Thursday, September 19, 2024
Google search engine
Homeಜಿಲ್ಲೆಸ್ಮಾರ್ಟ್‌ಸಿಟಿಗೆ ಪರಿಸರವೂ ಕೂಡ ಅಗತ್ಯ:ಸಂಸದ ಜಿ.ಎಸ್. ಬಸವರಾಜ್

ಸ್ಮಾರ್ಟ್‌ಸಿಟಿಗೆ ಪರಿಸರವೂ ಕೂಡ ಅಗತ್ಯ:ಸಂಸದ ಜಿ.ಎಸ್. ಬಸವರಾಜ್

ತುಮಕೂರು: ನಗರದ ಹನುಮಂತಪುರ ಮುಖ್ಯರಸ್ತೆಯಲ್ಲಿರುವ ಶ್ರೀ ಕೊಲ್ಲಾಪುರದಮ್ಮ ದೇವಸ್ಥಾನದ ಬಳಿ ವಿಶ್ವ ಪರಿಸರ ದಿನದ ಅಂಗವಾಗಿ ಲೋಕಸಭಾ ಸದಸ್ಯರಾದ ಜಿ.ಎಸ್. ಬಸವರಾಜ್, ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ರೆಡ್‌ಕ್ರಾಸ್ ಸಂಸ್ಥೆಯ ರಾಜ್ಯಾಧ್ಯಕ್ಷರಾದ ಎಸ್.ನಾಗಣ್ಣ, ಮಹಾನಗರ ಪಾಲಿಕೆ ಸದಸ್ಯರಾದ ಟಿ.ಕೆ.ನರಸಿಂಹಮೂರ್ತಿ, ಲಲಿತಾರವೀಶ್, ಎ.ಶ್ರೀನಿವಾಸ್ ಮುಖಂಡರಾದ ಜಾಂಗೀರ್ ರವೀಶ್ ಸೇರಿದಂತೆ ಹಲವರು ಸಸಿ ನೆಡುವ ಮೂಲಕ ಸರಳವಾಗಿ ಆಚರಿಸಿದರು. ನಂತರ 23ನೇ ವಾರ್ಡಿನ ಜ್ಯೋತಿಪುರದಲ್ಲಿ ಉಚಿತವಾಗಿ ತರಕಾರಿ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಅಲ್ಲಿನ ನಾಗರೀಕರಿಗೆ ತರಕಾರಿ ವಿತರಿಸಿ ಮಾತನಾಡಿದ ಲೋಕಸಭಾ ಸದಸ್ಯ ಜಿ.ಎಸ್. ಬಸವರಾಜ್ ಅವರು, ನಗರದ 23ನೇ ವಾರ್ಡಿನಲ್ಲಿ ಈ ಭಾಗದ ಪಾಲಿಕೆ ಸದಸ್ಯರುಗಳು ಅತ್ಯುತ್ತಮವಾದ ಸೇವೆ ಸಲ್ಲಿಸುತ್ತಿದ್ದಾರೆ. ಇಂದು ಪರಿಸರ ದಿನ  ಸಕಾಲಕ್ಕೆ ಮಳೆ ಬಂದಿದೆ. ಇಂದು ಪ್ರತಿಯೊಬ್ಬರೂ ಸಸಿ ನೆಟ್ಟು ಪೋಷಿಸುವ ಸಂಕಲ್ಪವನ್ನು ಮಾಡಿದಾಗ ಮಾತ್ರ ಮುಂದಿನ ಪೀಳಿಗೆಗೆ ಪರಿಸರ ಸಂರಕ್ಷಣೆಯಾಗಲಿದೆ ಎಂದು ಹೇಳಿದರು.

ನಗರದ ಸುತ್ತಮುತ್ತಲಿರುವ ಉದ್ಯಾನವನಗಳ ಮದ್ಯದಲ್ಲಿ ಆಲದ ಮರ, ಬೇವಿನ ಮರ, ಅರಳಿಮರ ಸೇರಿದಂತೆ ಇತರೆ ಆಕ್ಸಿಜನ್ ಕೊಡುವಂತಹ ಮರಗಳನ್ನು ನೆಟ್ಟು ಪೋಷಿಸಬೇಕು, ಈ ಗಿಡಗಳು ಒಳ್ಳೆಯ ಔಷಧೀಯ ಗುಣಗಳುಳ್ಳ ಮರಗಳಾಗಿ ಮುಂದೆ ನಮಗೆ ಉತ್ತಮ ಆಕ್ಸಿಜನ್ ನೀಡಲಿವೆ ಎಂದು ಸಲಹೆ ನೀಡಿದರು.

