ಹಠಕ್ಕೆ ಬಿದ್ದಿದ್ದೀನಿ, ಹಠಕ್ಕೆ ಬಿದ್ದಿದ್ದೀನಿ, ಬನ್ರೋ ನನ್ ಮಕ್ಕಳ ಅದ್ ಯಾರ್ ಬರ್ತೀರಿ ನಾನು ನೋಡ್ತೀನಿ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ವಿರೋಧಿಗಳ ಕುರಿತು ಆಡಿರುವ ಮಾತಿನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
ತುಮಕೂರು ಜಿಲ್ಲೆಯ ಕೊರಟಗೆರೆಯಲ್ಲಿ ನಡೆದಿರುವ ಸಮಾರಂಭವೊಂದರಲ್ಲಿ ಡಾ.ಜಿ. ಪರಮೇಶ್ವರ್ ಹೀಗೆ ಹೇಳುತ್ತಿದ್ದಂತೆ ಸಭಿಕರು ಶಿಳ್ಳೆ ಹೊಡೆದು ಚಪ್ಪಾಳೆ ತಟ್ಟಿ ಕೇಕೆ ಹಾಕಿ, ಪರಮೇಶ್ವರ್ ಅವರಿಗೆ ಜಯಕಾರ ಹಾಕಿ ಸಂಭ್ರಮಿಸಿದ್ದಾರೆ.
ಹಠಕ್ಕೆ ಬಿದ್ದಿದ್ದೀನ್ರಿ, ಯಾರ್ದು ಧೈರ್ಯ ಎಂದು ಕೇಳಿದಕ್ಕೆ ಸಭಿಕರು ನಮ್ದು ಧೈರ್ಯ ಎನ್ನುತ್ತಿದ್ದಂತೆಯೇ ನಿಮ್ದು ಧೈರ್ಯ ಎಂದು ಪರಮೇಶ್ವರ್ ಹೇಳುತ್ತಾ ಹಠಕ್ಕೆ ಬಿದ್ದಿದ್ದೀನಿ ಎನ್ನುತ್ತಾರೆ. ಏನಾಗಂಗಿಲ್ಲ ನನಗೆ. ಮೀಸೆನೂ ಇಲ್ಲ, ಗೀಸೆನೂ ಇಲ್ಲ. ಸಿದ್ದಲಿಂಗಪ್ಪ ನಾನು ಸುಮ್ಮನೆ ಇರೋಲ್ಲ ಎಂದು ಹೇಳುವುದು ವಿಡಿಯೋದಲ್ಲಿ ದಾಖಲಾಗಿದೆ.
ದಯ ಮಾಡಿ ಅರ್ಥ ಮಾಡಿಕೊಳ್ಳಿ, ನಿಮ್ಮ ಬೆಂಬಲ ನನಗೆ ಆನೆ ಬಲ ಬಂದಂತಾಗಿದೆ. ಎಷ್ಟು ಆನೆ ಬಲರೀ ಎಂದಾಗ ಕಾರ್ಯಕರ್ತರು ಶಿಳ್ಳೆ ಹೊಡೆದು ಕೇಕೆ ಹಾಕುತ್ತಾರೆ.
ಮೊನ್ನೆ ಗೊಲ್ಲರ ಸಂಘದವರು ಕಾರ್ಯಕ್ರಮ ಮಾಡಿದರು. ಅವರೆಲ್ಲ ಒಂದೇ ಮಾತು, ಅಣ್ಣಾ ನಾವೆಲ್ಲ ನಿಮ್ಮ ಪರವಾಗಿ ಇದ್ದೀವಿ ಗೊಲ್ಲರು. ನಾವು ಮಾತಿಗೆ ತಪ್ಪೋದಿಲ್ಲ ಅಂದ್ರು, ನಾವ್ ನಿನ್ನ ಜೊತೆಯಲ್ಲಿದ್ದೀವಿ. ಇಡೀ ಸಮುದಾಯ ಆ ಮಾತು ಹೇಳ್ತು ಎಂದು ಪರಮೇಶ್ವರ್ ಹೇಳಿರುವುದು ವಿಡಿಯೋದಲ್ಲಿದೆ.
