ಕೊರೊನ ಸೋಂಕಿನ ವ್ಯಾಪಕ ಹರಡುವಿಕೆಯಿಂದ ತತ್ತರಿಸಿ ಹೋಗಿ ನಂತರ ಒಂದಷ್ಟು ದಿನ ಸಲೀಸಾಗಿ ಉಸಿರಾಡುತ್ತಿದ್ದ ಜನರಿಗೆ ಮತ್ತೆ 3ನೇ ಅಲೆ ಬಂದೆರಗಲಿದೆ ಎಂಬ ವರದಿಗಳು ಕಂಗಾಲಾಗುವಂತೆ ಮಾಡಿದೆ. ಮೊದಲ ಮತ್ತು ಎರಡನೇ ಅಲೆಯಲ್ಲಿ ಲಕ್ಷಾಂತರ ಮಂದಿ ಸಾವನ್ನಪ್ಪಿದ್ದರೂ ಸರ್ಕಾರಗಳು ವೈಜ್ಞಾನಿಕ ಕ್ರಮಗಳನ್ನು ಅನುಸರಿಸುವಲ್ಲಿ ಸಂಪೂರ್ಣ ವಿಫಲವಾಗಿರುವುದು ಕೊರೊನ ನಿರ್ವಹಿಸಿದ ರೀತಿಯಲ್ಲಿ ವ್ಯಕ್ತವಾಗಿದೆ.
ಈಗಲೂ ಕೂಡ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸೋಂಕಿನ ಪ್ರಮಾಣ ಕಡಿಮೆಯಾಗಿದ್ದರೂ ಬೆಂಗಳೂರಿನ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಅದು ಏರಿಳಿತಗಳನ್ನು ಕಾಣುತ್ತಲೇ ಇದೆ. ಕೊರೊನ ಸಾವಿನ ಸಂಖ್ಯೆಯಲ್ಲಿ ಇಳಿಮುಖವಾದಂತೆ ಕಂಡುಬಂದರೂ ಸಾವಿನ ಪ್ರಕರಣಗಳು ಸಂಪೂರ್ಣವಾಗಿ ನಿಂತಿಲ್ಲ. ಬೆಂಗಳೂರು, ತುಮಕೂರು, ಮೈಸೂರು, ದಕ್ಷಿಣ ಕನ್ನಡ, ಶಿವಮೊಗ್ಗ ಜಿಲ್ಲೆಗಳಲ್ಲಿ ಕೊರೊನ ಸೋಂಕು ಕಡಿಮೆಯಾಗುತ್ತಿಲ್ಲ.
ಈ ಮಧ್ಯೆ ಜನರನ್ನು ಕೊರೊನ ಪರೀಕ್ಷೆಗೊಳಪಡಿಸುವ ಪ್ರಮಾಣ ಕಡಿಮೆಯಾಗಿದೆ. ಕೊರೊನ ಸೋಂಕು ಕಡಿಮೆ ಆಗಿದೆ ಎಂಬ ಭ್ರಮೆ ಸರ್ಕಾರಕ್ಕೂ ಬಂದಿದೆ. ಹಾಗಾಗಿ ಮುನ್ನೆಚ್ಚರಿಕಾ ಕ್ರಮಗಳನ್ನು ತೀವ್ರಗತಿಯಲ್ಲಿ ಸಡಿಲಗೊಳಿಸಿದಂತೆ ಕಾಣುತ್ತಿದೆ. 3ನೇ ಅಲೆಯ ಗಂಭೀರತೆ ಏನು ಎಂಬ ಬಗ್ಗೆ ತಜ್ಞರು ಮಾಹಿತಿ ನೀಡಿದ್ದರೂ ಅದನ್ನು ಸರಿಯಾಗಿ ಅನುಷ್ಠಾನಗೊಳಿಸುವ ಕೆಲಸವನ್ನು ಸರ್ಕಾರ ಮಾಡಬೇಕಾಗಿದೆ.
ಕೊರೊನಾ ಕಾಲದಲ್ಲಿ ಜನರು ಅನುಭವಿಸಿದ ಸಂಕಷ್ಟಗಳು ಹೇಳತೀರದು. ದುರಿತ ಸಮಯದಲ್ಲಿ ಅವರಿಗೆ ಆಹಾರದ ಕಿಟ್ ವಿತರಣೆ ಮಾಡಲಾಯಿತಾದರೂ ಎಲ್ಲರಿಗೂ ತಲುಪಿಲ್ಲ ಎನ್ನುವುದು ಅಷ್ಟೇ ಸತ್ಯ. ಯಾವುದೇ ಕೆಲಸವಿಲ್ಲದೆ ಮನೆಯಲ್ಲೇ ಕುಳಿತು ತಿನ್ನುವುದಾದರೆ “ಕುಳಿತು ತಿಂದರೆ ಕುಡಿಕೆ ಹೊನ್ನು ಸಾಲದು” ಎಂಬ ಗಾದೆ ಮಾತು ಅಕ್ಷರಶಃ ಸತ್ಯ.
