ತುಮಕೂರು ವಿಶ್ವವಿದ್ಯಾಲಯದ ವಿಜ್ಞಾನ ಕಾಲೇಜಿನ ಭೌತಶಾಸ್ತ್ರದ ವಿಭಾಗದಲ್ಲಿರುವ ಕಂಡೆನ್ಸ್ ಡ್ ಮ್ಯಾಟರ್ ಫಿಜಿಕ್ಸ್ ಸ್ನಾತಕೋತ್ತರ ಕೋರ್ಸ್ ಮುಚ್ಚಲು ವಿವಿ ಸಿಂಡಿಕೇಟ್ ತೀರ್ಮಾನಿಸಿದೆ. ಸಿಂಡಿಕೇಟ್ ತೀರ್ಮಾನ ಉನ್ನತ ಶಿಕ್ಷಣ ಪಡೆಯುವಂತಹ ವಿದ್ಯಾರ್ಥಿಗಳಿಗೆ ಅನ್ಯಾಯವಾದಂತೆ ಆಗಿದೆ.
ವಿಜ್ಞಾನ ಕಾಲೇಜಿನ ಇಬ್ಬರು ಅಧ್ಯಾಪಕರ ನಡುವಿನ ಆಂತರಿಕ ಕಲಹದಿಂದಾಗಿ ಈ ಕೋರ್ಸ್ ಮುಚ್ಚುವಂತಹ ಸ್ಥಿತಿಗೆ ಬರಲಾಗಿದೆ ಎಂದು ಹೇಳಲಾಗುತ್ತಿದೆ.
ಇತ್ತೀಚೆಗೆ ಅನ್ ಲೈನ್ ನಲ್ಲಿ ಸಭೆ ಸೇರಿದ ಸಿಂಡಿಕೇಟ್ ಸದಸ್ಯರು ವಿಜ್ಞಾನ ಕಾಲೇಜಿನಲ್ಲಿರುವ ಭೌತಶಾಸ್ತ್ರ ವಿಭಾಗದ ಕಂಡೆನ್ಸ್ ಡ್ ಮ್ಯಾಟರ್ ಫಿಜಿಕ್ಸ್ ಕೋರ್ಸ್ ಮುಚ್ಚುವಂತಹ ಅವೈಜ್ಞಾನಿಕ ಕ್ರಮವನ್ನು ಕೈಗೊಂಡಿರುವುದು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ವಿಶೇಷ ಕೋರ್ಸ್ ಮುಚ್ಚುವುದಕ್ಕೆ ವಿರೋಧ ವ್ಯಕ್ತಪಡಿಸಿರುವ ವಿದ್ಯಾರ್ಥಿಗಳು ವಿ.ವಿ.ಕುಲಪತಿಗೆ ಮನವಿ ಪತ್ರವನ್ನು ಸಲ್ಲಿಸಿದ್ದು, ಯಾವುದೇ ಕಾರಣಕ್ಕೂ ಕಂಡೆನ್ಸ್ ಡ್ ಮ್ಯಾಟರ್ ಫಿಜಿಕ್ಸ್ ಕೋರ್ಸನ್ನು ಮುಚ್ಚಬಾರದು. ಇದರಿಂದ ವಿಜ್ಞಾನ ವಿಭಾಗದಲ್ಲಿ ಉನ್ನತ ಶಿಕ್ಷಣ ಪಡೆಯುವ ನೂರಾರು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ. ಆದ್ದರಿಂದ ಕೋರ್ಸ್ ಮುಚ್ಚಬಾರದು ಎಂದು ಮನವಿ ಮಾಡಲಾಗಿದೆ.
ತುಮಕೂರು ವಿಶ್ವವಿದ್ಯಾಲಯದಲ್ಲಿ ಉನ್ನತ ವ್ಯಾಸಂಗಕ್ಕಾಗಿ ಗ್ರಾಮೀಣ ಪ್ರದೇಶದಿಂದ ಬರುವ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇದುವರೆಗೂ ಗ್ರಾಮೀಣ ಪ್ರದೇಶದಿಂದ ಬರುವ ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯಲು ಅನುಕೂಲ ಆಗುತ್ತಿತ್ತು. ಆದರೆ ಈಗ ಪೂರ್ಣ ಪ್ರಮಾಣದಲ್ಲಿ ಇಲ್ಲದ ಸಿಂಡಿಕೇಟ್ ಸದಸ್ಯರು ಕೈಗೊಂಡಿರುವ ತೀರ್ಮಾನಕ್ಕೆ ಆಕ್ರೋಶ ವ್ಯಕ್ತವಾಗಿದೆ.
