ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಅಟ್ಟಿಕಾ ಬಾಬು ಅಲಿಯಾಸ್ ಬೊಮ್ಮನಹಳ್ಳಿ ಬಾಬು ಅವರ ತುಮಕೂರಿನ ನಿವಾಸದ ಮೇಲೆ ಚುನಾವಣಾಧಿಕಾರಿಗಳು ದಾಳಿ ನಡೆಸಿ ಮತದಾರರಿಗೆ ಹಂಚಲು ಸಂಗ್ರಹಿಸಿದ್ದ ಆಹಾರ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ.
ತುಮಕೂರಿನ ಉಪ್ಪಾರಹಳ್ಳಿಯ ಪಿ.ಎನ್.ಕೆ ಲೇಔಟ್ ನಲ್ಲಿ ಅಟ್ಟಿಕಾ ಬಾಬು ಚುನಾವಣೆಗಾಗಿಯೇ ಮನೆಯೊಂದನ್ನು ಖರೀದಿ ಮಾಡಿದ್ದರು, ಅಲ್ಲಿ ಮತದಾರರಿಗೆ ಹಂಚಲು ಆಹಾರ ಸಾಮಗ್ರಿಗಳನ್ನು ಮನೆಯ ಮುಂದಿನ ಪೆಂಡಾಲ್ ಅಡಿ ಸಂಗ್ರಹಿಸಿಟ್ಟಿದ್ದರು.
ವಿಷಯ ತಿಳಿದ ಚುನಾವಣಾಧಿಕಾರಿಗಳು ಅಟ್ಟಿಕಾ ಬಾಬು ನಿವಾಸದ ಮೇಲೆ ಇಂದು ದಾಳಿ ಮಾಡಿ ಮತದಾರರಿಗೆ ಹಂಚಲು ಚೀಲಗಳಲ್ಲಿ ಸಂಗ್ರಹಿಸಿಟ್ಟಿದ್ದ ಅಕ್ಕಿ, ಬೇಳೆ, ಉಪ್ಪ ಮೊದಲಾದ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ.
ಚುನಾವಣೆ ನೀತಿ ಸಂಹಿತೆ ಘೋಷಣೆಯಾಗುವ ಮೊದಲೇ ಎಚ್ಚೆತ್ತುಕೊಂಡಿರುವ ಚುನಾವಣಾಧಿಕಾರಿಗಳು ತಮಗೆ ದೊರೆತ ಖಚಿತ ಮಾಹಿತಿಯ ಹಿನ್ನೆಲೆಯಲ್ಲಿ ಈ ದಾಳಿ ನಡೆಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ದಾಳಿಯ ನೇತೃತ್ವ ವಹಿಸಿದ್ದ ಅಧಿಕಾರಿಯೊಬ್ಬರು, ಆಹಾರ ಧಾನ್ಯಗಳನ್ನು ಸಂಗ್ರಹಿಸಿಟ್ಟಿರುವ ಬಗ್ಗೆ ಖಚಿತ ಮಾಹಿತಿ ದೊರೆಯಿತು. ಹಾಗಾಗಿ ದಾಳಿ ಮಾಡಿದ್ದು ವಸ್ತುಗಳನ್ನು ವಶಕ್ಕೆ ತೆಗೆದುಕೊಂಡಿದೆ. ಈ ಸಂಬಂಧ ಪ್ರಕರಣ ದಾಖಲಿಸಲಾಗುವುದು ಎಂದು ಹೇಳಿದ್ದಾರೆ.