ಮಹಿಳಾ ಗ್ರಾಮ ಲೆಕ್ಕಾಧಿಕಾರಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕು ಬಿಳಿಕೆರೆ ಗ್ರಾಮದಲ್ಲಿ ನಡೆದಿದೆ.
ಬಿಳಿಕೆರೆ ಹೋಬಳಿಯ ಶ್ಯಾನುಬೋಗನಹಳ್ಳಿ ವಲಯದ ಗ್ರಾಮ ಲೆಕ್ಕಾಧಿಕಾರಿ ಕೃಷ್ಣಾಬಾಯಿ ತುಕಾರಾಂ ಪಡ್ಕೆ (25) ಮೃತ ಮಹಿಳೆ. ಕೃಷ್ಣಾಬಾಯಿ ತುಕಾರಾಂ ಪಡ್ಕೆ ಮೂಲತಃ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಎಸ್‌ಗಳ್ಳಿ ಗ್ರಾಮದವರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೃಷ್ಣಾಬಾಯಿ ಒಂದು ತಿಂಗಳ ಹಿಂದಷ್ಟೆ ಬೆಳಗಾವಿಯ ಸುಬಾಸ್ ಬೋಸ್ಲೆಯವರನ್ನು ವಿವಾಹವಾಗಿದ್ದರು. ಸುಬಾಸ್ ಬೋಸ್ಲೆ ಹನೂರಿನ ಅರಣ್ಯ ಇಲಾಖೆಯ ಫಾರೆಸ್ಟ್ ಗಾರ್ಡ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.
ಕೃಷ್ಣಾಬಾಯಿ, 4 ದಿನಗಳ ಹಿಂದಷ್ಟೆ ಕರ್ತವ್ಯಕ್ಕೆ ಹಾಜರಾಗಿದ್ದು, ಸಹೋದ್ಯೋಗಿ ಗ್ರಾಮ ಲೆಕ್ಕಾಧಿಕಾರಿ ಚೈತ್ರ ಮತ್ತು ಅವರ ತಾಯಿಯೊಂದಿಗೆ ಬಿಳಿಕೆರೆಯ ಎಸ್.ಬಿ.ಐ.ಹಿಂಬಾಗದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು ಎಂದು ಸುದ್ದಿ ಟಿವಿ ವರದಿ ಮಾಡಿದೆ.
ಕೃಷ್ಣಬಾಯಿ ಅವರು ನೇಣು ಬಿಗಿದ ಸ್ಥಿಯಲ್ಲಿ ಪತ್ತೆಯಾಗಿದ್ದಾರೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.