ಒಕ್ಕೂಟ ವ್ಯವಸ್ಥೆಗೆ ಬೆದರಿಕೆ ಒಡ್ಡುತ್ತಿರುವ ಮಹಾರಾಷ್ಟ್ರದ ಏಕನಾಥ್ ಶಿಂಧೆ ಸರ್ಕಾರವನ್ನು ಕೇಂದ್ರ ಸರ್ಕಾರ ಕೂಡಲೇ ವಜಾ ಮಾಡಬೇಕು, ರಾಜ್ಯದ ಹಿತ ಕಾಯುವಲ್ಲಿ ವಿಫಲವಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ
ಮಹಾರಾಷ್ಟ್ರ ಸರ್ಕಾರವು ಕರ್ನಾಟಕದ ಗಡಿಯೊಳಗಿನ 865 ಹಳ್ಳಿಗಳಿಗೆ ಮಹಾತ್ಮ ಜ್ಯೋತಿಬಾ ಫುಲೆ ಜನ ಆರೋಗ್ಯ ಯೋಜನೆ ಎಂಬ ಕಾರ್ಯಕ್ರಮವನ್ನು ಅನುಷ್ಠಾನ ಮಾಡಲು ಹೊರಟಿರುವುದು ನಾಡಿನ ಸಾರ್ವಭೌಮತೆ ಮತ್ತು ಸಮಗ್ರತೆಗೆ ಹಾಕಿರುವ ಸವಾಲು. ಪದೇ ಪದೇ ಈ ರೀತಿ ಕನ್ನಡಿಗರ ತಾಳ್ಮೆ ಪರೀಕ್ಷೆ ಮಾಡಿದರೆ ತಕ್ಕ ಪರಿಣಾಮ ಎದುರಿಸಬೇಕಾದೀತು, ಎಚ್ಚರ ಎಂದು ಕಿಡಿಕಾರಿದ್ದಾರೆ.
ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ಹಂಚಿಕೆಗೆ ಸಂಬಂಧಿಸಿದಂತೆ ಮಹಾಜನ್ ವರದಿಯೇ ಅಂತಿಮ. ನಾವು ಈ ವರದಿಯನ್ನು ಒಪ್ಪಿಕೊಂಡಿದ್ದೇವೆ. ಮಹಾರಾಷ್ಟ್ರದವರು ಈಗ 865 ಹಳ್ಳಿಗಳು ತಮ್ಮವು ಎಂದು ಹೇಳುತ್ತಿದ್ದಾರೆ. ಆರೋಗ್ಯ ವಿಮಾ ಯೋಜನೆಯನ್ನು ಈ ಹಳ್ಳಿಗಳಿಗೆ ಜಾರಿ ಮಾಡಬೇಕು ಎಂದು ಕಾರ್ಯಕ್ರಮವನ್ನು ಘೋಷಣೆ ಮಾಡಿದ್ದಾರೆ, ಈ ಬಗ್ಗೆ ಆಡಳಿತ ಪಕ್ಷದ ಹಿರಿಯ ಸಚಿವರೊಬ್ಬರು ಹೇಳಿಕೆಯನ್ನು ಕೂಡ ನೀಡಿದ್ದಾರೆ. ಇಷ್ಟೆಲ್ಲಾ ಬೆಳವಣಿಗೆಗಳು ನಡೆಯುತ್ತಿದ್ದರೂ ಕೇಂದ್ರ ಸರ್ಕಾರ ಸುಮ್ಮನಿದೆ, ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಕೂಡ ಮಾತನಾಡುತ್ತಿಲ್ಲ, ಇಲ್ಲಿ ಸರ್ಕಾರ ಸತ್ತು ಹೋಗಿದೆಯಾ ಎಂಬ ಅನುಮಾನ ಬರುತ್ತಿದೆ ಎಂದಿದ್ದಾರೆ.
ಮಹಾರಾಷ್ಟ್ರ ಸರ್ಕಾರ ನಮ್ಮ ರಾಜ್ಯದ ಗಡಿಯೊಳಗೆ ಇರುವ ಹಳ್ಳಿಗಳಿಗೆ ಬಂದು ಆರೋಗ್ಯ ವಿಮಾ ಸೌಲಭ್ಯವನ್ನು ನೀಡುತ್ತೇವೆ ಎಂದರೂ ಕ್ರಮ ಕೈಗೊಳ್ಳಬೇಕಾದರೂ ಸುಮ್ಮನಿದ್ದಾರೆ ಎಂದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸತ್ತು ಹೋಗಿವೆಯಾ ಎಂಬ ಪ್ರಶ್ನೆ ಉದ್ಭವವಾಗುತ್ತದೆ. ಪ್ರಧಾನಿಗಳು ಕೂಡ ಅವರಿಗೆ ಬುದ್ದಿ ಹೇಳಿಲ್ಲ. ಇದು ನಮ್ಮ ಸಾರ್ವಭೌಮತೆಗೆ ಸವಾಲು ಆಗಿದೆ ಎಂದರು.
ಏಕೀಕರಣದ ನಂತರ ಭಾಷಾವಾರು ಪ್ರಾಂತ್ಯಗಳು ರಚನೆಯಾದ ಮೇಲೆ ನಮ್ಮ ರಾಜ್ಯದ ಒಂದಿಂಚನ್ನು ನಾವು ಯಾವುದೇ ಕಾರಣಕ್ಕೂ ಬಿಟ್ಟುಕೊಡಬಾರದು. ಭಾಷೆ, ಸಂಸ್ಕೃತಿ, ನೆಲ, ಜಲ ನಮ್ಮ ಆರೂವರೆ ಕೋಟಿ ಜನರ ಹಕ್ಕು ಮತ್ತು ಸಾರ್ವಭೌಮತೆಯ ಸಂಕೇತ. ಇದಕ್ಕೆ ಧಕ್ಕೆ ಬಂದಾಗ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಾಯಿ ಮುಚ್ಚಿಕೊಂಡು ಕೂರಬಾರದು. ಇಂಥ ಘಟನೆಗಳಿಂದ ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗುತ್ತದೆ. ಆಗ ನಾವು ಒಕ್ಕೂಟ ವ್ಯವಸ್ಥೆಯಡಿ ಮುಂದುವರೆಯುವ ಬಗ್ಗೆ ಕೆಟ್ಟ ಯೋಚನೆಗಳು ಆರಂಭವಾಗುತ್ತದೆ ಎಂದು ಹೇಳಿದ್ದಾರೆ.
ಮಹಾರಾಷ್ಟ್ರದ ಕನ್ನಡಿಗರು ಕರ್ನಾಟಕ ಸೇರುವ ಹೇಳಿಕೆ ನೀಡಿದ್ದರು, ಹಾಗಂತ ಅದಕ್ಕೆ ನಾವು ಮಧ್ಯಪ್ರವೇಶ ಮಾಡಲು ಆಗುತ್ತಾ? ಅವರ ಸಮಸ್ಯೆಗಳಿಗೆ ಅಲ್ಲಿನ ಸರ್ಕಾರ ಪರಿಹಾರ ನೀಡಿಲ್ಲ ಎಂದು ನಾವು ಅವರಿಗೆ ಕಾರ್ಯಕ್ರಮಗಳನ್ನು ನೀಡಲು ಆಗುತ್ತದಾ? ನಾವು ಅಲ್ಲಿನ ಕನ್ನಡಿಗರಿಗೆ ಸವಲತ್ತು ನೀಡಲು ಹೋದರೆ ಅದು ಒಕ್ಕೂಟ ವ್ಯವಸ್ಥೆಯ ಒಳ್ಳೆಯ ಲಕ್ಷಣವಾಗಲ್ಲ. ಅದೇ ರೀತಿ ಅವರು ಕೂಡ ಇಲ್ಲಿನವರಿಗೆ ಕಾರ್ಯಕ್ರಮ ನೀಡುವುದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ತಿಳಿಸಿದರು.
ಕರ್ನಾಟಕದ ಗಡಿಯೊಳಗೆ ಇರುವ ಜನರಿಗೆ ಕಾರ್ಯಕ್ರಮ ನೀಡುತ್ತೇವೆ ಎಂಬ ಹೇಳಿಕೆ ನೀಡಿರುವವರು ಏಕನಾಥ್ ಶಿಂಧೆ ಸರ್ಕಾರದಲ್ಲಿರುವ ಹಿರಿಯ ನಾಯಕರು. ನಾವು ಶಾಂತವಾಗಿದ್ದೀವಿ ಎಂದರೆ ನಮ್ಮ ನೆಲ, ಜಲದ ವಿಚಾರದಲ್ಲಿ ಮಾತನಾಡಲ್ಲ ಎಂದರ್ಥವಲ್ಲ, ನಮ್ಮನ್ನು ಪದೇ ಪದೇ ಕೆಣಕಲು ನೋಡುತ್ತಾರೆ. ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಕೂಡಲೇ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಿ, ಮಹಾರಾಷ್ಟ್ರದ ಏಕನಾಥ್ ಶಿಂಧೆ ಸರ್ಕಾರವನ್ನು ವಜಾ ಮಾಡಬೇಕು. ಈ ಘಟನೆ ಒಕ್ಕೂಟ ವ್ಯವಸ್ಥೆಗೆ ಒಂದು ಬೆದರಿಕೆ. ನಮ್ಮ ಮುಖ್ಯಮಂತ್ರಿಗಳು ರಾಜ್ಯದ ಹಿತಾಸಕ್ತಿ ಮತ್ತು ಕನ್ನಡಿಗರ ಹಿತ ಕಾಪಾಡುವಲ್ಲಿ ವಿಫಲವಾಗಿದ್ದಾರೆ, ಅವರಿಗೆ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯುವ ಯಾವುದೇ ನೈತಿಕತೆ ಇಲ್ಲ, ಅವರು ಕೂಡ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.