Monday, September 16, 2024
Google search engine
Homeಚಳುವಳಿಕೊಬ್ಬರಿಗೆ 20 ಸಾವಿರ ಬೆಂಬಲ ಬೆಲೆ ಘೋಷಿಸಲು ಆಗ್ರಹ - ತುಮಕೂರಿನಿಂದ ಬೆಂಗಳೂರಿನತ್ತ ತೆರಳಿದ ನೂರಾರು...

ಕೊಬ್ಬರಿಗೆ 20 ಸಾವಿರ ಬೆಂಬಲ ಬೆಲೆ ಘೋಷಿಸಲು ಆಗ್ರಹ – ತುಮಕೂರಿನಿಂದ ಬೆಂಗಳೂರಿನತ್ತ ತೆರಳಿದ ನೂರಾರು ರೈತರ ಪಾದಯಾತ್ರೆ

ಕ್ವಿಂಟಾಲ್ ಕೊಬ್ಬರಿಗೆ 20 ಸಾವಿರ ರೂಪಾಯಿ ಬೆಂಬಲ ಬೆಲೆ ಘೋಷಿಸಬೇಕು ಮತ್ತು ರಾಜ್ಯ ಸರ್ಕಾರ 5 ಸಾವಿರ ರೂಪಾಯಿ ಪ್ರೋತ್ಸಾಹ ಧನ ನೀಡಬೇಕೆಂದು ಒತ್ತಾಯಿಸಿ ಸೆಪ್ಟೆಂಬರ್ 26ರಂದು ಅರಸಿಕೆರೆಯಿಂದ ಹಮ್ಮಿಕೊಂಡಿರುವ ಬೆಂಗಳೂರು ಚಲೋ ಪಾದಯಾತ್ರೆಗೆ ತುಮಕೂರಿನಲ್ಲಿ ಅದ್ದೂರಿ ಸ್ವಾಗತ ನೀಡಲಾಯಿತು. ನೂರಾರು ರೈತರು ಸ್ವಾಗತ ಕೋರಿ ಪಾದಯಾತ್ರಿಗಳನ್ನು ಬೆಂಗಳೂರಿನತ್ತ ಬೀಳ್ಕೊಟ್ಟರು.

ಶುಕ್ರವಾರ ರಾತ್ರಿ ಹೆಗ್ಗರೆಯ ಕಲ್ಯಾಣ ಮಂಟಪದಲ್ಲಿ ವಾಸ್ತವ್ಯ ಹೂಡಿದ್ದ ಪಾದಯಾತ್ರಿಕರು, ಶನಿವಾರ ಮಧ್ಯಾಹ್ನದ ಸುಮಾರಿಗೆ ತುಮಕೂರು ನಗರ ತಲುಪಿದರು. ತುಮಕೂರಿನ ಟೌನ್‌ಹಾಲ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಸರ್ಕಾರದ ಕ್ರಮವನ್ನು ಖಂಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ರೈತ ಸಂಘ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಕೇಂದ್ರ ಸರ್ಕಾರದ ನೀತಿಯಿಂದ ಕ್ವಿಂಟಾಲ್ ಕೊಬ್ಬರಿ ಬೆಲೆ 7,500-8,000 ರೂಪಾಯಿಗೆ ಕುಸಿದಿದೆ. ಸರ್ಕಾರವೇ ಘೋಷಿಸಿದ ಬೆಂಬಲ ಬೆಲೆ 11,750 ರೂಗಳಿಗಿಂತ ಕಡಿಮೆ ಇದ್ದರೂ ರೈತರ ನೆರವಿಗೆ ಸರ್ಕಾರ ಬರುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತವಿರೋಧಿ ನೀತಿಗಳನ್ನು ಖಂಡಿಸಿ, ಸೆಪ್ಟಂಬರ್ 26 ರಂದು ಅರಸೀಕೆರೆಯಿಂದ ಹಮ್ಮಿಕೊಂಡಿರುವ ಪಾದಯಾತ್ರೆಗೆ ಇದುವರೆಗೂ ಯಾವೊಬ್ಬ ಜನಪ್ರತಿನಿಧಿಯೂ ಬಂದಿಲ್ಲ. ರೈತರನ್ನು ಸಂಪರ್ಕಿಸಿಲ್ಲ. ಸರ್ಕಾರದ ಈ ನಿರ್ಲಕ್ಷ ಭಾವನೆ ಖಂಡಿಸಿ, ಹೆದ್ದಾರಿ ತಡೆದು, ಹೆದ್ದಾರಿಯಲ್ಲಿಯೇ ಕುಳಿತು ಊಟ ಮಾಡುವ ಮೂಲಕ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದೇವೆ. ಅಕ್ಟೋಬರ್ 04ರಂದು ಬೆಂಗಳೂರು ತಲುಪಲಿರುವ ರೈತರ ಪಾದಯಾತ್ರೆ, ವಿಧಾನಸೌಧ ಮುತ್ತಿಗೆ ಹಾಕಲಿದೆ ಎಂದು ಎಚ್ಚರಿಕೆ ನೀಡಿದರು.

