ರಾಜ್ಯ ಸರ್ಕಾರ ಇಂದಿರಾ ಕ್ಯಾಂಟೀನ್ ಗಳನ್ನು ಮುಚ್ಚಿದರೆ ಬಡವರು, ಕಾರ್ಮಿಕರು ಮತ್ತು ವಿದ್ಯಾರ್ಥಿಗಳ ಹೊಟ್ಟೆ ಮೇಲೆ ಹೊಡೆದಂತಾಗುತ್ತದೆ. ಇಂದಿರಾ ಗಾಂಧಿ ಹೆಸರಿದೆ ಎಂಬ ಏಕೈಕ ಕಾರಣಕ್ಕೆ ಕ್ಯಾಂಟೀನ್ ಗಳನ್ನು ಮುಚ್ಚಿದರೆ ಬಡವರ ಶಾಪ ಈ ಸರ್ಕಾರಕ್ಕೆ ತಟ್ಟಲಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ನಮ್ಮ ಸರ್ಕಾರ ಇರುವಾಗ ಇಂದಿರಾ ಕ್ಯಾಂಟೀನ್ ಗಳನ್ನು ಆರಂಭಿಸಿದ್ದೆವು. ಬೆಂಗಳೂರು ನಗರದ ಎಲ್ಲಾ 198 ವಾರ್ಡ್ ಗಳಲ್ಲಿ ಆರಂಭ ಮಾಡಿದ್ದೆವು. ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಆರಂಭ ಮಾಡಬೇಕು ಎಂದು ನಿರ್ಧಾರ ಮಾಡಿದ್ದೆವು, ಅಷ್ಟೊತ್ತಿಗೆ ನಮ್ಮ ಸರ್ಕಾರ ಅಧಿಕಾರದಿಂದ ಹೋಗಿ ಸಮ್ಮಿಶ್ರ ಸರ್ಕಾರ ಬಂದಿತು. ಆ ನಂತರ ಆಪರೇಷನ್ ಕಮಲದ ಅನೈತಿಕ ಮಾರ್ಗದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿತು ಎಂದರು.
ನಾವು ಇಂದಿರಾ ಗಾಂಧಿ ಅವರ ಹೆಸರಿಟ್ಟು ಕ್ಯಾಂಟೀನ್ ಗಳನ್ನು ಆರಂಭ ಮಾಡಿದೆವು. ಕ್ಯಾಂಟೀನ್ ಸ್ಥಾಪನೆಯ ನಮ್ಮ ಉದ್ದೇಶ ಬಡವರು, ಹಳ್ಳಿಗಳಿಂದ ಬರುವ ಜನರು, ಆಸ್ಪತ್ರೆಗಳಿಗೆ ಬರುವವರು, ವಿದ್ಯಾರ್ಥಿಗಳು ಮುಂತಾದವರಿಗೆ ಕಡಿಮೆ ಬೆಲೆಯಲ್ಲಿ ಆಹಾರ ಪದಾರ್ಥಗಳು ಸಿಗಬೇಕು ಎಂಬುದಾಗಿತ್ತು. ನಾವು 400 ಇಂದಿರಾ ಕ್ಯಾಂಟೀನ್ ಗಳನ್ನು ಸ್ಥಾಪನೆ ಮಾಡಿದ್ದೆವು. ಈಗಿನ ಬಿಜೆಪಿ ಸರ್ಕಾರ ಇಂದಿರಾ ಕ್ಯಾಂಟೀನ್ ಗಳನ್ನು ಶಾಶ್ವತವಾಗಿ ಮುಚ್ಚಲು ಹೊರಟಿದೆ ಎಂದು ದೂರಿದರು.
ನಿನ್ನೆ ಬ್ಯಾಡಗಿ, ಹಿರೇಕೆರೂರಿನಲ್ಲಿ ಇಂದಿರಾ ಕ್ಯಾಂಟೀನ್ ನಡೆಯುತ್ತಿದೆಯಾ ಎಂದು ಕೇಳಿದೆ, ಈ ಎಲ್ಲಾ ಕಡೆ ಮುಚ್ಚಿದ್ದಾರಂತೆ. ಬೆಂಗಳೂರು ನಗರದ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿದ್ದ ಇಂದಿರಾ ಕ್ಯಾಂಟೀನನ್ನು ಮುಚ್ಚಿದ್ದಾರೆ. ಬೆಂಗಳೂರು ನಗರದ ಎಲ್ಲಾ 198 ವಾರ್ಡ್ ಗಳಲ್ಲಿ ಕ್ಯಾಂಟೀನ್ ಆರಂಭ ಮಾಡಿದ್ದೆವು. ಪ್ರತಿ ಹೊತ್ತು ಸುಮಾರು 500 ಜನ ಒಂದೊಂದು ಕ್ಯಾಂಟೀನ್ ನಲ್ಲಿ ತಿಂಡಿ, ಊಟ ಮಾಡುತ್ತಿದ್ದರು ಎಂದು ಹೇಳಿದರು.
ಯಾವ ಕಾರಣಕ್ಕೂ ಈ ಇಂದಿರಾ ಕ್ಯಾಂಟೀನ್ ಗಳನ್ನು ಮುಚ್ಚಬಾರದು ಎಂದು ನಾನು ಒತ್ತಾಯ ಮಾಡುತ್ತೇನೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಹೆಸರಿದೆ ಎಂಬ ಕಾರಣಕ್ಕೆ ಈ ಕ್ಯಾಂಟೀನ್ ಗಳನ್ನು ಮುಚ್ಚಲು ಹೋಗಬಾರದು ಎಂದು ಆಗ್ರಹಿಸಿದರು.