ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು ಅವರನ್ನು ಸಿಐಡಿ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ವರದಿಗಳ ಪ್ರಕಾರ ಚಂದ್ರಬಾಬು ನಾಯ್ಡು ಅವರನ್ನು ವೈದ್ಯಕೀಯ ಪರೀಕ್ಷೆಗಾಗಿ ನಂದ್ಯಾಲ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಯಿತು. ನಂತರ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಹೇಳಲಾಗಿದೆ.
ನಾಯ್ಡು ಅವರನ್ನು ಬಂಧಿಸಿರುವುದಕ್ಕೆ ಟಿಡಿಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಂಧನದ ಮಾಹಿತಿ ತಿಳಿಯುತ್ತಿದ್ದಂತೆಯೇ ಆಂಧ್ರಪ್ರದೇಶಾದ್ಯಂತ ಟಿಡಿಪಿ ಕಾರ್ಯಕರ್ತರು ರಸ್ತೆಗೆ ಇಳಿದು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
371 ಕೋಟಿ ರೂಪಾಯಿಯ ಕೌಶಲ್ಯಾಭಿವೃದ್ಧಿ ಹಗರಣಕ್ಕೆ ಸಂಬಂಧಿಸಿದಂತೆ ಶನಿವಾರ ಮುಂಜಾನೆಯೇ ಚಂದ್ರಬಾಬು ನಾಯ್ಡು ಅವರನ್ನು ಬಂಧಿಸಲಾಗಿದೆ. ನಂದ್ಯಾಲಕ್ಕೆ ಭೇಟಿ ನೀಡಿದ ಚಂದ್ರಬಾಬು ನಾಯ್ಡು ಅವರು ತಂಗಿದ್ದ ನಂದ್ಯಾಲ್ ಆರ್.ಕೆ ಫಂಕ್ಷನ್ ಹಾಲ್ ನಲ್ಲಿ ಈ ಬಂಧನ ಮಾಡಲಾಗಿದೆ.
ತಮ್ಮ ನಾಯಕನ ಬಂಧನಕ್ಕೆ ಟಿಡಿಪಿ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದು ಪೊಲೀಸರೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾರೆ. ನಾಯ್ಡು ವಿರುದ್ಧ ಅಪರಾಧ ಪ್ರಕ್ರಿಯಾ ಸಂಹಿತೆ ಸೆಕ್ಷನ್ 50 (1) (2)ರ ಅಡಿಯಲ್ಲಿ ಬಂಧನ ವಾರೆಂಟ್ ಜಾರಿಯಾಗಿದೆ.
ನನ್ನ ವಿರುದ್ಧ ಹಲವು ಷಡ್ಯಂತ್ರ – ಚಂದ್ರಬಾಬು ನಾಯ್ಡು:
ನನ್ನ 45 ವರ್ಷಗಳ ರಾಜಕೀಯ ಬದುಕಿಗೆ ಕಳಂಕ ತರಲು ಹಲವು ಷಡ್ಯಂತ್ರಗಳು ನಡೆದಿವೆ. ಆದರೆ ಬೇರೆಯವರಂತೆ ಅಲ್ಲ. ಏಕೆಂದರೆ ಬೆಂಕಿಯಂತೆ ಬದುಕು. ತೆಲುಗು ಜನರ ಶ್ರೇಯೋಭಿವೃದ್ಧಿಯ ಬಗ್ಗೆ ಯೋಚಿಸುವುದನ್ನು ಬಿಟ್ಟರೆ ನನಗೆ ಬೇರೆ ಯಾವ ಕಾಳಜಿಯೂ ಇಲ್ಲ ಎಂದು ಎಕ್ಸ್ ನಲ್ಲಿ ಟ್ವೀಟ್ ಮಾಡಿದ್ದಾರೆ.
ಇಂದು ಈ ಬೆದರಿಕೆಗಳು. ಕಾನೂನು ಬಾಹಿರ ಬಂಧನಗಳು ಜನರು ಹೋರಾಡುತ್ತಿರುವ ಕಾರಣ. ಇವುಗಳಲ್ಲಿ ಯಾವುದೂ ನನ್ನನ್ನು ನನ್ನ ಜನರಿಂದ ಬೇರ್ಪಡಿಸಲು ಸಾಧ್ಯವಿಲ್ಲ. ಸರ್ಕಾರದ ದುರುಪಯೋಗದ ವಿರುದ್ಧ ನನ್ನ ಹೋರಾಟವನ್ನು ಅವರು ನಿಲ್ಲಿಸುವುದಿಲ್ಲ. ಕೊನೆಗೆ ಗೆಲ್ಲುವುದು ಪ್ರಜಾಪ್ರಭುತ್ವವೇ….ಅಂಬೇಡ್ಕರ್ ಕೊಟ್ಟ ಸಂವಿಧಾನ. ಭಯಪಡುವ ಅಗತ್ಯವಿಲ್ಲ..ರಾಜಿ ಮಾಡಿಕೊಳ್ಳಿ ಎಂದು ವ್ಯಂಗ್ಯ ಮಾಡಿದ್ದಾರೆ.