ನಾವು ಈ ಹಿಂದೆ ನಗರದ ವಿವಿಧ ಕಡೆಗಳಲ್ಲಿ ಸುಮಾರು 28 ಸಾವಿರ  ಗಿಡಗಳನ್ನು ಹಾಕಿದ್ದೆವು. ಅದರಲ್ಲಿ 18 ಸಾವಿರ ಗಿಡಗಳು ಮಾತ್ರ ಬೆಳೆದಿವೆ, ಅದೇ ರೀತಿ ಎಲ್ಲೆಲ್ಲಿ ಪಾರ್ಕ್‌ಗಳಿವೆಯೋ  ಅಲ್ಲಿ ಒಂದೊಂದು ಆಲದಮರ, ಬೇವಿನಮರ, ಅರಳೀಮರದಂತಹ ಸಸಿಗಳನ್ನು ನೆಡಬೇಕು, ಸ್ಮಾರ್ಟ್‌ಸಿಟಿಗೆ ಸ್ಯಾನಿಟೇಷನ್ ಎಷ್ಟು ಅಗತ್ಯವೋ ಪರಿಸರವೂ ಕೂಡ ಅಷ್ಟೇ ಅಗತ್ಯ, ಆದ್ದರಿಂದ ಮುಂದಿನ ಪೀಳಿಗೆಗೆ ಪರಿಸರವನ್ನು ಬೆಳೆಸುವ ಕಾರ್ಯ ಪ್ರತಿಯೊಬ್ಬರೂ ಮಾಡಬೇಕೆಂದರು.

ಈ ಭಾಗದ ಪಾಲಿಕೆ ಸದಸ್ಯರಾದ ನರಸಿಂಹಮೂರ್ತಿ, ಮುಖಂಡರಾದ ಜಾಂಗೀರ್ ರವೀಶ್ ಸೇರಿದಂತೆ ಇತರೆ ಎಲ್ಲಾ ಮುಖಂಡರು ರೈತರಿಂದ ತರಕಾರಿ ಖರೀದಿಸಿ ಪ್ರತಿ ಮನೆ ಮನೆಗೂ ಹಂಚುವ ಕಾರ್ಯವನ್ನು ಮಾಡುತ್ತಿರುವುದು ಶ್ಲಾಘನೀಯ, ಇವರ ಸೇವಾಕಾರ್ಯ ಹೀಗೆ ಮುಂದುವರೆಯಲಿದೆ ಎಂದು ಶುಭ ಕೋರಿದರು.

ನಗರ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಈ ಭಾಗದ ಪಾಲಿಕೆ ಸದಸ್ಯರಾದ ಟಿ.ಕೆ.ನರಸಿಂಹಮೂರ್ತಿ, ಮಾಜಿ ಮೇಯರ್ ಲಲಿತ ರವೀಶ್, ಮುಖಂಡರಾದ ಜಾಂಗೀರ್ ರವೀಶ್, ಕೊಲ್ಲಾಪುರದಮ್ಮ ದೇವಸ್ಥಾನದ ಅಧ್ಯಕ್ಷರಾದ ಕುಂಭಣ್ಣ ಸೇರಿದಂತೆ ಇತರೆ ಮುಖಂಡರು ರೈತರಿಂದ ಲಕ್ಷಾಂತರ ರೂ.ಗಳ ತರಕಾರಿ ಖರೀದಿಸಿ ಕೊರೋನ ಸಂಕಷ್ಟದಲ್ಲಿ ರೈತರ ನೆರವಿಗೆ ಧಾವಿಸಿರುವುದಲ್ಲದೇ ಖರೀಧಿಸಿರುವ ತರಕಾರಿಗಳನ್ನು 23ನೇ ವಾರ್ಡ್ ಸೇರಿದಂತೆ ಈ ಭಾಗದ ಪ್ರತಿ ಮನೆ ಮನೆಗೂ ತರಕಾರಿ ವಿತರಿಸಿ ಸಂಕಷ್ಟಕ್ಕೆ ಸ್ಪಂಧಿಸಿರುವ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

