Thursday, September 19, 2024
Google search engine
Homeಜಿಲ್ಲೆದಸಂಸವೇ ಬರೆದುಕೊಂಡ ಆತ್ಮಕಥನ ಅಂಗುಲಿಮಾಲ

ದಸಂಸವೇ ಬರೆದುಕೊಂಡ ಆತ್ಮಕಥನ ಅಂಗುಲಿಮಾಲ

ತುಮಕೂರು ಆತ್ಮಕತೆಗಳನ್ನು ವಿಭಿನ್ನವಾಗಿ ಬರೆದುಕೊಂಡ ನೆಲ. ಕಾಮ್ರೇಡ್ ನೆಲೆಯ ಕೆ ಆರ್ ನಾಯಕ್ ರ ‘ಚಿನ್ನದ ಜಿಂಕೆಯ ಬೆನ್ನಹಿಂದೆʼ, ಮಹಿಳಾನೆಲೆಯ ಶೈಲಜನಾಗರಘಟ್ಟರ ‘ಕಿಚ್ಚಿಲ್ಲದ ಬೇಗೆʼ, ದಲಿತ ಬಂಡಾಯದ ಹೊರಗಿದ್ದು ಕನ್ನಡ ಚಿಂತನ ಪರಂಪರೆಯನ್ನು ಕಟ್ಟಿದ ಎಸ್ ಜಿ ಸಿದ್ದರಾಮಯ್ಯ ನವರ ‘ಯರಬೇವುʼ, ಇತ್ತೀಚೆಗೆ ಬಂಡಾಯದ ಬರಗೂರು ರಾಮಚಂದ್ರಪ್ಪನವರ ‘ಕಾಗೆ ಕಾರುಣ್ಯದ ಕಣ್ಣುʼ, ಹಿರಿಯ ಹೋರಾಟಗಾರರು ಚಿಂತಕರಾದ ಕೆ. ದೊರೈರಾಜು ಅವರ ‘ ಏಕತೆಯ ಹೋರಾಟಗಾರ’.. ಆತ್ಮಕಥನರೂಪದ ಬರಹಗಳು ಬಿಡುಗಡೆಯಾಗಿ ಆತ್ಮಕತೆಗಳ ಜಗತ್ತನ್ನು ಶ್ರೀಮಂತಗೊಳಿಸಿದೆ. ಹೀಗೆ ವೈವಿಧ್ಯಮಯ ಅನುಭವ ಕಥನಗಳು ಚಿಂತನವಲಯವನ್ನು ವಿಸ್ತರಿಸುತ್ತಿವೆ.

ಇದರ ಜೊತೆಗೆ ದಲಿತ ನೆಲೆಯಲ್ಲಿನ ವಿಶಿಷ್ಟ ಆತ್ಮಕಥನಕಗಳು ರೂಪತಾಳಿರುವುದು ಇಲ್ಲಿನ ವಿಶೇಷ. ದಲಿತ ಆತ್ಮಕತೆಗಳನ್ನು ಮುಟ್ಟಿದರೆ ಮಿಡಿವಂತೆ ಮಾಡಿದ ತುಂಬಾಡಿ ರಾಮಯ್ಯನವರ ‘ಮಣೆಗಾರ (ಪ್ರೊ.ರಹಮತ್ ತರೀಕರೆಯವರ ಬರಹದ ಶೀರ್ಷಿಕೆ) ಮತ್ತು ಮುತ್ತಿನಜೋಳ’, ದಸಂಸ ಒಡೆಯಲು ಕಾರಣವಾದ ಅಂಶಗಳ ಕಡೆ ಕೈತೋರುವ ಹೋರಾಟಗಾರ ಬಂದಕುಂಟೆ ನಾಗರಾಜಯ್ಯನವರ ‘ಬಿತ್ತನೆ ಬೀಜʼ, ಡಾ.ಸಂಜೀವರಾಯರ ‘ಹೊರಬೀಡುʼ. ಈಗ ದಸಂಸವೇ ಮಾತನಾಡುತ್ತಿರುವಂತೆ ಕಟ್ಟಿಕೊಂಡಿರುವ ಕುಂದೂರು ತಿಮ್ಮಣ್ಣನವರ ‘ಅಂಗುಲಿಮಾಲʼ.

ತುಮಕೂರಿನಲ್ಲಿ ಸಾಮಾನ್ಯ ಕಾರ್ಯಕರ್ತರಾಗಿ, ಹಿರಿಯ ಹೋರಾಟಗಾರರಾಗಿ, ದಸಂಸವನ್ನು ಮುನ್ನಡೆಸಿದವರಾಗಿ ಅನೇಕ ಹೋರಾಟಗಳನ್ನು ತಾರ್ಕಿಕ ಅಂತ್ಯ ಕಾಣಿಸಿದವರು ಕುಂದೂರು ತಿಮ್ಮಣ್ಣನವರು. ಈ ಅಂಗುಲಿಮಾಲ ಕೇವಲ ಕುಂದೂರು ತಿಮ್ಮಣ್ಣನವರ ಆತ್ಮಕಥನವಲ್ಲ. ʼಅಂಗುಲಿಮಾಲʼದ ಮೂಲಕ ತುಮಕೂರು ಕಳೆದ ನಾಲ್ಕೂವರೆ ದಶಕದ ದಲಿತ ಹೋರಾಟ, ಸಾಹಿತ್ಯ, ಚಿಂತನೆ, ದಲಿತ ಸಂಘರ್ಷ ಸಮಿತಿ ಇವೆಲ್ಲ ಇದರೊಳಗೆ ಮಾತನಾಡುತ್ತವೆ. ದಸಂಸದ ಸಾಂಸ್ಕೃತಿಕ ಒಳಗಣ್ಣು ʼಅಂಗುಲಿಮಾಲʼದ ಮೂಲಕ ಮಿಸುಕಾಡಲು ಶುರುಮಾಡಿದೆ.

ʼಅಂಗುಲಿಮಾಲʼ ಕುಂದೂರು ತಿಮ್ಮಣ್ಣನವರಿಗೂ, ಇಡೀ ದಲಿತ ಸಾಮಾನ್ಯ ಕಾರ್ಯಕರ್ತರಿಗೂ, ಹೋರಾಟಗಾರರಿಗೂ ಅನ್ವಯವಾಗುವ ರೂಪಕ. ಅಂಗುಲಿಮಾಲನಿಗೆ ಎರಡು ಆಯಾಮಗಳಿವೆ. ಜನರನ್ನು ಬೆದರಿಸಿ ಬೆರಳುಗಳನ್ನು ಕಡಿದು ಕೊರಳಿಗೆ ಮಾಲೆ ಹಾಕಿಕೊಳ್ಳುವುದು ಒಂದು ಬಗೆಯಾದರೆ, ಮುಂದೆ ಬುದ್ಧದರ್ಶನವಾಗಿ ಬಿಕ್ಕುವಾಗುವ ಕ್ರಿಯೆ ಇನ್ನೊಂದು ಬಹುಮುಖ್ಯ ನೆಲೆ. ಈ ಪರಿವರ್ತನೆಯ ರೂಪವಾಗಿ ತಿಮ್ಮಣ್ಣರು ಬದಲಾಗುತ್ತಾರೆ; ದಸಂಸವು ಹೊರಳಿಕೊಳ್ಳುತ್ತದೆ. ಕೇವಲ ದಲಿತ ‘ಇಸ್ಯೂ’ಗಳನ್ನಷ್ಟೇ ಹೋರಾಟದ ಕೇಂದ್ರವಾಗಿರಿಸಿಕೊಳ್ಳದೆ ಸಕಲ ಸಮುದಾಯಗಳ ಕರುಳಾಗಿ ದಸಂಸ ಮಿಡಿದಿರುವುದನ್ನು ಕಾಣಬಹುದು. ಕುಂಬಾರ ಅನಸೂಯಮ್ಮಳ ಸಂಕಟಕ್ಕೆ ನಲುಗಿ ‘ನೀ ಹುಟ್ಟಿ ಬೆಳೆದೆಯಮ್ಮ ನನ್ನ ತಂಗಿ ಅನಸೂಯ’ (ಕೋಟಿಗಾನಹಳ್ಳಿ ರಾಮಣ್ಣ), ನೋವಿನ ಅಭಿವ್ಯಕ್ತಿಯಾಗಲಿ, ಬೆಲ್ಚಿ, ಒಂದು ದಹನದ ಕತೆ, ಹಳ್ಳಿಹಳ್ಳಿಗಳಲ್ಲಿ ನಡೆದ ದೌರ್ಜನ್ಯಕ್ಕೆ ಪ್ರತಿರೋಧ ರೂಪಿಸಿದ್ದು, ಮಂಡಲ ವರದಿ ಜಾರಿಗಾಗಿ ನಡೆಸಿದ ಹೋರಾಟವಾಗಲಿ, ಸಾಚಾರ್ ವರದಿ ಜಾರಿ…. ಹೀಗೆ ಸಾಕಷ್ಟು ಪಟ್ಟಿಮಾಡಬಹುದು. ತೀರಾ ಇತ್ತೀಚೆಗೆ ನಡೆಯುವ, ನಡೆಯುತ್ತಿರುವ ಎಲ್ಲಾ ಮಾನವೀಯ ಹೋರಾಟಗಳಲ್ಲಿ ದಸಂಸ ಮುಂಚೂಣಿಯಲ್ಲಿರುವುದನ್ನು ಕಾಣಬಹುದು. ಈ ಆತುಗೊಳ್ಳುವ ಗುಣವೇ ದಸಂಸದ ತಾಯಿಬೇರು. ಹೀಗೆ ಪ್ರತಿ ಹೋರಾಟವು ಮಾನವೀಯತೆಯ ತುಡಿತದೊಳಗೆ ಬುದ್ಧಪ್ರೀತಿಯನ್ನು ಜಗತ್ತಿಗೆ ಹಂಚುವ ದೀಪವಾಗಿ ಬೆಳಗುತ್ತಿದೆ.

