Friday, November 22, 2024
Google search engine
Homeಮುಖಪುಟಕತೆಗಾರ ಎಸ್.ಗಂಗಾಧರಯ್ಯ ಕುರಿತು ಒಂದಿಷ್ಟು ಮಾತು

ಕತೆಗಾರ ಎಸ್.ಗಂಗಾಧರಯ್ಯ ಕುರಿತು ಒಂದಿಷ್ಟು ಮಾತು

ಬುನಿಯನ್ ಕತೆಗಳು. ಹಿರಿಯ ಕತೆಗಾರರಾದ ಎಸ್. ಗಂಗಾಧರಯ್ಯನವರ ಅನುವಾದ ಕೃತಿಗೆ “ಶಾ ಬಾಲೂರಾವ್” ಈ ವರ್ಷದ ಪ್ರಶಸ್ತಿ ಬಂದಿದೆ. ಅನುವಾದಕರು ಮತ್ತು ಕತೆಗಾರರು ಎಸ್. ಗಂಗಾಧರಯ್ಯನವರು ಶೆಟ್ಟೀಕೆರೆ ತವುಲ ಮಾಕುವಳ್ಳಿಯವರು. ಹಾಲ್ಕುರಿಗೆ ಅಮಾನಿಕೆರೆ ಸುವರ್ಣನದಿ ಉಗಮವಾಗುವ ಜಾಗ ದಾಟಿದರೆ ಅದರಾಚೆಯ ಮೂಡ್ಲಾಗಿ ಕೆಳ ನೆಲದ ಹಾದಿಗುಂಟಾ ಹೋದರೆ ಮಾಕುವಳ್ಳಿ ಹಾದಿ. ದಿಬ್ಬ ಹತ್ತಿದರೆ ಮಾಕುವಳ್ಳಿ ಗೊಲ್ಲರ ಹಟ್ಟಿ. ವೊಷ್ಟು ದೂರ ಕಾಲ್ದಾರಿಯಲ್ಲೇ ಹೋದರೆ ಮಾಕುವಳ್ಳಿ ಗ್ರಾಮಠಾಣ. ಅತ್ತಮಖನಾಗಿ ಪಡುಲಾಗಿ ಪಟ್ಟದ ದೇವರಕೆರೆ, ಕರ್ನಾಟಕ ರಾಜ್ಯ ಮೀಸಲು ಅರಣ್ಯ ಮತ್ತು ಅಮೃತ್ ಮಹಲ್ ಕಾವುಲು. ಪ್ರಸಿದ್ದ ಜಾನುವಾರು ತಳಿ ಪರಂಪರೆಯ ಹುಲ್ಲುಗಾವಲು. ಬೋರನ ಕಣಿವೆ ಜಲಾಶಯಕ್ಕೆ ಬಳ್ಳಿ ಬಳ್ಳಿಯಾಗಿ ಹರಿದಿರುವ ನೂರಾರು ಹಳ್ಳಗಳು. ಸಾಲಳ್ಳಿಗಳ ತಡಾದು ಬೆಳೆದಿರುವ ಸಾಲುಕೆರೆಗಳ ಸರಮಾಲೆಯೊಳಗೆ ಪೂರ್ವಿಕರು ಹಿಡಿಗಂಟು ಕಟ್ಟಿ ಇಟ್ಟಂತಹ ಜಲಕಾಯಗಳು ಹಲವಾರು.

