ನಿಮ್ಮೆಲ್ಲರ ಪ್ರೀತಿ, ಹಾರೈಕೆ, ದೈವದ ಕರುಣೆ, ತಂದೆ ತಾಯಿಯವರ ಆಶೀರ್ವಾದದಿಂದ ನನ್ನ ಆರೋಗ್ಯ ಅತ್ಯುತ್ತಮವಾಗಿ ಸುಧಾರಿಸಿದೆ. ಜಾತ್ಯತೀತ ಜನತಾ ದಳ ಪಕ್ಷದ ಚಟುವಟಿಕೆಗಳಲ್ಲಿ ಮತ್ತೆ ಸಕ್ರಿಯವಾಗಿ ಭಾಗಿಯಾಗುತ್ತಿದ್ದೇನೆ. ನಾವೆಲ್ಲರೂ ಪಣತೊಟ್ಟು ಹೊರಡೋಣ, ಪಕ್ಷವನ್ನು ಚೈತನ್ಯಶೀಲವಾಗಿ ಮರಳಿ ಕಟ್ಟೋಣ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಫೇಸ್ ಬುಕ್ಕಿನಲ್ಲಿ ಕಾವ್ಯಾತ್ಮಕವಾಗಿ ಬರೆದಿದ್ದಾರೆ.
ಕರ್ನಾಟಕ ಸಂಕಷ್ಟದಲ್ಲಿದೆ. ತೀವ್ರ ಬರ-ನೆರೆ, ಅನಧಿಕೃತ ಲೋಡ್ ಶೆಡ್ಡಿಂಗ್, ಕಾವೇರಿ ಬಿಕ್ಕಟ್ಟಿನಿಂದ ತತ್ತರಿಸುತ್ತಿದೆ. ಅನ್ನ ಕೊಡುವ ರೈತರನ್ನು, ತೆರಿಗೆ ತೆರುವ ನಾಗರಿಕರನ್ನು ಕಾಲ ಕಸದಂತೆ ಕಡೆಗಣಿಸಲಾಗಿದೆ. ಈ ದುರಿತ ದಿನಗಳಲ್ಲಿ ನಾವು ಜನರ ಜತೆ ಬದ್ಧತೆಯಿಂದ ನಿಲ್ಲಬೇಕು. ಜನಪರ ನಿಲುವು, ಹೋರಾಟ ನಮ್ಮೆಲ್ಲರ ಹೊಣೆ, ನೈತಿಕ ಜವಾಬ್ದಾರಿ ಎಂದು ಹೇಳಿದ್ದಾರೆ.
ಸೋತಿದ್ದೇವೆ, ನಿಜ.ಸೋಲೇ ಕೊನೆಯಲ್ಲ. ಹೋರಾಟದ ಹಾದಿಯಲ್ಲಿ ನಾವೆಲ್ಲರೂ ಸ್ಥೈರ್ಯ, ಅರ್ಪಣಾಭಾವದಿಂದ ಹೆಜ್ಜೆ ಹಾಕಲೇಬೇಕು.ಈ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿಗಳು, ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಎಚ್.ಡಿ.ದೇವೇಗೌಡರ ಸಾನ್ನಿಧ್ಯದಲ್ಲಿ ಬೆಂಗಳೂರು ಅರಮನೆ ಮೈದಾನದಲ್ಲಿ ಸೆಪ್ಟೆಂಬರ್ 10ರ ಭಾನುವಾರ ಬೆಳಗ್ಗೆ 10.30ಗಂಟೆಗೆ ಮಹತ್ವದ ಸಭೆ ಕರೆದಿದ್ದೇವೆ ಎಂದು ತಿಳಿಸಿದ್ದಾರೆ.
ನಾನೂ ಸೇರಿ ಪ್ರತಿಯೊಬ್ಬರೂ ಪಕ್ಷದ ಕಟ್ಟಾಳುಗಳೇ ಎನ್ನವುದನ್ನು ಯಾರೂ ಮರೆಯುವಂತಿಲ್ಲ. ಪಕ್ಷದ ಉಳಿವು, ಗೆಲುವಿಗಾಗಿ ಅವಿರತವಾಗಿ ಶ್ರಮಿಸೋಣ. ತಪ್ಪದೇ ಸಭೆಗೆ ಬನ್ನಿ, ಮುಕ್ತವಾಗಿ ಮಾತನಾಡೋಣ. ಮುಂದಿನ ಹೆಜ್ಜೆಗಳನ್ನು ದೃಢವಾಗಿ ಇಡೋಣ ಎಂದಿದ್ದಾರೆ.
ಏಳಿ ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ, ಈ ವಿವೇಕವಾಣಿಯೇ ನಮ್ಮ ಪಾಲಿನ ಮೂಲಮಂತ್ರ. ದಯಮಾಡಿ ಎಲ್ಲರೂ ಬನ್ನಿ.. ದೃಢ ಸಂಕಲ್ಪ ಮಾಡೋಣ, ದೃಢ ಹೆಜ್ಜೆಗಳನ್ನು ಇಡೋಣ ಎಂದು ಕರೆ ನೀಡಿದ್ದಾರೆ.