ಟೋಕಿಯೋದಲ್ಲಿ ನಡೆಯುತ್ತಿರುವ ಒಲಂಪಿಕ್ ಕ್ರೀಡಾಕೂಟದಲ್ಲಿ ಭಾರತ ಮೊದಲ ಚಿನ್ನದ ಪದಕ ಗೆದ್ದಿದೆ. ಅಥ್ಲೆಟ್ ನೀರಜ್ ಚೋಪ್ರ ಜಾವೆಲಿನ್ ಎಸೆತದಲ್ಲಿ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟಿದ್ದಾರೆ. ದೇಶದ ಕೀರ್ತಿ ಪತಾಕೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾರಿಸಿದ್ದಾರೆ.
ಇಪ್ಪತ್ತಮೂರು ವರ್ಷದ ಯುವ ಆಟಗಾರ ನೀರಜ್ ಚೋಪ್ರ ದೇಶದ ಜನರ ನಿರೀಕ್ಷೆಯನ್ನು ಇಮ್ಮಡಿಗೊಳಿಸುವಂತೆ ಮಾಡಿದ್ದಾರೆ. ಆಗಸ್ಟ್ 7ರಂದು ಟೋಕಿಯೋದ ನೆಲದಲ್ಲಿ ಮೊದಲ, ಎರಡನೇ ಮತ್ತು ಮೂರನೇ ಸುತ್ತಿನಲ್ಲಿ ಜಾವೆಲಿನ್ ಸ್ಪರ್ಧೆಯಲ್ಲಿ 86.59, 87.03 ಹಾಗೂ 76.79 ಮೀಟರ್ ಎಸೆದರು.
ನಾಲ್ಕು ಮತ್ತು ಐದನೇ ಸುತ್ತಿನಲ್ಲಿ ನೀರಜ್ ಚೋಪ್ರ ತನ್ನ ಗುರಿಯನ್ನು ಸಾಧಿಸಿದರು. ಇತರೆ ಸ್ಪರ್ಧಿಗಳು ಚಿನ್ನದ ಪದಕ ಪಡೆಯುವ ನೀರಜ್ ಗುರಿಯನ್ನು ಮುಟ್ಟಲು ಸಾಧ್ಯವಾಗಲೇ ಇಲ್ಲ.
ಎರಡನೇ ರೌಂಡ್ ನಲ್ಲಿ 87.03 ಮೀಟರ್ ದೂರ ಎಸೆದು ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಭಾರತದ ನೀರಜ್ ದೇಶದ ಮೊದಲ ಅಥ್ಲೆಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ನೀರಜ್ ಇಟ್ಟ ಗುರಿಯನ್ನು ತಲುಪಿ ಭಾರತಕ್ಕೆ ಕೀರ್ತಿ ತಂದಿದ್ದಾರೆ.
ಭಾರತದ ನೀರಜ್ 87.03 ಮೀಟರ್ ದೂರ ಎಸೆದು ಚಿನ್ನದ ಪದಕ ಗಳಿಸಿದರೆ, ಜಕ್ ಗಣರಾಜ್ಯದ ಜಾಕೂಬ್ ವಡ್ಲೆಜ್ 86.67 ಮೀಟರ್ ಎಸೆದು ಬೆಳ್ಳಿ ಪದಕ ಮತ್ತು ವೈಟ್ ಪ್ಲೈಲ್ ವೆಸೆ ಅವರು 85.44 ಮೀಟರ್ ಎಸೆದು ಕಂಚಿನ ಪದಕ ಪಡೆಯುವಲ್ಲಿ ಯಶಸ್ವಿಯಾದರು.
ಈ ಬಾರಿ ಭಾರತ ಪದಕ ಬೇಟೆಯಲ್ಲಿ 2012ರಲ್ಲಿ ಲಂಡನ್ ನಲ್ಲಿ ನಡೆದ ಒಲಂಪಿಕ್ ಕ್ರೀಡಾಕೂಟವನ್ನು ಮಸುಕುಗೊಳಿಸಿದೆ. ಶಾರ್ಪಶೂಟರ್ ಅಭಿನವ್ ಬಿಂದ್ರಾ ವೈಯಕ್ತಿಕ ಆಟದಲ್ಲಿ ಶೂಟಿಂಗ್ ನಲ್ಲಿ ಚಿನ್ನದ ಪದಕ ಪಡೆದಿದ್ದರು. ಈಗ ನೀರಜ್ ಚಿನ್ನದ ಪದಕ ಗಳಿಸಿದ್ದಾರೆ.
ಚಿನ್ನದ ಪದಕ ಪಡೆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ನೀರಜ್ ಚೋಪ್ರ ‘ಇದು ನನ್ನ ಮೊದಲ ಒಲಂಪಿಕ ಕ್ರೀಡಾಕೂಟ. ನನಗೆ ಒಳ್ಳೆಯ ಭಾವನೆಗಳನ್ನು ಮೂಡಿಸಿದೆ. ನನ್ನ ಪ್ರಗತಿ ಅಷ್ಟೇನು ಒಳ್ಳೆಯದಾಗಿರಲಿಲ್ಲ. ಆದರೆ ನನ್ನ ಮೊದಲ ಎಸೆತ ಗುರಿಯನ್ನು ತಲುಪಿತು. ನನ್ನ ದೃಷ್ಟಿ ಎಸೆತ ಮೇಲಿತ್ತು. ಆ ದೃಷ್ಟಿಯಿಂದ ಹೆಚ್ಚು ಅಂಕಗಳು ಬರುವಂತೆ ಮಾಡಿತು’ ಎಂದು ಹೇಳಿದ್ದಾರೆ.
ನೀರಜ್ ಚೋಪ್ರ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ ಪ್ರಶಂಸಿದ್ದಾರೆ.
ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಟ್ವೀಟ್ ಮೂಲಕ ಚಿನ್ನದ ಪದಕ ಗೆದ್ದಿರುವ ನೀರಜ್ ಚೋಪ್ರ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೂಡ ಅಭಿನಂದನೆಗಳನ್ನು ಹೇಳಿದ್ದಾರೆ.