ಕೋವಿಡ್-೧೯ ಸಂಕಷ್ಟದಲ್ಲಿ ಈ ರೀತಿಯ ದಾನಧರ್ಮ ಮಾಡಿದರೆ ಬೇರೆಯವರು ಕೂಡ ಮಾದರಿಯಾದರೆ ಸರ್ಕಾರಕ್ಕೆ ಹೊರೆ ಕಡಿಮೆಯಾಗಲಿದೆ. ಬೇರೆ ವಾರ್ಡುಗಳಲ್ಲೂ ಸಹ ಉಳ್ಳಂತಹವರು ಅವರ ಅಕ್ಕ ಪಕ್ಕದ ಮನೆಗಳಿಗೆ ಸಹಾಯ ಮಾಡುವ ಮೂಲಕ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಮಹಾನಗರಪಾಲಿಕೆ ಸದಸ್ಯ ಟಿ.ಕೆ.ನರಸಿಂಹಮೂರ್ತಿ ಮಾತನಾಡಿ, ಕಳೆದ ವರ್ಷವೂ ಕೊರೋನ ಬಂದಾಗಲೂ ಇದೇ ರೀತಿ ಸಹಾಯಕ್ಕೆ ಕೈಜೋಡಿಸಿದ್ದೆವು,. ಈ ಭಾರಿಯೂ ಸಹ ರೈತರಿಂದ ತರಕಾರಿ ಖರೀದಿಸಿ ಅವರ ನೆರವಿಗೆ ಧಾವಿಸಿದ್ದು, ಖರೀದಿಸಿದ ತರಕಾರಿಯನ್ನು ಉಚಿತವಾಗಿ ಪ್ರತಿ ಮನೆ ಮನೆಗೂ ವಿತರಿಸುವ ಸೇವಾ ಕಾರ್ಯವನ್ನು ಮಾಡುತ್ತಿದ್ದೇವೆ. ಇದರ ಜೊತೆಗೆ ಕೊರೋನ ಲಾಕ್‌ಡೌನ್ ವೇಳೆಯಲ್ಲಿ ಪ್ರತಿದಿನ ಬೆಳಿಗ್ಗೆ 1000 ಮಂದಿಗೆ ಉಚಿತ ಉಪಹಾರ ವಿತರಿಸುತ್ತಿದ್ದೇವೆ. ನಮ್ಮ ಸೇವಾ ಕಾರ್ಯ ಇದೇ ರೀತಿ ಮುಂದುವರೆಯಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ರೆಡ್‌ಕ್ರಾಸ್ ಸಂಸ್ಥೆಯ ರಾಜ್ಯಾಧ್ಯಕ್ಷರಾದ ಎಸ್.ನಾಗಣ್ಣ, ಮಹಾನಗರಪಾಲಿಕೆ ಮಾಜಿ ಮೇಯರ್ ಲಲಿತಾ ರವೀಶ್, ಪಾಲಿಕೆ ಸದಸ್ಯರಾದ ಟಿ.ಕೆ.ನರಸಿಂಹಮೂರ್ತಿ, ಎ.ಶ್ರೀನಿವಾಸ್, ಮುಖಂಡರಾದ ಜಾಂಗೀರ್ ರವೀಶ್, ಟಿ.ಎಲ್.ಕುಂಭಯ್ಯ, ಕುಂಭಿನರಸಯ್ಯ, ಎನ್.ಎಸ್.ಶಿವಣ್ಣ, ಲೋಕೇಶ್, ರಕ್ಷಿತ್, ಆನಂದರಾಮು, ವೈ.ಟಿ.ರಾಜೇಂದ್ರ, ಟೂಡಾ ಸದಸ್ಯ ಜಗದೀಶ್, ಆರ್‌ಎಫ್‌ಒಗಳಾದ ಪವಿತ್ರ, ನಟರಾಜು, ಅರಣ್ಯ ಅಧಿಕಾರಿ ಜಿ.ಎಚ್.ಪ್ರಕಾಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular