ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸಚಿವ ಸಂಪುಟದಲ್ಲಿ ಮೂರು ಮಂದಿಗೆ ಉಪಮುಖ್ಯಮಂತ್ರಿ ಸ್ಥಾನಗಳನ್ನು ನೀಡಲಾಗಿತ್ತು. ಪಕ್ಷದ ಹೈಕಮಾಂಡ್ ಡಿಸಿಎಂ ಬೇಡ ಎಂದು ಹೇಳಿರುವ ಹಿನ್ನೆಲೆಯಲ್ಲಿ ನನ್ನ ಸಂಪುಟದಲ್ಲಿ ಈ ಹುದ್ದೆ ಇರುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ನನ್ನ ಸಂಪುಟದಲ್ಲಿ ಮೂರು ಮಂದಿ ಪರಿಶಿಷ್ಟ ಜಾತಿ, ಒಂದು ಪರಿಶಿಷ್ಟ ಪಂಗಡ, 8 ಮಂದಿ ಲಿಂಗಾಯತ, 7 ಮಂದಿ ಒಕ್ಕಲಿಗ ಮತ್ತು 7 ಮಂದಿ ಹಿಂದುಳಿದ ವರ್ಗದ ಶಾಸಕರಿಗೆ ಸಚಿವ ಸ್ಥಾನವನ್ನು ನೀಡಲಾಗಿದೆ ಮಹಿಳಾ ಖೋಟಾದಡಿ ಒಬ್ಬರಿಗೆ ಸಚಿವ ಸ್ಥಾನಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದು ಎಂದು ಹೇಳಿದರು.
ಅನುಭವ ಮತ್ತು ಹೊಸ ಶಕ್ತಿಯ ಸಮ್ಮಿಳಿತಗೊಂಡಿರುವ ಈ ಸಚಿವ ಸಂಪುಟದೊಂದಿಗೆ ಕೆಲಸ ಮಾಡುತ್ತೇನೆ. ಮುಂದಿನ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಶಾಸಕರಿಗೆ ಅವಕಾಶ ಕಲ್ಪಿಸಲಾಗಿದೆ. ಹೆಚ್ಚು ಅನುಭವ ಹೊಂದಿರುವ ಹಿರಿಯರನ್ನು ಪಕ್ಷ ಸಂಘಟನೆಗೆ ಬಳಸಿಕೊಳ್ಳುವಂತೆ ಸೂಚನೆ ಇದೆ ಎಂದು ತಿಳಿಸಿದರು.
ಸಚಿವ ಸಂಪುಟಕ್ಕೆ 29 ಸಚಿವರನ್ನು ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ. ಪಟ್ಟಿಯನ್ನು ರಾಜ್ಯಪಾಲರಿಗೆ ಕಳಿಸಿದ್ದೇನೆ. ಈ ಪಟ್ಟಿಯಲ್ಲಿ ಬಿ.ವೈ.ವಿಜಯೇಂದ್ರ ಹೆಸರು ಇರುವುದಿಲ್ಲ. ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು ವಿಜಯೇಂದ್ರ ಮತ್ತು ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಚರ್ಚೆ ನಡೆಸಿದ್ದಾರೆ ಎಂದಷ್ಟೇ ಸ್ಪಷ್ಟೀಕರಣ ನೀಡಿದರು.
ಕೋಕ್
ಬೊಮ್ಮಾಯಿ ಸಚಿವ ಸಂಪುಟದಲ್ಲಿ ಅರವಿಂದ ಲಿಂಬಾವಳಿ, ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ, ಪ್ರಾಥಮಿಕ ಶಿಕ್ಷಣ ಸಚಿವರಾಗಿದ್ದ ಎಸ್.ಸುರೇಶ್ ಕುಮಾರ್, ಸಿ.ಪಿ.ಯೋಗೀಶ್ವರ್, ಆರ್.ಶಂಕರ್, ಶ್ರೀಮಂತ ಪಾಟೀಲ್ ಅವರನ್ನು ಕೈಬಿಡಲಾಗಿದೆ.
ನೂತನ ಸಚಿವರ ಪಟ್ಟಿ
ಕೆ.ಎಸ್.ಈಶ್ವರಪ್ಪ, ಶ್ರೀರಾಮುಲು, ಆನಂದ್ ಸಿಂಗ್, ವಿ.ಸೋಮಣ್ಣ, ಜೆ.ಸಿ.ಮಾಧುಸ್ವಾಮಿ, ಉಮೇಶ್ ಕತ್ತಿ, ಮಾಜಿ ಡಿಸಿಎಂ ಅಶ್ವತ್ಥನಾರಾಯಣ, ಅರಗ ಜ್ಞಾನೇಂದ್ರ, ಅಂಗಾರ, ಭೈರತಿ ಬಸವರಾಜು, ಶಿವರಾಮ್ ಹೆಬ್ಬಾರ್, ಡಾ.ಸುಧಾಕರ್, ಗೋಪಾಲಯ್ಯ, ಹಾಲಪ್ಪ ಆಚಾರ್, ಸುನಿಲ್ ಕುಮಾರ್, ಬಿ.ಸಿ.ಪಾಟೀಲ್ ಸೇರಿದಂತೆ 29 ಮಂದಿಗೆ ಈ ಬಾರಿಯ ಸಚಿವ ಸಂಪುಟದಲ್ಲಿ ಅವಕಾಶ ಸಿಕ್ಕಿದೆ.