ಶುಕ್ರವಾರ ರಾತ್ರಿ ಸಂಭವಿಸಿದ ಪ್ರಬಲ ಭೂಕಂಪನದಿಂದಾಗಿ ಮೊರಾಕೋದಲ್ಲಿ ಸತ್ತವರ ಸಂಖ್ಯೆ 820ಕ್ಕೆ ಏರಿಕೆ ಆಗಿದೆ. ನೂರಾರು ಮಂದಿ ಗಾಯಗೊಂಡಿದ್ದು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಾಥಮಿಕ ಮಾಹಿತಿ ಪ್ರಕಾರ ಭೂಕಂಪನದ ತೀವ್ರತೆ 6.8ರಷ್ಟು ದಾಖಲಾಗಿದೆ. ಭೂಕಂಪನ ಸಂಭವಿಸುತ್ತಿದ್ದಂತೆಯೇ ಮನೆಗಳಲ್ಲಿದ್ದ ಜನರು ಹೊರಗೆ ಓಡಿಬಂದರು. ಕೂಗಾಟ, ಚೀರಾಟ ಕೇಳಿ ಬಂತು ಎಂದು ಮಾಧ್ಯಮಗಳು ವರದಿ ಮಾಡಿವೆ. ಸಾವಿರಾರು ಮನೆಗಳು ನೆಲಕ್ಕುರುಳಿವೆ.
ತಾತ್ಕಾಲಿಕ ವರದಿಯ ಪ್ರಕಾರ ಅಲ್-ಹೌಜ್, ಮರ್ರಾಕೇಶ್, ಔರ್ಜಾಜೆಟ್, ಅಜಿಲಾಲ್, ಚಿಚೌವಾ ಮತ್ತು ತಾರೌಡಾಂಟ್ ಪ್ರಾಂತ್ಯಗಳಲ್ಲಿ ಭೂಕಂಪನ ಸಂಭವಿಸಿದೆ ಎಂದು ವರದಿಗಳು ತಿಳಿಸಿವೆ. ಭೂಕಂಪನದಿಂದಾಗಿ ಮತ್ತಷ್ಟು ಸಾವು ನೋವುಗಳು ಸಂಭವಿಸಲಿವೆ.
ಭೂಕಂಪನದ ತೀವ್ರತೆಗೆ ಕಟ್ಟಡಗಳು ಉರುಳಿ ಬಿದ್ದಿವೆ. ಕಟ್ಟಡಗಳು ಬೀಳುತ್ತಿರುವುದನ್ನು ನಾನು ನೋಡಿದೆ. ಈ ರೀತಿಯ ಪರಿಸ್ಥಿತಿಗೆ ನಾವು ಪ್ರತಿವರ್ತನವನ್ನು ಹೊಂದಬೇಕಾಗಿಲ್ಲ. ನಂತರ ನಾನು ಹೊರಗೆ ಹೋದೆ ಮತ್ತು ಅಲ್ಲಿ ಬಹಳಷ್ಟು ಜನರು ಇದ್ದರು. ಜನರು ಎಲ್ಲರೂ ಆಘಾತ ಮತ್ತು ಗಾಬರಿಯಲ್ಲಿದ್ದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ ಎಂದು ಎಎಫ್.ಪಿ ವರದಿ ಮಾಡಿದೆ.
ಮಕ್ಕಳು ಅಳುತ್ತಿದ್ದರು ಮತ್ತು ಪೋಷಕರು ದಿಗ್ಬ್ರಮೆಗೊಂಡಿದ್ದರು. 10 ನಿಮಿಷಗಳ ಕಾಲ ವಿದ್ಯುತ್ ಸ್ಥಗಿತಗೊಂಡಿತು. ನೆಟ್ ವರ್ಕ್ ಕೂಡ ಸ್ಥಗಿತಗೊಂಡಿತು. ಮನೆಗಳಿಂದ ಹೊರ ಬಂದ ಜನರು ಆತಂಕದಲ್ಲಿದ್ದರು ಎಂದು ಸ್ಥಳೀಯರು ಹೇಳಿದ್ದಾರೆ.