ನಿಂತಿದ್ದ ಕ್ರೂಸರ್ ಕಾರಿಗೆ ಲಾಡಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಇಬ್ಬರು ಮೃತಪಟ್ಟಿರುವ ಘಟನೆ ತುಮಕೂರು ಸಮೀಪದ ಕೋರಾ ಬಳಿಯ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸಂಭವಿಸಿದೆ.
ಈ ದುರಂತದಲ್ಲಿ ಕ್ರೂಸರ್ ಚಾಲಕ ಶಂಕರ್ (35), ಖಾಸಗಿ ಪಡಿತರ ವಿತರಣಾ ಕೇಂದ್ರದ ಮಾಲೀಕ ಸತೀಶ್ (40) ಮೃತಪಟ್ಟಿದ್ದಾರೆ. ಮೃತರನ್ನು ಗಂಗಾವತಿ ಮೂಲದವರೆಂದು ತಿಳಿದುಬಂದಿದೆ.
ಗಂಗಾವತಿಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಕಮಿಷನ್ ಹಣ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗಿಯಾಗಲು ಶಂಕರ್ ಮತ್ತು ಸತೀಶ್ ತೆರಳುತ್ತಿದ್ದರು ಎನ್ನಲಾಗಿದೆ.
ಮಾರ್ಗ ಮಧ್ಯೆ ಅಂದರೆ ಕೋರಾ ಬಳಿ ಕಾರು ಬಂದಾಗ ಹಿಂದಿನ ಟೈಯರ್ ಪಂಕ್ಚರ್ ಆಗಿದೆ. ಹೀಗಾಗಿ ಹೆದ್ದಾರಿ ಬದಿಯಲ್ಲಿ ಕ್ರೂಸರ್ ಕಾರು ನಿಲ್ಲಿಸಿ ಟೈಯರ್ ಬದಲಿಸುತ್ತಿದ್ದರು. ಈ ವೇಳೆ ವೇಗದಿಂದ ಬಂದ ಲಾರಿ ಕ್ರೂಸರ್ ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇಂದು ಬೆಳಗಿನ ಜಾವ ಈ ದುರಂತ ಸಂಭವಿಸಿದ್ದು, ಮೃತ ದೇಹಗಳನ್ನು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಘಟನೆಯಲ್ಲಿ ಒಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತಕ್ಕೆ ಕಾರಣನಾದ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು ಪ್ರಕರಣ ದಾಖಲಿಸಿದ್ದಾರೆ.