ಗ್ರಾಮೀಣ ಪ್ರದೇಶಗಳಲ್ಲಿ ಕನ್ನಡ ಸಂಸ್ಕೃತಿ ಬೆಳೆಸಲು ಜಿಲ್ಲೆಯ ಎಲ್ಲಾ ಗ್ರಾಮಪಂಚಾಯ್ತಿಗಳಲ್ಲಿ ಕನಿಷ್ಟ 5 ಲಕ್ಷ ರೂ., ತಾಲೂಕು ಪಂಚಾಯತ್ ವ್ಯಾಪ್ತಿಯಲ್ಲಿ 25 ಲಕ್ಷ ಹಾಗೂ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ 50 ಲಕ್ಷ ರೂ. ಗಳನ್ನು ಸಾಂಸ್ಕೃತಿಕ ನಿಧಿಯನ್ನಾಗಿ ಮೀಸಲಿಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಸಿ. ಸೋಮಶೇಖರ್ ತಿಳಿಸಿದರು.
ತುಮಕೂರಿನಲ್ಲಿ ಮಾತನಾಡಿದ ಅವರು, ಗಡಿ ಭಾಗದಲ್ಲಿರುವ ಸರ್ಕಾರಿ ಸಂಸ್ಥೆಗಳಲ್ಲದೇ, ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಕನ್ನಡಪರ ಸಂಸ್ಥೆಗಳ ಶಾಲೆಗಳಿಗೆ ಅಗತ್ಯವಾದ ಶಾಲಾ ಕೊಠಡಿ, ಗ್ರಂಥಾಲಯ, ರಸ್ತೆ ಸಂಪರ್ಕ, ಶುದ್ಧ ಕುಡಿಯುವ ಘಟಕ. ನೀರಿನ ಪೀಠೋಪಕರಣ, ಸಾಂಸ್ಕೃತಿಕ ಭವನ ಹಾಗೂ ಇನ್ನಿತರ ಪೂರಕವಾದ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದರ ಜೊತೆಗೆ ಈ ಭಾಗದಲ್ಲಿ ಕನ್ನಡಪರ ಸಾಂಸ್ಕೃತಿಕ ವಾತಾವರಣ ಉಂಟು ಮಾಡುವುದು, ಕನ್ನಡಪರ ಸಾಹಿತ್ಯ, ಸಂಸ್ಕೃತಿ, ಕಲೆಗಳ ಉತ್ಸವಗಳನ್ನು ಏರ್ಪಡಿಸುವುದು ಪ್ರಾಧಿಕಾರದ ಉದ್ದೇಶವಾಗಿದೆ ಎಂದು ಹೇಳಿದರು.
ಜಿಲ್ಲೆಯ ಮಧುಗಿರಿ, ಶಿರಾ ಹಾಗೂ ಪಾವಗಡ ಸೇರಿದಂತೆ ಮೂರು ತಾಲೂಕುಗಳು ಗಡಿ ಭಾಗದ ವ್ಯಾಪ್ತಿಗೆ ಒಳಪಡಲಿದ್ದು, ಈ ತಾಲೂಕುಗಳಲ್ಲಿನ ಗಡಿ ಪ್ರದೇಶಗಳ ಅಭಿವೃದ್ಧಿಗಾಗಿ ಅಲ್ಲಿನ ಆರ್ಥಿಕ, ಕೈಗಾರಿಕಾ, ಸಾಮಾಜಿಕ ಹಾಗೂ ಶೈಕ್ಷಣಿಕ ಸ್ಥಿತಿಗಳ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡುವಂತೆ ವಿಶ್ವವಿದ್ಯಾನಿಲಯಕ್ಕೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.
ಗಡಿಭಾಗದ ಗ್ರಾಮದ ನಾಮಫಲಕ ಕನ್ನಡದಲ್ಲಿರುವಂತೆ ನೋಡಿಕೊಳ್ಳುವುದರ ಜೊತೆಗೆ ಗಡಿಭಾಗದಲ್ಲಿ ಭಾಷೆ, ಜಾತಿ ಸೇರಿದಂತೆ ಸೂಕ್ಷ್ಮ ವಿಚಾರಗಳಲ್ಲಿ ಸಂಘರ್ಷಗಳು ನಡೆಯದಂತೆ ಅನ್ಯ ಭಾಷಿಕರಿಗೆ ಯಾವುದೇ ರೀತಿ ಧಕ್ಕೆಯಾಗದಂತೆ ಉತ್ತಮ ವಾತಾವರಣ ಕಲ್ಪಿಸಬೇಕು. ಗಡಿಗ್ರಾಮದ ಶಾಲೆಗಳ ಅಭಿವೃದ್ಧಿಗೆ ಒತ್ತು ಕೊಡಬೇಕು. ಮುಖ್ಯವಾಗಿ ಶುದ್ಧ ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು. ಜಿಲ್ಲೆಯ ಗಡಿ ಭಾಗದ ಮೂರು ತಾಲೂಕಿನ ಗಡಿಗ್ರಾಮದ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದ್ದರೆ ಗಮನಕ್ಕೆ ತಂದು ಶಿಕ್ಷಕರ ಹುದ್ದೆಗಳನ್ನು ತುಂಬಲು ಕ್ರಮವಹಿಸಬೇಕು. ಗಡಿಭಾಗದ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳ ಸಬಲೀಕರಣ, ಅಲ್ಲಿನ ಸಮಸ್ಯೆಗಳ ಪರಿಹಾರ ಹಾಗೂ ಪಠ್ಯಪುಸ್ತಕ ಸೇರಿ ಮೂಲ ಸೌಲಭ್ಯ ಒದಗಿಸಲು ಕ್ರಮವಹಿಸಬೇಕು ಎಂದು ನಿರ್ದೇಶಿಸಿದರು.
