ರಾಜ್ಯದಲ್ಲಿ ಬಿಜೆಪಿ ತನ್ನ ನೆಲೆಯನ್ನು ಕಳೆದುಕೊಂಡಿದೆ. ಆದ ಕಾರಣಕ್ಕೆ ತನ್ನ ಪಕ್ಷದ ಅನೇಕ ಹಿರಿಯ ನಾಯಕರಿಗೆ ವಿಶ್ರಾಂತಿ ನೀಡುವುದರ ಮೂಲಕ ಹೈಕಮಾಂಡ್ ಮನೆಗೆ ಕಳುಹಿಸಿದೆ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಉಪಾಧ್ಯಕ್ಷ ರಮೇಶ್ ಬಾಬು ಲೇವಡಿ ಮಾಡಿದ್ದಾರೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ಜೆಡಿಎಸ್ ನ ಎಚ್.ಡಿ.ಕುಮಾರಸ್ವಾಮಿ ಅವರಿಗೆ ರತ್ನಗಂಬಳಿ ಸ್ವಾಗತ ನೀಡಿ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಈಶ್ವರಪ್ಪ, ನಳೀನ್ ಕುಮಾರ್ ಕಟೀಲ್ ಸೇರಿದಂತೆ ಅನೇಕ ನಾಯಕರುಗಳಿಗೆ ವಿಶ್ರಾಂತಿಯ ಸೂಚನೆ ನೀಡಿದೆ ಎಂದು ಹೇಳಿದ್ದಾರೆ.
ಅಭೂತಪೂರ್ವ ಜೋಡಿಗಳಾಗಿ ಕುಮಾರಸ್ವಾಮಿ ಮತ್ತು ಸಿ.ಪಿ.ಯೋಗಿಶ್ವರ್ ಇಬ್ಬರೂ ಸೇರಿಕೊಂಡು ಕೀಳು ಹಾಗೂ ವೈಯಕ್ತಿಕ ಮಟ್ಟದ ಹೇಳಿಕೆ ನೀಡುತ್ತಿದ್ದಾರೆ. ರಾಜಕೀಯ ಅನಿವಾರ್ಯತೆ ಈ ಇಬ್ಬರಿಗೂ ಹೆಚ್ಚಾಗಿ ಕಾಡುತ್ತಿದೆ. ಡಿ.ಕೆ.ಶಿವಕುಮಾರ್ ಮತ್ತು ಡಿ.ಕೆ.ಸುರೇಶ್ ಅವರನ್ನು ಟೀಕೆ ಮಾಡಿದರೆ ಮಾತ್ರ ತಮ್ಮ ರಾಜಕೀಯ ಅಸ್ತಿತ್ವ ಉಳಿಯುತ್ತದೆ ಎಂದು ನಂಬಿದ್ದಾರೆ. ಯೋಗೇಶ್ವರ್ ಬಿಜೆಪಿಯಿಂದ ಒಂದು ಸಲ ಗೆಲುವು ಸಾದಿಸಿದ್ದು ಬಿಟ್ಟರೆ ಕಳೆದ 15 ವರ್ಷಗಳಲ್ಲಿ ಗೆಲುವು ಅನ್ನುವುದನ್ನೇ ಕಂಡಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಕುಮಾರಸ್ವಾಮಿ ತಮ್ಮ ಕುಟುಂಬವನ್ನು ರಕ್ಷಣೆ ಮಾಡಿಕೊಳ್ಳುವ ಸಲುವಾಗಿ, ಚನ್ನಪಟ್ಟಣವನ್ನು ಉಳಿಸಿಕೊಳ್ಳುವ ಸಲುವಾಗಿ ಈ ರೀತಿಯ ರಾಜಕಾರಣ ಮಾಡುತ್ತಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯ ಫಲಿತಾಂಶ ಬರುವುದಕ್ಕಿಂತ ಮುಂಚೆ, ಪರಸ್ಪರ ಅವಹೇಳನ ಮಾಡಿಕೊಂಡು ರಾಮನಗರದಲ್ಲಿ ಕೆಟ್ಟ ಸಂಸ್ಕೃತಿಯನ್ನು ಹುಟ್ಟು ಹಾಕಿದವರು, ಈಗ ಅಭೂತಪೂರ್ವ ಜೋಡಿಗಳಾಗಿ ಪಕ್ಷ ಕಟ್ಟುತ್ತಾರೆ ಎಂದರೆ ಕಟ್ಟಲಿ ಇದೊಂದು ಸಂತಸದ ವಿಚಾರ ಎಂದು ವ್ಯಂಗ್ಯವಾಡಿದ್ದಾರೆ.
