Thursday, September 19, 2024
Google search engine
Homeಮುಖಪುಟದಲಿತರ ಮೇಲಿನ ದೌರ್ಜನ್ಯ ತಡೆಗಟ್ಟಲು ಆಗ್ರಹಿಸಿ ಡಿಸೆಂಬರ್ 4ರಂದು ದೆಹಲಿ ಚಲೋ

ದಲಿತರ ಮೇಲಿನ ದೌರ್ಜನ್ಯ ತಡೆಗಟ್ಟಲು ಆಗ್ರಹಿಸಿ ಡಿಸೆಂಬರ್ 4ರಂದು ದೆಹಲಿ ಚಲೋ

ನವೆಂಬರ್ 16ರಂದು ಬೆಂಗಳೂರಿನಲ್ಲಿ ನ್ಯಾಷನಲ್ ದಲಿತರ ಶೃಂಗಸಭೆ ನಡೆಯಲಿದ್ದು ಇದರಲ್ಲಿ 1 ಕೋಟಿ ಸಹಿ ಸಂಗ್ರಹದೊಂದಿಗೆ ಡಿಸೆಂಬರ್ 4ರಂದು ದೆಹಲಿ ಚಲೋ ಹಮ್ಮಿಕೊಳ್ಳಲಾಗಿದ ಎಂದು ದಲಿತ ಹಕ್ಕುಗಳ ಸಮಿತಿ ರಾಜ್ಯ ಸಂಚಾಲಕ ಗೋಪಾಲಕೃಷ್ಣ ಹರಳಹಳ್ಳಿ ತಿಳಿಸಿದ್ದಾರೆ.

ತುಮಕೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ದಲಿತರ ಸ್ಥಿತಿ ಇಂದಿಗೂ ಚಿಂತಾಜನವಾಗಿದೆ. ಉನ್ನತ ಸ್ಥಾನದ ಉದ್ಯೋಗಗಳು ಸಿಗುವ ಪರಿಸ್ಥಿತಿ ಇಲ್ಲ. ಉನ್ನತ ಶಿಕ್ಷಣದಲ್ಲಿ ಅವಕಾಶಗಳು ಒದಗುವ ಪರಿಸ್ಥಿತಿ ಇಲ್ಲ. ದಲಿತರಲ್ಲಿ ಅನಕ್ಷರಸ್ಥರ ಸಂಖ್ಯೆ ಶೇ.73.5ರಷ್ಟಿದೆ. ಇದು ರಾಷ್ಟ್ರೀಯ ಸರಾಸರಿ ಶೇ.80ಕ್ಕಿಂತ ಕಡಿಮೆ ಇದೆ ಎಂದು ಹೇಳಿದರು.

ರಾಜ್ಯದಲ್ಲಿ ದಲಿತರ ಮೇಲಿನ ದೌರ್ಜನ್ಯ ನಿರಂತರವಾಗಿ ಮುಂದುವರೆದಿದ್ದು, ಸರ್ಕಾರ ಇದರ ಬಗ್ಗೆ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿಲ್ಲ. ಬಹುತೇಕ ದಲಿತರ ಭೂಮಿಗಳು ಮೇಲ್ವರ್ಗದ ಕೈಸೇರಿದೆ. ಪಿಟಿಸಿಎಲ್ ಕಾಯ್ದೆಯು ನೆಪಮಾತ್ರಕ್ಕೆ ಇದ್ದು, ಇದರಿಂದಲೂ ಸಹ ಪ್ರಯೋಜನವಾಗಿಲ್ಲ. ದಲಿತರ ಸಮಸ್ಯೆಗಳ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗಂಭೀರವಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಒತ್ತಾಯಿಸಿ ಶೃಂಗಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಶೃಂಗಸಭೆಯ ನಂತರ ಡಿಸೆಂಬರ್ 4ರಂದು ದೇಶದ ಎಲ್ಲಾ ದಲಿತ ಸಂಘಟನೆಗಳು ಸೇರಿ ರಾಷ್ಟ್ರಪತಿಯವರಿಗೆ 6 ಕೋಟಿಗೂ ಹೆಚ್ಚು ಸಹಿ ಸಂಗ್ರಹ ಮಾಡಿ ಮನವಿ ಪತ್ರಗಳನ್ನು ಸಲ್ಲಿಸಲಾಗುವುದು ಎಂದು ಹೇಳಿದರು.

