ಆಸ್ತಿ ವಿಷಯಕ್ಕೆ ಸಂಬಂಧಿಸಿದಂತೆ ಜಗಳ ನಡೆದು ಮಹಿಳೆಯೊಬ್ಬರನ್ನು ಹತ್ಯೆ ಮಾಡಿರುವ ಘಟನೆ ತುಮಕೂರು ಜಿಲ್ಲೆ, ತುರುವೇಕೆರೆ ತಾಲೂಕಿನ ದಂಡಿನಶಿವರ ಸಮೀಪ ಇರುವ ಡಿ.ಪಾಳ್ಯದಲ್ಲಿ ನಡೆದಿದೆ.
ಡಿ.ಪಾಳ್ಯದ ನಂದೀಶ್ ಮತ್ತು ಶಿವಮ್ಮ ನಡುವೆ ಇಂದು ಜಗಳ ನಡೆದಿದ್ದು ಮಾತಿಗೆಮಾತು ಬೆಳೆದು ನಂದೀಶ್ 65 ವರ್ಷದ ಶಿವಮ್ಮ ಎಂಬ ಮಹಿಳೆಯನ್ನು ಹತ್ಯೆ ಮಾಡಿದ್ದಾನೆ.
ನಂದೀಶ್ ಮತ್ತು ಶಿವಮ್ಮ ನಡುವೆ ಆಸ್ತಿ ವಿಷಯಕ್ಕೆ ಸಂಬಂಧಿಸಿದಂತೆ ಆಗಾಗ ಜಗಳ ನಡೆಯುತ್ತಿತ್ತು ಎಂದು ಹೇಳಲಾಗಿದೆ. ಶನಿವಾರವೂ ಜಗಳ ನಡೆದಿದೆ. ಇಬ್ಬರ ನಡುವೆ ಮಾತು ತಾರಕಕ್ಕೇರಿದ್ದು ನಂದೀಶ್ ಶಿವಮ್ಮಳ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಿವಮ್ಮಳನ್ನು ಕೊಲೆ ಮಾಡಿದ ನಂದೀಶ್ ದಂಡಿನಶಿವರ ಠಾಣೆಗೆ ತೆರಳಿ ಪೊಲೀಸರ ಮುಂದೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ.
ಡಿ.ಪಾಳ್ಯಕ್ಕೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿದ್ದಾರೆ. ತನಿಖೆ ಮುಂದುವರೆದಿದೆ.