ಪದೇ, ಪದೇ ಡಿ.ಕೆ.ಸಹೋದರರನ್ನು ವಿನಾಕಾರಣ ಟೀಕೆ ಮಾಡುತ್ತಾ, ಅವರ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಾ ರಾಜಕಾರಣ ಮಾಡಲು ಮುಂದಾಗಿದ್ದಾರೆ. 2020 ರಲ್ಲಿ ಏಕೆ ಕುಮಾರಸ್ವಾಮಿ ಸರ್ಕಾರ ಬಿದ್ದು ಹೋಯಿತು. ಸಿಂಗಾಪುರ, ಶ್ರೀಲಂಕಾದಲ್ಲಿ ಕುಳಿತು ಕುತಂತ್ರ ಮಾಡಿದವರಿಂದ ಹಾಗೂ ಜೂಜಿನ ಹಣ ಬಳಸಿಕೊಂಡು ಸರ್ಕಾರ ಬೀಳಿಸಿದರು ಎಂದು ಸ್ವತಃ ಕುಮಾರಸ್ವಾಮಿ ಅವರೇ ಹಲವಾರು ಸಂದರ್ಭದಲ್ಲಿ ಆರೋಪ ಮಾಡಿದ್ದರು. ಸಿ.ಪಿ.ಯೋಗಿಶ್ವರ್ ಸಹ ಅನೇಕ ಬಾರಿ ಕುಮಾರಸ್ವಾಮಿ ವಿರುದ್ದ ಆರೋಪ ಮಾಡಿದ್ದರು ಎಂದು ಹೇಳಿದ್ದಾರೆ.
ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರ್ಕಾರ ಬೀಳಿಸಿದ ಇದೇ ಯೋಗಿಶ್ವರ್ ಈ ಕೆಲಸಕ್ಕೆ ಸಾಕಷ್ಟು ಬಹುಮಾನ ಪಡೆದಿದ್ದಾರೆ. ಎಂಎಲ್ಸಿಯಾದರು, ಸಚಿವರಾದರು. ಇವರ ಮೇಲೆ ಅವರದೇ ಪಕ್ಷದ ಬಸನಗೌಡ ಪಾಟೀಲ್ ಯತ್ನಾಳ್, ರೇಣುಕಾಚಾರ್ಯ ಅವರು ಸಿ.ಡಿ ಮಾಡಿಕೊಂದು ಬ್ಲಾಕ್ಮೇಲ್ ಮಾಡಿ ಸಚಿವರಾಗಿದ್ದಾರೆ ಎಂದು ಆರೋಪ ಮಾಡಿದ್ದರು. ಇದೇ ಕುಮಾರಸ್ವಾಮಿ ಅವರು ಯೋಗಿಶ್ವರ್ ರಾಜಕೀಯದಲ್ಲಿ ಬಚ್ಚಾ ಎಂದು ಜರಿದಿದ್ದರು ಎಂದು ನೆನಪಿಸಿದ್ದಾರೆ.
ಕೀಳು ಮಟ್ಟದ ಭಾಷೆಯನ್ನು ಬಿಟ್ಟು ಚರ್ಚೆ ಮಾಡಿದರೆ ಕಾಂಗ್ರೆಸ್ ಪಕ್ಷ ಸದಾ ಸಿದ್ದವಿರುತ್ತದೆ. ಚರ್ಚೆ ಮಾಡಿದಾಗ ಮಾತ್ರ ಒಂದು ಆಲೋಚನೆ ಹುಟ್ಟಲು ಸಾಧ್ಯ. ಇನ್ನು ಮುಂದಾದರು ಕಪಿಚೇಷ್ಟಿಯ ಮಾತುಗಳನ್ನು ಬಿಟ್ಟು, ಕುವೆಂಪು ಅವರ ಆಶಯದಂತೆ ಸರ್ವ ಜನಾಂಗದ ಶಾಂತಿಯ ತೋಟದಂತೆ ಬಾಳಿ ಎಂದು ಸಿ.ಟಿ.ರವಿ ಹಾಗೂ ಬಿಜೆಪಿ ನಾಯಕರಿಗೆ ಸಲಹೆ ನೀಡಿದ್ದಾರೆ.