ದಲಿತ ಹಕ್ಕುಗಳ ಸಮಿತಿ ಜಿಲ್ಲಾ ಸಂಚಾಲಕ ಹಾಗೂ ಯುವ ವಕೀಲ ಈ.ಶಿವಣ್ಣ ಮಾತನಾಡಿ, ನಮ್ಮ ಜಿಲ್ಲೆಯಲ್ಲೂ ಸಹ ದಲಿತರ ಮೇಲಿನ ದೌರ್ಜನ್ಯಗಳು ಹೆಚ್ಚಳವಾಗಿವೆ. ಗೃಹ ಸಚಿವರು ಸರಿಯಾದ ರೀತಿಯಲ್ಲಿ ಈ ಬಗ್ಗೆ ಗಮನಹರಿಸುತ್ತಿಲ್ಲ. ಬಹುತೇಕ ದಲಿತ ದೌರ್ಜನ್ಯ ಪ್ರಕರಣಗಳು ದಾಖಲಾದ ಸಂದರ್ಭದಲ್ಲಿ ಪೊಲೀಸ್ ಇಲಾಖೆಯು ಸಹ ನ್ಯಾಯಾಲಯಕ್ಕೆ ಸರಿಯಾದ ದಾಖಲೆಗಳನ್ನು ಸಲ್ಲಿಸದೆ ಅಸಡ್ಡೆ ತೋರಿಸುತ್ತಿದೆ. ಇದರಿಂದ ದೌರ್ಜನ್ಯಕ್ಕೆ ಒಳಗಾದ ಬಹುತೇಕ ದಲಿತರಿಗೆ ನ್ಯಾಯ ಸಿಗುತ್ತಿಲ್ಲ ಎಂದು ಆರೋಪಿಸಿದರು.

ದೇಶದಲ್ಲಿ ಉಂಟಾಗಿರುವ ದಲಿತರ ಮೇಲಿನ ದೌರ್ಜನ್ಯಗಳು, ಆರ್ಥಿಕ ಅಸಮಾನತೆ, ಉದ್ಯೋಗ ಅವಕಾಶಗಳ ವಂಚನೆ, ಮೀಸಲಾತಿ ಆಧಾರದಲ್ಲಿ ಸರಿಯಾದ ರೀತಿಯಲ್ಲಿ ನೇಮಕಾತಿಗಳು ನಡೆಯುತ್ತಿಲ್ಲ. ಆದ್ದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದಲಿತ ಸಮುದಾಯಗಳಿಗೆ ಅವರಿಗೆ ಸಿಗಬೇಕಾದ ಅವಕಾಶಗಳನ್ನು ನೀಡಲು ಮುಂದಾಗಬೇಕು ಎಂದರು.

ಡಿಎಚ್.ಎಸ್ ರಾಜ್ಯ ಸಂಚಾಲಕ ಎನ್.ರಾಜಣ್ಣ ಮಾತನಾಡಿ, ದಲಿತರ ವಿರುದ್ಧದ ದೌರ್ಜನ್ಯಗಳು ಹೆಚ್ಚುತ್ತಲೇ ಇವೆ. ದಲಿತರ ಮೇಲೆ ವಿವಿಧ ಸ್ವರೂಪಗಳ ಅಸ್ಪೃಶ್ಯತೆಯ ಆಚರಣೆಗಳು ದೇಶದ ಹೆಚ್ಚಿನ ಕಡೆಗಳಲ್ಲಿ ನಿರಂತರವಾಗಿ ನಡೆಯುತ್ತಿವೆ. 2014 ರಿಂದ ಕೇಂದ್ರ ಹಾಗೂ ಹಲವಾರು ಬಿಜೆಪಿ ನೇತೃತ್ವದ ಸರ್ಕಾರಗಳು ಅಧಿಕಾರಕ್ಕೆ ಬಂದ ನಂತರದಲ್ಲಿ ಕಾರ್ಪೊರೇಟ್ ಮತ್ತು ಕೋಮುವಾದಿಗಳ ಶಾಮೀಲು ರಾಜಕೀಯ ಪರವಾದ ನೀತಿಗಳಿಂದ ಜಾತಿ ತಾರತಮ್ಯ ಮತ್ತು ಸಂವಿಧಾನದ ಆಶಯಗಳ ಉಲ್ಲಂಘನೆ ನಿರಂತರವಾಗಿ ಹೆಚ್ಚುತ್ತಿದೆ ಎಂದು ದೂರಿದರು.

ರಾಜ್ಯ ಮತ್ತು ದೇಶದಲ್ಲಿ ದಲಿತರಿಗಾಗುತ್ತಿರುವ ಚಾರಿತ್ರಿಕ ಅನ್ಯಾಯವನ್ನು ಸರಿಪಡಿಸಲು ಪ್ರಯತ್ನಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಜಾತಿ ದೌರ್ಜನ್ಯ ಮುಕ್ತ ಸಮಾಜಕ್ಕಾಗಿ ಎಲ್ಲಾ ಸಮಾನ ಮನಸ್ಕರು ಮುಂದಾಗುವುದು ಈ ಶೃಂಗ ಸಭೆಯ ಮಹೋನ್ನತ ಉದ್ದೇಶವಾಗಿದೆ. ಕರ್ನಾಟಕದಲ್ಲಿಯೂ ಪರಿಸ್ಥಿತಿ ಭಿನ್ನವಾಗಿಲ್ಲ. ಸಾಮಾಜಿಕ ನ್ಯಾಯದ ಪ್ರಶ್ನೆಯ ಸಂಘರ್ಷ ಎಲ್ಲರನ್ನೂ ಒಳಗೊಳ್ಳುವ ಸಂಘರ್ಷವಾಗಬೇಕಾಗಿದೆ ಎಂದರು.

ಡಿ.ಎಚ್.ಎಸ್ ಜಿಲ್ಲಾ ಸಂಚಾಲಕ ರಾಜು ವೆಂಕಟಪ್ಪ, ಕುಣಿಗಲ್ ನ ಭರತ್ ಎನ್.ಎಂ ಇತರರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular