‘ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ’ ಎಂಬ ಗಾದೆಮಾತು, ಹೊಸ ಸಂಸತ್ ಭವನದ ಉದ್ಘಾಟನಾ ದಿನದಂದು ಸಂಸದರಿಗೆ ನೀಡಿರುವ ಸಂವಿಧಾನದ ಪ್ರತಿಗಳ ಪ್ರಸ್ತಾವನೆಯಲ್ಲಿ ‘ಜಾತ್ಯತೀತ’ ಮತ್ತು ‘ಸಮಾಜವಾದಿ’ ಎಂಬ ಎರಡು ಪದಗಳನ್ನು ಕೈಬಿಟ್ಟಿರುವ ಪ್ರಮಾದಕ್ಕೆ ಸರಿಯಾಗಿ ಅನ್ವಯವಾಗುತ್ತದೆ. ಎರಡು ಪದಗಳನ್ನು ಕೈಬಿಟ್ಟು ಮುದ್ರಿಸಿರುವುದರ ಕುರಿತು ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು, ʼ ಸಂವಿಧಾನದ ಪ್ರಸ್ತಾವನೆಯ ಮೂಲ ಆವೃತ್ತಿಯಲ್ಲಿ ಈ ಪದಗಳು ಇರಲಿಲ್ಲ. ಆಮೇಲೆ ಸೇರಿಸಲಾದ ಹೆಚ್ಚುವರಿ ಪದಗಳನ್ನು ಈ ಪ್ರತಿಗಳು ಒಳಗೊಂಡಿಲ್ಲʼ ಎಂದು ವಿವರಣೆ ನೀಡಿದ್ದಾರೆ.
‘ಜಾತ್ಯತೀತ ಮತ್ತು ಸಮಾಜವಾದಿ’ ಎಂಬ ಎರಡು ಪದಗಳು ಇದ್ದಕ್ಕಿದ್ದಂತೆ ಸುಲಭವಾಗಿ ಪ್ರಸ್ತಾವನೆಯಲ್ಲಿ ಸೇರಿದವುಗಳಲ್ಲ. ಸಂವಿಧಾನದ ಮೂಲಾಶಯಗಳನ್ನು ಮತ್ತಷ್ಟು ಗಟ್ಟಿಗೊಳಿಸಬೇಕೇ ಹೊರತು ದುರ್ಬಲಗೊಳಿಸಬಾರದೆಂಬ ಸದಾಶಯದಿಂದ ಸಂವಿಧಾನತಜ್ಞರು ಮತ್ತು ರಾಜಕೀಯ ನೇತಾರರು ಹಲವಾರು ಸಲ ಚರ್ಚಿಸಿ 1976 ರಲ್ಲಿ ಸಂವಿಧಾನದ ತಿದ್ದುಪಡಿಯ ನಂತರ ಆ ಪದಗಳನ್ನು ಸೇರಿಸಲಾಯಿತು. ಹೀಗೆ ತಿದ್ದುಪಡಿಯಾದ ನಂತರದಲ್ಲಿಯೂ ಸಂವಿಧಾನದ ಮೊದಲಿನ ಆವೃತ್ತಿ ಬಳಸುವುದು ಸಂವಿಧಾನ ವಿರೋಧೀ ನಡೆಯಾಗುತ್ತದೆ. ಯಾಕೆಂದರೆ ಎಲ್ಲಾ ತಿದ್ದುಪಡಿಗಳನ್ನು ಒಳಗೊಂಡ ಪ್ರತಿಯನ್ನು ಸಮಗ್ರವಾಗಿ ಮುಂದುವರೆಸಬೇಕೇ ಹೊರತು ಮನಬಂದಂತೆ ಅದರ ಅಂಶಗಳನ್ನು ಬದಲಾಯಿಸಲು ಬರುವುದಿಲ್ಲ.
ಹೀಗಿರುವಾಗ ಸಂವಿಧಾನದ ಪೀಠಿಕೆಯಲ್ಲಿದ್ದ ‘ಸಮಾಜವಾದಿ ಮತ್ತು ಜಾತ್ಯತೀತ’ ಎಂಬ ಪದಗಳನ್ನು ದುರುದ್ದೇಶದಿಂದಲೇ ಕೈಬಿಟ್ಟು ಮುದ್ರಿಸಲಾಗಿದೆ. ನಿರ್ದಿಷ್ಟ ಪಕ್ಷವೊಂದಕ್ಕೆ ‘ಜಾತ್ಯತೀತ ಮತ್ತು ಸಮಾಜವಾದಿ’ ಆಶಯಗಳು ಇಷ್ಟವಿಲ್ಲವೆಂದ ಮಾತ್ರಕ್ಕೆ ಅದನ್ನು ಇಡೀ ದೇಶದ ನಾಗರಿಕರ ಮೇಲೆ ಹೇರುವುದು ಸಂವಿಧಾನದ ವಿರುದ್ಧ ಎಸಗುವ ಅಪಚಾರವಾಗುತ್ತದೆ. ಪ್ರತಿಯೊಬ್ಬ ಚುನಾಯಿತ ರಾಜಕೀಯ ಪ್ರತಿನಿಧಿಯೂ ತಾನು ಅಧಿಕಾರ ಸ್ವೀಕರಿಸುವಾಗ, ‘ಸಂವಿಧಾನದ ಆಶಯಗಳನ್ನು ಗೌರವಿಸುತ್ತೇನೆ ಮತ್ತು ದೇಶದ ಅಖಂಡತೆಯನ್ನು ಎತ್ತಿಹಿಡಿಯುತ್ತೇನೆ’ ಎಂದು ಪ್ರಮಾಣ ವಚನ ಸ್ವೀಕರಿಸಿರುವುದನ್ನು ಮರೆಯಬಾರದು.
ಸಂವಿಧಾನದ ಮೂಲ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಂಡಿರುವ ಅನೇಕ ಪ್ರಕರಣಗಳ ಕಹಿಯನ್ನು ನಾವೀಗ ಅನುಭವಿಸುತ್ತಿದ್ದೇವೆ. ಆರ್ಥಿಕ ಹಿಂದುಳಿದಿರುವಿಕೆಯ ಮಾನದಂಡವನ್ನು ಮುಂದೊಡ್ಡಿ, ಕೇವಲ 4% ಜನರಿಗೆ ಜನಸಂಖ್ಯೆಯ ಅನುಪಾತವನ್ನೂ ಮೀರಿ 10% ಮೀಸಲಾತಿಯನ್ನು ಒದಗಿಸುವ ಮೂಲಕ ಸಂವಿಧಾನದ, ‘ಸಮಾನತೆ ಮತ್ತು ಸಾಮಾಜಿಕ ನ್ಯಾಯ’ ಎಂಬ ಆಶಯಗಳನ್ನು ಧಿಕ್ಕರಿಸಲಾಗಿದೆ.
ಈಗ ಸಂವಿಧಾನದ ಪೀಠಿಕೆಯಿಂದ ‘ಜಾತ್ಯತೀತ ಮತ್ತು ಸಮಾಜವಾದಿ’ ಎಂಬ ಪದಗಳನ್ನು ಕೈಬಿಟ್ಟಿರುವುದು ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನದ ಮೂಲಸ್ವರೂಪವನ್ನೇ ನಾಶಮಾಡಿ ಧಾರ್ಮಿಕ ಏಕತ್ವದ ಕೇಸರಿ ರಾಜಕಾರಣದ ಸಿದ್ಧಾಂತವನ್ನು ಹೇರುವ ಹುನ್ನಾರವಿದಲ್ಲದೇ ಬೇರಲ್ಲ. ಪ್ರಜಾಪ್ರಭುತ್ವದ ಸೌಂದರ್ಯವಾದ ಬಹುತ್ವ ಮತ್ತು ಧರ್ಮ ನಿರಪೇಕ್ಷತೆಯಲ್ಲಿ ನಂಬಿಕೆ ಇರಿಸಿಕೊಂಡಿರುವ ಪ್ರಜ್ಞಾವಂತ ನಾಗರಿಕರು ಸಂವಿಧಾನದ ರಕ್ಷಣೆಗೆ ಮುಂದಾಗಬೇಕಾದ ಜರೂರು ಅಗತ್ಯವಿದೆ.
ಡಾ.ವಡ್ಡಗೆರೆ ನಾಗರಾಜಯ್ಯ, ಲೇಖಕರು, 8722724174