ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 4 ತಿಂಗಳು ಕಳೆದಿದೆ. ಆದರೆ ಬಿಜೆಪಿಯವರಿಗೆ ಇನ್ನೂ ವಿಧಾನಸಭೆ ಮತ್ತು ವಿಧಾನ ಪರಿಷತ್‌ಗೆ ಪ್ರತಿಪಕ್ಷ ನಾಯಕರನ್ನು ಆಯ್ಕೆ ಮಾಡಲು ಸಾಧ್ಯವಾಗಿಲ್ಲ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಟೀಕಿಸಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೃಷ್ಣ ಭೈರೇಗೌಡ, ಬಿಜೆಪಿ ಪಕ್ಷದಲ್ಲಿ ಆಂತರಿಕ ಕಚ್ಚಾಟ, ಬಿಕ್ಕಟ್ಟು, ಜಗಳ ನಡೆಯುತ್ತಿರುವುದರಿಂದ ಬಿಜೆಪಿ ನಾಯಕರು ಆಂತಕದಲ್ಲಿದ್ದಾರೆ. ಅಲ್ಲದೆ ಕರ್ನಾಟಕದ ಬಿಜೆಪಿ ಗೊಂದಲದ ಗೂಡಾಗಿದೆ ಎಂದು ಹೇಳಿದರು.
ಕರ್ನಾಟಕದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಪ್ರತಿಪಕ್ಷ ನಾಯಕರನ್ನು ಆಯ್ಕೆ ಮಾಡಿಲ್ಲ. ಇದು ವಿಧಾನ ಮಂಡಲಕ್ಕೆ ಮಾಡಿದ ಅಪಮಾನವಾಗಿದೆ. ಇಂತಹ ಹೀನಾಯ ಸ್ಥಿತಿಗೆ ಬಿಜೆಪಿ ಬರಲು ಆ ಪಕ್ಷದಲ್ಲಿ ಆಂತರಿಕ ಗೊಂದಲ, ಬಿಕ್ಕಟ್ಟು ಕಾರಣ ಎಂದು ಆರೋಪಿಸಿದರು.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಮೈತ್ರಿ ಮಾಡಿಕೊಳ್ಳುತ್ತಾರೆ ಎಂಬ ವಿಚಾರ ನನಗೆ ನಿಖರವಾಗಿ ಗೊತ್ತಿಲ್ಲ. ಆದರೆ ಕರ್ನಾಟಕದಲ್ಲಿ ಈ ಎರಡೂ ಪಕ್ಷಗಳು ಆಂತಕದಲ್ಲಿವೆ ಎಂದರು.