ಮಾಕುವಳ್ಳಿ ಈಶಾನ್ಯಕ್ಕೆ ಚಿಕ್ಕನಾಯ್ಕನಹಳ್ಳಿ, ನೈರುತ್ಯಕ್ಕೆ ಮಂಚೆಕಲ್ಲು ಬೆಟ್ಟದ ಹಾದಿ. ಹಾದಿನಾಯ್ಕನಹಳ್ಳಿ ಅಳಲೆಕಾಯಿ ವನದ ಮುಂದಲ ಹಾದಿ ಒಳಗೇ ಬರೋ ತಿಪಟೂರು. ಬೂದಾಳು ಮೂಲೆಗೆ ಜಾಲಗಿರಿ ದಿಬ್ಬ. ಕುಪ್ಪೂರು ಗುಡ್ಡ ದಾಟಿದರೆ ಇವರು ವೃತ್ತಿ ಬದುಕು ಪೂರೈಸಿದ ಕಾಲೇಜು. ಇವುಗಳನ್ನೆಲ್ಲಾ ಅಡವು ಮಾಡಿಕೊಂಡವುಗಳ ಹಾಗೆ ಇವರ ಹಲವಾರು ಕತೆಗಳು ಮೂಡುತ್ತಾ, ಮೈದಾಳಿ ಬೆಳೆಯುತ್ತಾ ಹೋಗುತ್ತವೆ. ಇದೇ ಪಾಸಲೆಯ ಜನರ ಬದುಕಿನ ಭಾಷೆಯೂ ಇವರ ಕತೆಗಳಲ್ಲಿ ಬಳಕೆಯಾಗುತ್ತದೆ.

ತತ್ವಪದಕಾರ ಚುಂಗದಹಳ್ಳಿ ಶಿವಪ್ಪ ಮತ್ತು ಶೆಟ್ಟೀಕೆರೆ ಕಾರಬ್ಬದ ಹಾಗೆಯೇ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಎಸ್. ಗಂಗಾಧರಯ್ಯನವರ ಹೆಸರೂ ಒಕ್ಕಬಳಕೆಯಾಗಿದೆ. ತತ್ವಪದ ರಚನೆಕಾರ ಚುಂಗದಹಳ್ಳಿ ಶಿವಪ್ಪನವರು ಈ ಪಾಸಲೆಯವರೆ.

ವೈಕಂ ಗಂಗಾಧರಯ್ಯ ಎಂತಲೇ ಸಾಹಿತ್ಯ ರಂಗದಲ್ಲಿ ಮೊದಮೊದಲು ಹೆಸರುವಾಸಿಯಾದ ಇವರ “ವೈಕಂ ಕತೆಗಳು” ಅನುವಾದ ಕೃತಿಗೆ ‘ಕರ್ನಾಟಕ ಸಾಹಿತ್ಯ ಅಕಾಡೆಮಿ’ ಪ್ರಶಸ್ತಿ ದಶಕದ ಹಿಂದೆಯೇ ಬಂದಿತ್ತು. ಕನ್ನಡ ಸಾಹಿತ್ಯದಲ್ಲಿ ಕತೆಗಾರರಾಗಿ ನೆಲೆಯಾಗಿ ಗುರುತಿಸಿಕೊಂಡ ಇವರ ಇತ್ತೀಚಿನ ಕೃತಿ, ಈ ತನಕದ ಕತೆಗಳು “ಯರೆನೆತ್ತಿ” ಪ್ರಕಟವಾಯಿತು. ನವಿಲ ನೆಲ, ಒಂದು ಉದ್ದನೆಯ ನೆರಳು, ದೇವರ ಕುದುರೆ ಮತ್ತು ಮಣ್ಣಿನ ಮುಚ್ಚಳ ಕತಾ ಸಂಕಲನಗಳು ‘ಯೆರೆನೆತ್ತಿ’ ಒಳಗೆ ಇವೆ ಈ ತನಕದ ಕತೆಗಳಾಗಿ.