ಸವಿತಾ ಸಮಾಜ, ಮಡಿವಾಳ ಸಮಾಜ ಸೇರಿದಂತೆ ಎಲ್ಲಾ ಸಮುದಾಯಗಳು ಪರಮೇಶ್ವರ್ ಬೇಕು, ಪರಮೇಶ್ವರ್ ಬೇಕು ಎನ್ನುತ್ತಿವೆ. ನಾನು ಎಷ್ಟು ಅದೃಷ್ಟ ಮಾಡಿದ್ದೀನ್ರಿ. ಎಷ್ಟು ಅದೃಷ್ಟ ಮಾಡಿದೀನಿ ಎಂದರು.
ಕೊರಟಗೆರೆ ತಾಲ್ಲೂಕಿನ ಎಷ್ಟು ಹಳ್ಳಿಗೆ ಬಂದೌವ್ರೆ ಸ್ವಾಮಿ, ಯಾವ ಪಂಚಾಯ್ತಿಗೆ ಬಂದೌವ್ರೆ, (ಕಾರ್ಯಕರ್ತರಿಂದ ಬಂದಿಲ್ಲ, ಬಂದಿಲ್ಲ ಎಂಬ ಘೋಷಣೆ) ಇವ್ರು ನಮ್ ಬಗ್ಗೆ ಮಾತಾಡ್ತಾರೆ ಅಂದ್ರೆ ನಾನ್ ಏನ್ ಹೇಳಾಣ,
ಪಾಪ ಪ್ರಧಾನಮಂತ್ರಿಗಳು ಅವರ ಬಗ್ಗೆ ನಮಗೆ ಗೌರವಿದೆ. ನಮ್ಮ ಪ್ರಧಾನಿ, ಬಿಜೆಪಿ ಪ್ರಧಾನಿ ಅಲ್ಲ ಅವ್ರು, ಈ ದೇಶದ ಪ್ರಧಾನಿ, ಅವರನ್ನು ತಂದು ಪಂಚಾಯ್ತಿ ಲೆವೆಲ್ಲಿಗೆ ನಿಲ್ಲಿಸ್ತೀರಲ್ರಿ. ನೀವೇ ಹೇಳಿ ನಾನ್ ಕೆಲಸ ಮಾಡಿದ್ದೀನಿ ಅಂತ, ಪಾಪ ಬಸವರಾಜು ಹೇಳ್ಬೇಕಲ್ಲ ಕೊರಟಗೆರೆಯಲ್ಲಿ ಅಭಿವೃದ್ಧಿ ನಾನ್ ಮಾಡಿದ್ದೀನಿ ಅಂತ ಹಳಬಹುದಲ್ವಾ? ಎದೆ ತಟ್ಟಿಕೊಂಡು ಹೇಳಿದ್ರೆ, ಪಾಪ ನರೇಂದ್ರ ಮೋದಿ ಯಾಕ್ ಬರ್ತಾರೆ ಇಲ್ಲಿಗೆ?
ಅತ್ಯಂತ ಭ್ರಷ್ಟ ಸರ್ಕಾರ ಬಿಜೆಪೀದು ಕರ್ನಾಟಕದಲ್ಲಿದೆ. ಇಂತಹ ಸರ್ಕಾರವನ್ನ ಇತಿಹಾಸದಲ್ಲೇ ನೋಡೇ ಇಲ್ಲ. ನಾನು ಕೂಡ ಸರ್ಕಾರದಲ್ಲಿದ್ದವನು. ಮಂತ್ರಿಯಾಗಿದ್ದೆ. ಇಷ್ಟು ವರಸ್ಟ್ ಗೌರ್ನಮೆಂಟ್ ನೋಡೋಕಾಗುತ್ತದಾ ಎಂದು ಪ್ರಶ್ನಿಸಿರುವ ಪರಮೇಶ್ವರ್ ವಿಡಿಯೋ 3 ನಿಮಿಷ 13 ಸೆಕೆಂಡ್ ಗಳಷ್ಟಿದೆ.