ರಾಜ್ಯದಲ್ಲಿ ಸರ್ಕಾರ ಕೊರೊನ ಸೋಂಕು ನಿಭಾಯಿಸಲು ಹಲವು ಕ್ರಮಗಳನ್ನು ಅನುಸರಿಸಿದರೂ ಸಚಿವರ ಹೊಂದಾಣಿಕೆ ಕೊರತೆಯಿಂದ ಅದು ಯಶ ಕಾಣಲಿಲ್ಲ. ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ವಯೋಸಹಜ ವಯಸ್ಸಿನ ಕಾರಣದಿಂದ ಅಧಿಕಾರಿಗಳ ಜೊತೆ ಸಭೆ ನಡೆಸಿ ಸೋಂಕು ನಿಯಂತ್ರಣಕ್ಕೆ ಚುರುಕು ಮುಟ್ಟಿಸುವ ಕೆಲಸ ಮಾಡದ ಕಾರಣ ಮತ್ತು ತನ್ನ ಸಂಪುಟ ಸಹದ್ಯೋಗಿಗಳ ನಡುವಿನ ಹೊಂದಾಣಿಕೆ ಕೊರತೆಯಿಂದ ಸಮಸ್ಯೆಗಳನ್ನು ಎದುರಿಸಬೇಕಾಗಿ ಬಂತು.
ಯಡಿಯೂರಪ್ಪ ಅವರನ್ನು ವಯಸ್ಸಿನ ಕಾರಣಕ್ಕಾಗಿ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗೆ ಇಳಿಸಲಾಯಿತು ಎನ್ನುವ ಕಾರಣಗಳನ್ನು ನೀಡಲಾಗುತ್ತಿದ್ದರೂ ಬೇರೆಯ ಕಾರಣಗಳೂ ಇರುವುದು ಸೂರ್ಯ ಸತ್ಯ. ಯಡಿಯೂರಪ್ಪ ಪುತ್ರ ವಿಜಯೇಂದ್ರ ಹಲವು ಸಚಿವರ ಇಲಾಖೆಗಳಲ್ಲಿ ಹಸ್ತಕ್ಷೇಪ ಮಾಡಿದ್ದು, ಇದನ್ನು ಸಂಬಂಧಪಟ್ಪ ಸಚಿವರು ಪಕ್ಷದ ವರಿಷ್ಟರ ಗಮನಕ್ಕೆ ತಂದ ಕಾರಣ ಯಡಿಯೂರಪ್ಪ ಅನಿವಾರ್ಯವಾಗಿ ಗಾದಿಯನ್ನು ಬಿಟ್ಟುಕೊಡಲೇ ಬೇಕಾಯಿತು.
ಈಗ ಬಸವರಾಜ್ ಬೊಮ್ಮಾಯಿ ನೂತನ ಮುಖ್ಯಮಂತ್ರಿಯಾಗಿದ್ದಾರೆ. ರಾಜ್ಯದಲ್ಲಿ ಪ್ರವಾಹ ತಲೆದೋರಿ ಜನರು ಜಲವಾಸಿಗಳಾಗಬೇಕಾಗಿ ಇರಬೇಕಾದ ಸನ್ನಿವೇಶ ಸೃಷ್ಟಿಯಾಗಿದೆ. ಇದರ ನಡುವೆಯೇ ಕೊರೊನ ಮೂರನೇ ಅಲೆಯೂ ಬರುವ ಮುನ್ಸೂಚನೆಗಳನ್ನು ತಜ್ಞರು ನೀಡಿದ್ದಾರೆ. ಇಂತಹ ಸಂದರ್ಭದಲ್ಲಿ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮುಂದೆ ಅನೇಕ ಸವಾಲುಗಳು ಇವೆ.
ಕೊರೊನ ಸೋಂಕು, ಸೋಂಕಿತರಿಗೆ ಬೇಕಾದ ಅಗತ್ಯ ಸೌಲಭ್ಯಗಳು, ಸಾಮಾನ್ಯ ಜನರ ಸಂಕಷ್ಟಗಳಿಗೆ ಶಾಶ್ವತ ಪರಿಹಾರ, ರಾಜ್ಯದ ಅಭಿವೃದ್ದಿ, ಆರ್ಥಿಕ ಚೇತರಿಕೆ, ಈ ಎಲ್ಲಾ ಸಮಸ್ಯೆಗಳನ್ನು ನಿಭಾಯಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಇಲ್ಲದಿದ್ದರೆ ಕೊರೊನ ಸೋಂಕು ಹಲವರ ಜೀವಗಳಿಗೆ ಕಂಟಕವಾಗಲಿದೆ. ಹಾಗಾಗಿ ಅಧಿಕಾರಿ ವರ್ಗ ಕ್ರಿಯಾಶೀಲರಾಗಿ ಕೆಲಸ ಮಾಡಲು ಬಸವರಾಜ ಬೊಮ್ಮಾಯಿ ತನ್ನ ನೂತನ ಸಂಪುಟದ