‘ಯೆರೆ ನೆತ್ತಿ’ ಗುಣವಾದ ಅಪರೂಪದ ಭೌಗೋಳಿಕ ಸನ್ನಿವೇಶವೂ ಹೌದು ಈತನಕದ ಕತಾಸಂಕಲನವೂ ಹೌದು; ನಮ್ಮ ಸುತ್ತಿನೊಳಗೆ. ಯೆರೆ ನೆತ್ತಿ, ಯ ರೆದಿಬ್ಬ, ಯರೆ ಹೊಲ, ಯರೆ ಭೂಮಿ, ಯೆರೆ ನೆಲ, ಯೆರೆ ಕೆಬ್ಬೆ ಹೀಗೆಲ್ಲಾ ಕರೆಯಲಾಗುವುದು. ಬಿತ್ತಿದ ಬೀಜ, ಬಿದ್ದ ಕಾಯಿ, ಹುಲ್ಲು ಕಾಳುದೇಕುಲುವೆ ದೇಕಿಯಾದರೂ ಅಪರೂಪವಾಗಿ ಬೆಳೆಯುವ ಫಸಲು ಕಟ್ಟುವ ಫಲವತ್ತಾದ ಜಾಗ. ಹಾಗೇಯೇ ಕತೆಗಳೂ ನಿರೂಪವಾಗಿವೆ. ಅಪರೂಪವಾಗಿ ಒಂದು ಪಾಸಲೆಯ ಭೌಗೋಳಿಕ ಭೂಗುಣ ಮತ್ತು ಬಾಳಿಬದುಕಿದ ಪಾತ್ರಗಳನ್ನು ಯರೆನೆತ್ತಿ ಒಳಗೆ ಹಿರಿಯರಾದ ಗಂಗಾಧರಯ್ಯ ಇಸ್ರಾಂಬಾಗಿ ಬೆಳೆಸುವ ಮೂಲಕ ಕತೆಗಳ ನಿರ್ಮಾಣದಲ್ಲಿ ಕಾಣತೊಡಗಿದವರಾಗಿ ಪರಿಚಯಕ್ಕೆ ಬರತೊಡಗುವರು ಅವರ ಬರೆಹಗಳನ್ನು ಓದುವಾಗ. ‘ಇವು ನಮ್ಮವೆ ಕತೆಗಳು; ಕಂಡ ಹಾಗೆ ಬರೆದಿದ್ದಾರಲ್ಲ? ಎನಿಸುವಷ್ಟರ ಮಟ್ಟಿಗೆ, ಅವರು ಕತನಕಾಯಕದೊಳಗೆ ನಿರೂಪಿಸಿದ್ದಾರೆ’.

ವೈಕಂ ಕತೆಗಳು, ಸೀಬೆ ಸೊಗಡು, ಗುಲಾಭಿ ಗರ್ಭ, ಜಮೀಲಾ, ಚರಮಗೀತೆ, ನಾಟಕ ‘ಎರ್ಮಾ’, ಬೇಟೆಗಾರನ ಚಿತ್ರಗಳು, ಹಲವು ರೆಕ್ಕೆಯ ಹಕ್ಕಿ, ಬುನಿಯನ್ ಕತೆಗಳು ಇವುಗಳನ್ನೂ ಕನ್ನಡಕ್ಕೆ ತರುಯವಾಗ ಅನುವಾದಿತ ಇವರ ಕೃತಿಗಳು ಸ್ಥಳೀಯ ಭಾಷಾ ಹವಾಗುಣಕ್ಕೆ ಒಗ್ಗುವ ಹಾಗೆಯೇ ಇವೆ.