ಬೆಂಗಳೂರಿನಲ್ಲಿ ಎಲ್ಲೋ ಬೀದಿ ರೌಡಿಯಾಗಿ ಭೂಗತಜಗತ್ತಿನ ಪಾತಕದೊಳಗೆ ಕಳೆದುಹೋಗುತ್ತಿದ್ದ ವ್ಯಕ್ತಿಯೊಬ್ಬನನ್ನು ಮನುಷ್ಯನನ್ನಾಗಿಸಿದ್ದು ದಸಂಸ ಎಂಬ ಬುದ್ಧಪ್ರೀತಿ. ಆ ಪ್ರೀತಿಯನ್ನರಸುತ್ತ ಹೊರಟ ಕಿಡಿಯೊಂದು ಕ್ರಾಂತಿದೀಪವಾಗಿ ಮೂರೂವರೆ ದಶಕದವರೆಗೆ ತುಮಕೂರಿನ ಹೋರಾಟವನ್ನು ಕಾಪಿಟ್ಟುಕೊಂಡು ಬಂದಿದೆ. ಈಗಲೂ ಹೋರಾಟದ ಕಿಚ್ಚು, ಹುಮ್ಮಸ್ಸು ಮತ್ತು ಆ ರೋಮಾಂಚನ ಕೊಂಚವು ಇಳಿದಿಲ್ಲ. ಕಳೆದ ಕಾಲದ ನೆನಪುಗಳನ್ನು ಕಟ್ಟಿಕೊಡುವಾಗ ವರ್ತಮಾನದಲ್ಲಿಯೇ ನಡೆಯುತ್ತಿದೆಯೇನೋ ಅನ್ನುವಷ್ಟು ನಮ್ಮೊಳಗೆ ಇಳಿದುಬಿಡುತ್ತದೆ. ಬಿಡಿ ಬಿಡಿಯಾಗಿ ಹರಡಿಕೊಳ್ಳುತ್ತಲೇ ತಿಮ್ಮಣ್ಣನವರ ವ್ಯಕ್ತಿತ್ವವನ್ನು, ದಸಂಸದ ಚರಿತ್ರೆಯನ್ನು, ಹೋರಾಟದ ಕಿಚ್ಚನ್ನು, ಕುಂದೂರಿನ ನೀರಿನ ಕಟ್ಟೆ ಕುರಿತು ನಡೆದ ಹೋರಾಟ, ಪ್ರತಿರೋಧ, ಪ್ರತಿಭಟನೆ, ಕೇಬಿಯವರ ಮದುವೆಯ ವೇದಿಕೆಯಾದ ಕುಂದೂರು… ಹೀಗೆ ಸಾಗುತ್ತ ಇಡೀ ಕಥನ ದಸಂಸದ ಹೋರಾಟದ ಕಥನವಾಗಿ ಬದಲಾಗುತ್ತದೆ. ತಿಮ್ಮಣ್ಣ ಇಲ್ಲಿ ನೆಪವಾಗಿ ನಮ್ಮೆದುರಿಗೆ ನಾಲ್ಕು ದಶಕದ ಚಿತ್ರವನ್ನು, ಹಸಿವನ್ನು, ಪ್ರತಿರೋಧವನ್ನು ಎಲ್ಲವನ್ನೂ ಉಣಿಸುತ್ತಾ ಸಾಗುತ್ತದೆ. ಜೀವಂತ ಪಾತ್ರಗಳು ಈಗಲೂ ಆ ಊರಿನಲ್ಲಿ ಇರಬಹುದು. ಅವರ ನಿಲುವುಗಳು, ಅಸ್ಪೃಶ್ಯತೆ ಆಚರಣೆಗಳು ಬದಲಾಗಿರಬಹುದು. ಆದರೆ ಆ ನಿಷ್ಠುರತೆ, ಅನುಭವಿಸಿದ ಯಾತನೆ ಕಣ್ಣಮುಂದೆ ನಿಂತುಬಿಡುತ್ತದೆ. ತಿಮ್ಮಣ್ಣ ಇಲ್ಲಿ ನಿರೂಪಕನಷ್ಟೆ. ದಸಂಸ ಹುಟ್ಟದೇ ಹೋಗಿದ್ದರೆ ಕರ್ನಾಟಕದ ಚರಿತ್ರೆ ಏನಾಗಬಹುದಿತ್ತು ಎಂಬ ಪ್ರಶ್ನೆಗೆ ಅನೇಕ ಉತ್ತರಗಳಂತೆ ಇಲ್ಲಿನ ಪ್ರತಿ ಅಧ್ಯಾಯಗಳಿವೆ. ಪ್ರತಿ ಘಟನೆಗಳು ಓದುಗರ ಮೈ ನಡುಗಿಸುತ್ತವೆ.

