ಇಂದು ಸಮಾಜದಲ್ಲಿ ಸತ್ಯ ಹೇಳುವುದು ಕಷ್ಟವಾಗಿದೆ. ಸತ್ಯ ಹೇಳಿದರೆ ಯುಎಪಿಎ ಎಂಬ ಕಾನೂನಿನಡಿ ದೇಶದ್ರೋಹದ ಪಟ್ಟ ಹೊತ್ತು ಯಾವುದೇ ವಿಚಾರಣೆ ಇಲ್ಲದೆ ಜೈಲಿನಲ್ಲಿ ಕೊಳೆಯಬೇಕಾಗುತ್ತದೆ ಎಂದು ಹಿರಿಯ ವಕೀಲ ಪ್ರೊ.ರವಿವರ್ಮಕುಮಾರ್ ಆತಂಕ ವ್ಯಕ್ತಪಡಿಸಿದ್ದಾರೆ.
ತುಮಕೂರಿನ ಕನ್ನಡ ಭವನದಲ್ಲಿ ಬೆವರಹನಿ ಪತ್ರಿಕೆಯು ಐದು ವರ್ಷ ಪೂರೈಸಿದ್ದಕ್ಕಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಕಳೆದ ಎಂಟು ವರ್ಷಗಳಲ್ಲಿ ಸುಮಾರು 91 ಪತ್ರಕರ್ತರ ಕೊಲೆ ನಡೆದಿದೆ. 19ಕ್ಕೂ ಹೆಚ್ಚು ಪತ್ರಕರ್ತರು ಯುಎಪಿಎ ಅಡಿಯಲ್ಲಿ ಜೈಲಿನಲ್ಲಿದ್ದಾರೆ. ಸಂವಿಧಾನವನ್ನು ಬದಲಾಯಿಸುವ ಪ್ರಕ್ರಿಯೆ ನ್ಯಾಯಾಲಯಗಳ ಮೂಲಕ ನಡೆಯುತ್ತಿದೆ. ನೈಜ ಪತ್ರಕರ್ತರಿಗೆ ರಕ್ಷಣೆ ಇಲ್ಲದಂತಾಗಿದೆ. ಪ್ರಜಾಪ್ರಭುತ್ವ ಆಧಾರ ಸ್ತಂಭವಾಗಿರುವ ಪತ್ರಕರ್ತರ ರಕ್ಷಣೆಗೆ ಕಾನೂನಿನ ಅಗತ್ಯವಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮುಂದಾಗಬೇಕೆಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರಿಗೆ ಮನವಿ ಮಾಡಿದರು.
ಹಿಂದಿನಿಂದಲೂ ಪತ್ರಿಕೋದ್ಯಮ ಮುಂದುವರೆದವರ ಕೈಯಲ್ಲಿದೆ. ವಿಧಾನ ಪರಿಷತ್ ನಲ್ಲಿ ಮಾತ್ರವಲ್ಲದೆ ಪತ್ರಿಕೋದ್ಯಮದಲ್ಲಿ ಸಾಮಾಜಿಕ ನ್ಯಾಯ ಬೇಡವೇ? ಪರಿಶಿಷ್ಟ ಜಾತಿ, ವರ್ಗ ಮತ್ತು ಹಿಂದುಳಿದ ಸಮುದಾಯಗಳ ಜನರು ಪತ್ರಿಕೆಗಳ ಮುಖ್ಯ ಸ್ಥಾನಗಳಲ್ಲಿ ಇರಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಇಂದು ದಕ್ಷ ಮತ್ತು ಪ್ರಾಮಾಣಿಕ ವಕೀಲರು, ನ್ಯಾಯಾಧೀಶರಾಘಲು ಹಿಂಜರಿಯುವಂತಹ ಕಾಲ ಸೃಷ್ಟಿಯಾಗಿದೆ. ಆಳುವ ಸರ್ಕಾರಗಳು ತಮ್ಮ ಮೂಗಿನ ನೇರಕ್ಕೆ ತಮ್ಮ ಅಜೆಂಡಾ ಒಪ್ಪಿ, ಆ ಪ್ರಕಾರ ತೀರ್ಪು ನೀಡುವಂತಹ ನ್ಯಾಯಾಧೀಶರನ್ನು ಬಯಸುತ್ತಿದ್ದು ಕೊಲಿಜಿಯಂ ಶಿಫಾರಸ್ಸು ಮಾಡಿದರೂ ಕೆಲವು ಫೈಲುಗಳು ವರ್ಷ ಕಳೆದರೂ ಜಾರಿಗೆ ಬಾರದ ಕಾರಣ ನ್ಯಾಯಾಧೀಶರಾಗಲು ಕೆಲವರು ಹಿಂಜರಿಯುತ್ತಿದ್ದಾರೆ. ಇದು ಅಪಾಯದ ಸಂಕೇತ ಎಂದು ಹೇಳಿದರು.