ಗಡಿಭಾಗದ ಗ್ರಾಮದ ಶಾಲಾ ಮಕ್ಕಳ ಕೌಶಲ್ಯಾಭಿವೃದ್ಧಿಗೆ ಒತ್ತು ಕೊಡಬೇಕು ಎಂದ ಅವರು, ಸ್ವಾತಂತ್ರ÷್ಯ ಅಮೃತ ಮಹೋತ್ಸವದ ಅಂಗವಾಗಿ ಗಡಿಭಾಗದ ಗ್ರಾಮಗಳಲ್ಲಿ 10 ಯುವ ಸಂಘಗಳನ್ನು ರಚಿಸಿ ಕನ್ನಡ ಕುರಿತ ವಿಚಾರ ಗೋಷ್ಠಿ, ವಿಚಾರ ಸಂಕಿರಣಗಳನ್ನು ನಡೆಸಲು ಹಾಗೂ ಮಹಿಳೆಯರ ಸ್ವಾವಲಂಬನೆಗಾಗಿ ಸಂಘಟನೆಗಳನ್ನು ರಚಿಸಬೇಕು ಎಂದು ಯುವ ಸಬಲೀಕರಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯ ಗಡಿ ತಾಲ್ಲೂಕಿನ ಪ್ರದೇಶಗಳ ಅಭಿವೃದ್ಧಿಗಾಗಿ 870 ಲಕ್ಷ ರೂ. ಅನುದಾನ ಮಂಜೂರಾಗಿದ್ದು, ಪ್ರಾಧಿಕಾರದಿಂದ 680 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಈ ಪೈಕಿ ವಿವಿಧ ಇಲಾಖೆಗಳು 309 ಲಕ್ಷ ರೂ.ಗಳಿಗೆ ಮಾತ್ರ ಅನುದಾನ ಬಳಕೆ ಪ್ರಮಾಣ ಪತ್ರವನ್ನು ಸಲ್ಲಿಸಿದ್ದು, 370 ಲಕ್ಷ ರೂ.ಗಳಿಗೆ ಈವರೆಗೂ ಹಣ ಬಳಕೆ ಪ್ರಮಾಣ ಪತ್ರ ಸಲ್ಲಿಸಿರುವುದಿಲ್ಲ. ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡ ಇಲಾಖೆಗಳು ಪೂರ್ಣಗೊಂಡ ಕಾಮಗಾರಿಗಳ ಅನುದಾನ ಬಳಕೆ ಪ್ರಮಾಣಪತ್ರಗಳನ್ನು ಕೂಡಲೇ ಪ್ರಾಧಿಕಾರಕ್ಕೆ ಸಲ್ಲಿಸಬೇಕು ಎಂದು ನಿರ್ದೇಶಿಸಿದರು.
ಜಿಲ್ಲೆಯ ಗಡಿ ಪ್ರದೇಶದ ಅಭಿವೃದ್ಧಿಗಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅನುದಾನದಲ್ಲಿ ಕೈಗೆತ್ತಿಕೊಳ್ಳಲಾಗಿರುವ ಸಾಂಸ್ಕöÈತಿಕ ಭವನ, ಕನ್ನಡ ಭವನ ಮತ್ತಿತರ ಕಾಮಗಾರಿಗಳ ಅನುದಾನ ಬಳಕೆ ಪ್ರಮಾಣಪತ್ರ ಸಲ್ಲಿಸುವುದರ ಜೊತೆಗೆ ಚಾಲ್ತಿಯಲ್ಲಿರುವ ಕಾಮಗಾರಿಗಳನ್ನು ಪರಿಶೀಲಿಸಿ ವರದಿಯನ್ನು ಸಲ್ಲಿಸಬೇಕು ಎಂದು ತಿಳಿಸಿದರು.
ಗಡಿ ಪ್ರಾಧಿಕಾರದಿಂದ ನಿರ್ಮಾಣವಾದ ಭವನ, ಶಾಲೆಗಳ ಮೇಲೆ ಗಡಿ ಪ್ರಾಧಿಕಾರದಿಂದ ನಿರ್ಮಾಣವಾಗಿದೆ ಎಂದು ನಾಮ ಫಲಕಗಳನ್ನು ಅಳವಡಿಸಬೇಕು ಎಂದು ನಿರ್ದೇಶಿಸಿದರು.