ʼಅಂಗುಲಿಮಾಲʼ ಪ್ರಕಟಣೆಯಿಂದ ದಲಿತ ನೋಟಕ್ರಮ ಇನ್ನೊಂದು ಮಗ್ಗುಲಿಗೆ ಹೊರಳಿಕೊಳ್ಳುತ್ತದೆ. ಕ್ರೀಡಾವಿದ್ಯಾರ್ಥಿ ಕಬ್ಬಡ್ಡಿಪಟುವಾಗಿ, ‘ಸ್ಲಂʼನ ರೌಡಿಯಂಥ ಹಿಂಸರೂಪಿ ತಿಮ್ಮಣ್ಣ ದಸಂಸದಿಂದ ಬದುಕಿನ ದಾರಿಯನ್ನೇ ಬದಲಿಸಿಕೊಳ್ಳುತ್ತಾರೆ. ದಸಂಸಕ್ಕಿರುವ ಶಕ್ತಿ ಸೆಳೆತ ಆ ಸ್ವರೂಪದ್ದು. ತಿಮ್ಮಣ್ಣನವರಂಥ ಅನೇಕರೂ ಈ ದಸಂಸದ ಸವಿಯುಂಡಿದ್ದಾರೆ; ಸರಿದಾರಿಗೂ ಬಂದಿದ್ದಾರೆ. ಹಾಗೆಯೇ ವೈಯಕ್ತಿಕ ಬದುಕನ್ನು ಕಳೆದುಕೊಂಡವರೂ ಇದ್ದಾರೆ. ಈ ತಿರುವಿಗೆ ಒಳಗಾದವರು ಹೋರಾಟದ ಮೂಲಕ ಸಮಸಮಾಜವನ್ನು ಕನಸಿಸಿದ್ದಾರೆ. ಕುಂದೂರು ತಿಮ್ಮಣ್ಣನವರಿಗೆ ಈ ಬುದ್ಧಪ್ರೀತಿಯ ದಸಂಸದ ದಾರಿ ತೋರಿದವರು ಕೇಬಿ ಸಿದ್ದಯ್ಯನವರು ಮತ್ತು ಬಿ.ಕೃಷ್ಣಪ್ಪನವರು ಎಂದು ವಿನಮ್ರವಾಗಿ ತಿಮ್ಮಣ್ಣನವರು ಅನೇಕ ಬಾರಿ ನೆನಪಿಸಿಕೊಂಡಿದ್ದಾರೆ. ಈ ಅನುಭವಗಳನ್ನು (ಅಂಗುಲಿಮಾಲ ದಲ್ಲಿ ತಿಮ್ಮಣ್ಣನವರ ಹೋರಾಟವೇ ಪೂರ್ಣ ಆವರಿಸಿಬಿಟ್ಟಿದೆ. ಖಾಸಗಿ ಬದುಕು ಇನ್ನಷ್ಟು ಒಳಗೊಳ್ಳಬೇಕಿತ್ತೆಂಬ ಕೊರಗು ಉಳಿಸಿಬಿಡುತ್ತದೆ) ನಿರೂಪಿಸಿದ ಕತೆಗಾರ ಮಿತ್ರ ಕಂಟಲಗೆರೆ ಗುರುಪ್ರಸಾದ್‌ಗೆ, ಪ್ರಕಾಶನದ ಜವಾಬ್ದಾರಿ ಹೊತ್ತ ಭಗತ್‌ಗೆ ಶುಭಾಶಯಗಳು.

ತಿಮ್ಮಣ್ಣನವರ ಒಂದಷ್ಟು ಬದುಕಿನ ಹೋರಾಟದ ನೆನಪುಗಳನ್ನು ಮತ್ತೆ ಮತ್ತೆ ಎದುರುಗೊಳ್ಳುತ್ತ ಹೋರಾಟದ ಕಿಡಿಯನ್ನು ಆರದಂತೆ ನೋಡಿಕೊಳ್ಳೋಣ ಬನ್ನಿ.. ನಾಳೆ ಬಿಡುಗಡೆಗೊಳ್ಳುವ ‘ಅಂಗುಲಿಮಾಲ’ ಕ್ಕೆ ಸಾಕ್ಷಿಯಾಗೋಣ.

ಡಾ. ರವಿಕುಮಾರ್ ನೀಹ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular