಥಾಯಿ ಸಮಿತಿ ಅಧ್ಯಕ್ಷ ಎ.ಶ್ರೀನಿವಾಸ್, ಜೆಡಿಎಸ್ ನಗರ ಅಧ್ಯಕ್ಷ ವಿಜಯಗೌಡ, ಬೆಳಗುಂಬ ಗ್ರಾಮಪಂಚಾಯಿತಿ ಸದಸ್ಯ ಟಿ.ಡಿ.ರಾಜು ಇದ್ದರು.