ರೈತ ಸಂಘ ಮತ್ತು ಹಸಿರು ಸೇನೆಯ ತುಮಕೂರು ಜಿಲ್ಲಾಧ್ಯಕ್ಷ ಆನಂದ್ ಪಟೇಲ್ ಮಾತನಾಡಿ, ತುಮಕೂರು ಜಿಲ್ಲೆಯಲ್ಲಿ ಸುಮಾರು 2.50 ಲಕ್ಷ ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಕೊಬ್ಬರಿ ಬೆಳೆಯುತ್ತಾರೆ. ತೋಟಗಾರಿಕಾ ಇಲಾಖೆಯೇ ನೀಡಿದ ಮಾಹಿತಿಯಂತೆ ಒಂದು ಕ್ವಿಂಟಾಲ್ ಕೊಬ್ಬರಿ ಬೆಳೆಯಲು ಸುಮಾರು 16,760 ರೂಪಾಯಿ ಖರ್ಚಾಗುತ್ತದೆ. ಆದರೆ ಸರ್ಕಾರ 11,750 ರೂ ಬೆಂಬಲ ಬೆಲೆ ನಿಗದಿ ಮಾಡಿದೆ ಎಂದರು.

ಮುಕ್ತ ಮಾರುಕಟ್ಟೆಯಲ್ಲಿ ಕೇವಲ 7-8 ಸಾವಿರಕ್ಕೆ ಮಾತ್ರ ಕೊಂಡುಕೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ 11 ಜನ ಶಾಸಕರು, ಮೂವರು ಸಂಸದರಿದ್ದರೂ ಒಬ್ಬರೂ ತುಟಿ ಬಿಚ್ಚುತ್ತಿಲ್ಲ. ನಮ್ಮ ಪಾದಯಾತ್ರೆ ಬೆಂಗಳೂರು ತಲುಪುವುದರ ಒಳಗೆ ಸರ್ಕಾರದೊಂದಿಗೆ ಮಾತನಾಡಿ, ಕೊಬ್ಬರಿಗೆ ಕನಿಷ್ಠ 25,000 ರೂ ಬೆಂಬಲ ಬೆಲೆ ಘೋಷಿಸಬೇಕೆಂಬುದು ನಮ್ಮ ಆಗ್ರಹವಾಗಿದೆ ಎಂದರು.

ಪಾದಯಾತ್ರೆಯಲ್ಲಿ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಬಸವನಹಳ್ಳಿ ಭೈರೇಗೌಡ, ತಿಪಟೂರಿನ ಶಾಂತಕುಮಾರ್, ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಧನಂಜಯ್ ಆರಾಧ್ಯ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular