ಭಾರತ ಭವಿಷ್ಯದಲ್ಲಿ ಕಾಂಗ್ರೆಸ್ ಮುಕ್ತವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಬಾಗಲಕೋಟೆಯಲ್ಲಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ತಬ್ಬಲಿಯಾಗಿರುವ ಕಾಂಗ್ರೆಸ್ ಪಕ್ಷದವರು ನರೇಂದ್ರ ಮೋದಿಯವರಿಗೆ ಹೇಗೆ ಸಮ ಎಂದು ಪ್ರಶ್ನಿಸಿದರು.
ಮೂರು ರಾಜ್ಯಗಳಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಸೋತು ಸುಣ್ಣವಾಗಿದೆ. ಕರ್ನಾಟಕದಲ್ಲಿ ಪಕ್ಷವನ್ನ ಸಂಘಟಿಸಿ ಅಧಿಕಾರಕ್ಕೆ ತರುವುದೇ ನನ್ನ ಗುರಿ ಎಂದರು.
ರಾಜ್ಯದಲ್ಲಿ 140 ಕ್ಕೂ ಅಧಿಕ ಸ್ಥಾನ ಗೆಲ್ಲಲು ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡುವೆ. ಅಧಿಕಾರದ ಕುರ್ಚಿಗಾಗಿ ಅಂಟಿಕೊಂಡ ವ್ಯಕ್ತಿಯಲ್ಲ. ಇನ್ನೊಬ್ಬರಿಗೆ ಅವಕಾಶ ನೀಡುವ ಉದ್ದೇಶದಿಂದ ನಾನು ಅಧಿಕಾರವನ್ನು ಸ್ವಯಂ ಸ್ಪೂರ್ತಿಯಿಂದ ಬಿಟ್ಟಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಬಿಜೆಪಿ ಮೀಸಲಾತಿ ಹೆಚ್ಚಿಸಿದೆ. ಸದಾ ಸಾಮಾಜಿಕ ನ್ಯಾಯದ ಪರವಾಗಿದೆ. ಸರ್ವತೋಮುಖ ಅಭಿವೃದ್ಧಿಯೇ ಪಕ್ಷದ ಗುರಿಯಾಗಿದ್ದು ಮತದಾರರು ಬಿಜೆಪಿಗೆ ಮತ ಹಾಕಲಿದ್ದಾರೆ ಎಂದು ಹೇಳಿದರು.
ಕೇಂದ್ರ ಸಚಿವ ವಿ.ಕೆ.ಸಿಂಗ್ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಜನಪರ ಜನಸಾಮನ್ಯರ ಹಾಗೂ ದೀನ ದಲಿತರ ಪರವಾಗಿ ಮಾಡಿರುವ ಉತ್ತಮ ಕಾರ್ಯದಿಂದ ಮತ್ತೆ ತಮ್ಮ ಆಶೀರ್ವಾದದಿಂದ ಅಧಿಕಾರಕ್ಕೆ ಬರಲಿದೆ ಎಂದರು.