ಕಾಲೇಜಿನಲ್ಲಿ ಗುಣಮಟ್ಟದ ಶೈಕ್ಷಣಿಕ ವಾತಾವರಣದ ಕೊರತೆಯನ್ನು ಅವರು ಹೇಳುತ್ತಾರೆ, ಇದಕ್ಕಾಗಿ ನಾವು ಹಲವು ಕಾರ್ಯಾಗಾರಗಳು, ವಿಶೇಷ ಉಪನ್ಯಾಸಗಳು, ಕ್ಷೇತ್ರ ಭೇಟಿಗಳು, ವಿಜ್ಞಾನ ಜನಪ್ರಿಯತೆ, ವಿದ್ಯಾರ್ಥಿ ಯೋಜನೆಗಳು ಸೇರಿದಂತೆ ವಿವಿಧ ಶೈಕ್ಷಣಿಕ ಚಟುವಟಿಕೆಗಳನ್ನು ಮಾಡಿದ್ದೇವೆ.ಇವುಗಳಲ್ಲಿ ಯಾವುದನ್ನೂ ನಡೆಸದ ಸಿಎನ್‌ಆರ್(CNR) ಬ್ಲಾಕ್‌ನೊಂದಿಗೆ ಹೋಲಿಕೆ ಮಾಡಿದ್ದಾರೆ.
ಆದರೂ ಇಲ್ಲಿ ಗುಣಮಟ್ಟ ಕಡಿಮೆ, ಅಲ್ಲಿ ಹೆಚ್ಚು ಎನ್ನುತ್ತಾರೆ. ಕಾಲೇಜು ಅಥವಾ ವಿಶ್ವವಿದ್ಯಾನಿಲಯದ ಪರಿಸರದಲ್ಲಿ ಗುಣಮಟ್ಟದ ಶಿಕ್ಷಣದ ಬಗ್ಗೆ ಸ್ನಾತಕೋತ್ತರ ಪದವಿಗೆ ಸಂಬಂಧಿಸಿದಂತೆ ರಸಾಯನಶಾಸ್ತ್ರ ಮತ್ತು ಪರಿಸರ ವಿಜ್ಞಾನಕ್ಕೂ ಅನ್ವಯಿಸುತ್ತದೆ. ಅವುಗಳನ್ನು ಮುಚ್ಚಲಾಗುತ್ತಿಲ್ಲ. ಭೌತಶಾಸ್ತ್ರ ವಿಭಾಗವನ್ನು ಮಾತ್ರ ಗುರಿಪಡಿಸಲಾಗಿದೆ. ಕಡಿಮೆ ಪ್ರವೇಶದ ಉದಾಹರಣೆಯನ್ನು ನೀಡುತ್ತಾರೆ. ವಿಶ್ವವಿದ್ಯಾನಿಲಯದಲ್ಲಿ 20 ಕ್ಕಿಂತ ಕಡಿಮೆ ವಿದ್ಯಾರ್ಥಿಗಳನ್ನು ಹೊಂದಿರುವ ಹಲವಾರು ವಿಭಾಗಗಳಿವೆ ಎಂದು ಹೇಳಲಾಗುತ್ತಿದೆ.
ಸಿಂಡಿಕೇಟ್ ಸದಸ್ಯರ ತೀರ್ಮಾನದಿಂದ ನೂರಾರು ಬಡ ವಿದ್ಯಾರ್ಥಿಗಳಿಗೆ ವಂಚಿಸಿದಂತಾಗಿದೆ. ಹೀಗಾಗಿ ಈ ತೀರ್ಮಾನದ ವಿರುದ್ಧ ಹೋರಾಟ ನಡೆಸಲು ವಿದ್ಯಾರ್ಥಿ ಸಂಘಟನೆಗಳು ಮುಂದಾಗಿವೆ.