ನಾಡಿನ ಹೆಸರಾಂತ ಕತೆಗಾರ ಎಸ್. ಗಂಗಾಧರಯ್ಯ ಅವರಿಗೆ ‘ಶಾ ಬಾಲೂರಾವ್’ ಪ್ರಶಸ್ತಿ ಬಂದಿರುವುದು ಹೆಮ್ಮೆಯ ಸಂಗತಿ. ನಾಡೆಲ್ಲಾ ಕನ್ನಡ ರಾಜ್ಯೋತ್ಸವ ಆಚರಿಸುವ ನವಂಬರ್ ತಿಂಗಳೂ ಒಂದು ವಿಶೇಷ ಸಂದರ್ಭ.
ಹೋರಾಟ, ಅನುವಾದ, ಕೃಷಿ, ಮೇಷ್ಟ್ರ ಹೀಗೆಲ್ಲಾ ಆಗಿ, ಏಗುತ್ತಾ ಆಗಾಗ ಸಿಕ್ಕಿ ಮಾತನಾಡುವ ಎಸ್. ಗಂಗಾಧರಯ್ಯ ಅವರ ಜೊತೆಯಲ್ಲಿ ತಡಹೊತ್ತು ಕೂತು ಮಾತಾಡುವ ಎನಿಸುವಷ್ಟರ ಮಟ್ಟಿನ ಸಲುಗೆ. ಒಮ್ಮೊಮ್ಮೆ ಊಪ್ರುಕೆ ಮಾತಾಡಿ ಅರುಗಾಗುವುದೂ ಉಂಟು ಯಪ್ಪೆ ಮಾಡಿಕೊಂಡು.

ಗೆಳೆಯರೊಂದಿಗೆ; ಹೋಗೋ ಬಾರೋ ಎನ್ನುತ್ತಲೇ, ಒಂದು ಬೊಗಸೆ ನಗು ಚೆಲ್ಲಿ, ಅವಸರಕ್ಕೆ ಬಸ್ಸತ್ತಿ ಕೆಲಸಕ್ಕೆ ಹೋಗುತಿದ್ದ ಮೇಷ್ಟ್ರು. ಈಗ ಅವರಿಗೆ ನಿವೃತ್ತಿಯ ಇರಾಮವಾದ ಕಾಲ. ಹಳ್ಳಿ ಹಾದಿ ಒಳಗಲ, ದಾರಿ ಒಬ್ಬೆಯ ಬೇಸಾಯದ ಬದುಕಿನ ಬೆನ್ನಾಡಿಯೇ ಇರುವರು.

ಕಾದಂಬರಿ ಬರೆಯಲು ಗ್ರಾಮನಕಾಶೆಗಳಲ್ಲಿ ತಿರುಗಾಡುವ ಕ್ರಿಯಾಯೋಜನೆ ಸಿದ್ದಪಡಿಸಿಕೊಳ್ಳುವ ತವಕ ತಡಕಾಟದಲ್ಲಿದ್ದಾರೆ. ಅದಕ್ಕೂ ಮುಂಚೆ “ಆಸ್ಟ್ರೇಲಿಯಾದ ಅವಳು” ಇನ್ನೊಂದು ಇಂಬಾದ ಕತೆ ಬರೆಯಲೂ ಹೊಂಚಾಕುತ್ತಿರುವರು. ಆ ದಿನಗಳ ‘ಅವಳ’ ಜೊತೆಗಿನ ಬದುಕನ್ನು ಸಲೀಸಾಗಿ ಕನವರಿಸಿಕೊಂಡವರಂತೆ. ಒಂದು ನೆನಪಿನ ನೆಪವಾಗಿ ಕತೆ ಮುಂದುವರೆಯಬಹುದೇನೋ?

ಬೆಂಗಳೂರಿನಲ್ಲಿ ನಡೆಯುವ ಪ್ರಶಸ್ತಿ ಪ್ರಧಾನ ಕಾರ್ಯಕ್ರಮಕ್ಕೆ ಕರೆದಿದ್ದಾರೆ. ನೋಡಾನ; ಟೈಂ ಸಿಕ್ಕಿದರೆ, ಹೋಗಿಬರಬೇಕಾಗಬಹುದೇನೋ? ಹೋಗೋದು ಬಿಡೋದು ಆಮೇಗಿನ ಮಾತು. ಈಗ ಶುಭಾಷಯಗಳು ಸಾರ್.

ಲೇಖಕರು: ಉಜ್ಜಜ್ಜಿ ರಾಜಣ್ಣ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular